ಜಿಲ್ಲೆ

ವಾಟ್ಸ್​ಅಪ್​ ಆಡಿಯೋ ವೈರಲ್​ ಮಾಡಿದ್ದಕ್ಕಾಗಿ ಪೈಂಟರ್​ ಹತ್ಯೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಪುತ್ತೂರು ಗ್ರಾಮದ ಸುಬ್ರಮಣ್ಯನಗರದಲ್ಲಿ ವಾಟ್ಸ್​ಅಪ್​ನಲ್ಲಿ ಆಡಿಯೋ ವೈರಲ್​ ಮಾಡಿದ್ದಕ್ಕಾಗಿ ಸ್ನೇಹಿತರಿಂದಲೇ ಪೈಂಟರ್​ ಕೊಲೆಗೀಡಾದ ಟನೆ ಮಂಗಳವಾರ ರಾತ್ರಿ ನಡೆದಿದೆ.

ವಿನಯ್​ ದೇವಾಡಿಗ (40) ಹತ್ಯೆಗೊಳಗಾದವರು. ಕೊಲೆ ಆರೋಪಿಗಳಾದ ಕೊಕ್ಕರ್ಣೆ ಗಾಂಧಿನಗರ ನಿವಾಸಿಗಳಾದ ಅಜಿತ್​(28), ಅಕ್ಷೇಂದ್ರ (34) ಹಾಗೂ ಕೊಕ್ಕರ್ಣೆ ಬೆನಗಲ್​ ನಿವಾಸಿ ಪ್ರದಿಪ್​ ಆಚಾರ್ಯ ಎಂಬವರು ಬ್ರಹ್ಮಾವರ ಠಾಣೆಗೆ ಬಂದು ಶರಣಾಗಿದ್ದು, ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಪೈಂಟಿಂಗ್​ ಕೆಲಸ ಮಾಡಿಕೊಂಡಿದ್ದ ವಿನಯ್​ ದೇವಾಡಿಗ, ಮಂಗಳವಾರ ವೈಯಕ್ತಿಕ ಕೆಲಸದ ನಿಮಿತ್ತ ಉಡುಪಿಗೆ ಹೋಗಿ ಸಾಯಂಕಾಲ 6 ಗಂಟೆಗೆ ಮನೆಗೆ ಬಂದು ಕೋಣೆಯಲ್ಲಿ ಮಲಗಿದ್ದರು. ರಾತ್ರಿ ಮೂವರು ಆರೋಪಿಗಳು ವಿನಯ್​ ಮನೆಯ ಒಳಗೆ ನುಗ್ಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಕೋಣೆಯಲ್ಲಿದ್ದ ವಿನಯ್​ ಶಬ್ದದಿಂದ ಎಚ್ಚರಗೊಂಡಾಗ ವಿನಯ್​ ಬಳಿ ಇದ್ದ ಮೊಬೈಲ್​ ಕಿತ್ತುಕೊಂಡು, ಅಜಿತ್​ ಗಟ್ಟಿಯಾಗಿ ಹಿಡಿದುಕೊಂಡಿದ್ದ. ಆಕ್ಷೇಂದ್ರ ಹಾಗೂ ಪ್ರದಿಪ್​ ಮಚ್ಚು ಹಾಗೂ ಚಾಕುವಿನಿಂದ ವಿನಯ್​ ದೇವಾಡಿಗ ತಲೆಯನ್ನು ಕಡಿದು, ಕೊಲೆ ಮಾಡಿದ್ದಾರೆ. ಬಳಿಕ ಆರೋಪಿಗಳು ಸ್ಕೂಟರ್​ ನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈರಲ್​ ಮಾಡಿದ್ದಕ್ಕೆ ಕೊಲೆ

ಆರೋಪಿ ಅಕ್ಷೇಂದ್ರ ಅಲಿಯಾಸ್​ ಅಕ್ಷಯ್​ ಎಂಬಾತನಿಗೆ ಬೇರೊಬ್ಬ ವ್ಯಕ್ತಿ ಬೈದಿರುವ ಆಡಿಯೋವನ್ನು ವಿನಯ್​ ದೇವಾಡಿಗ ಬೇರೆಯವರಿಗೆ ಶೇರ್​ ಮಾಡಿ ವೈರಲ್​ ಮಾಡಿರುವುದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮೂರನೇ ಆರೋಪಿ ಪ್ರದಿಪ್​ ಆಚಾರ್ಯ ಬ್ರಹ್ಮಾವರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ 2016ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಪ್ರಕರಣ ಖುಲಾಸೆಯಾಗಿದೆ. ವಿನಯ್​ ಮಲ್ಪೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ 2020ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಪ್ರಸ್ತುತ ನ್ಯಾಯಾಲಯದ ಜಾಮೀನು ಪಡೆದು ಹೊರಬಂದಿದ್ದ.