ವಿಜಯವಾಣಿ ಸುದ್ದಿಜಾಲ ಧಾರವಾಡ
ಜಗತ್ತಿನ ಬಹುತೇಕ ಶ್ರೇಷ್ಠ ಸಾಧನೆ ಹಿಂದೆ ನೋವು ಸಹಜ. ಬಹುತೇಕ ಕಲಾವಿದರ ಜೀವನದಲ್ಲಿ ಸಹ ನೋವು ಇರುತ್ತದೆ ಎಂದು ಹಿರೇಮಲ್ಲೂರ ಈಶ್ವರನ್ ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡಕರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಕಲಾವಿದ ಬಿ. ಮಾರುತಿ ದತ್ತಿ ನಿಮಿತ್ತ ಆಯೋಜಿಸಿದ್ದ ಚಿತ್ತಾರ ಚೇತನ ಪ್ರಶಸ್ತಿ ಪ್ರದಾನ ಹಾಗೂ ಮೂರು ದಿನಗಳ ಚಿತ್ರಕಲಾ ಪ್ರದರ್ಶನ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಿ. ಮಾರುತಿ ಅವರಿಗೆ ಬಂದ ನೋವುಗಳನ್ನು ತಮ್ಮ ಸೃಜನಶೀಲತೆಗೆ ಇಂಧನವಾಗಿ ಬಳಸಿಕೊಂಡು ಕಲಾ ಲೋಕದಲ್ಲಿ ಬೆಳೆದರು. ಹಾಗೆಯೇ ತಮಗೆ ತೊಂದರೆ ಕೊಟ್ಟವರ ಬಾಣಗಳನ್ನು ಬ್ರಶ್ ಮಾಡಿಕೊಂಡು ಕಲೆ ಮೂಲಕ ಉತ್ತರ ನೀಡಿದ ಹೃದಯವಂತ ಕಲಾವಿದರು. ತಮ್ಮೊಂದಿಗೆ ಕಲಾ ಬಳಗ ಬೆಳೆಸುತ್ತಾ ಬಂದಿದ್ದಾರೆ. ನಗರದಲ್ಲಿ ಕಲಾ ಲೋಕ ಶ್ರೀಮಂತಗೊಳಿಸುವಲ್ಲಿ ಶ್ರಮಿಸಿದ್ದಾರೆ ಎಂದರು.
ಅರವಿಂದಕುಮಾರ ಮಾತನಾಡಿ, ವಿದೇಶದಲ್ಲಿ ಕಲಾವಿದರು ಸಂತೃಪ್ತ ಜೀವನ ಸಾಗಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಬೇರೆ ಅಭಿರುಚಿ ಇದೆ. ಇದರಿಂದ ನಿರುದ್ಯೋಗ ಸಮಸ್ಯೆ, ಆರೋಗ್ಯ ಸಮಸ್ಯೆ ಬೆಳೆಯುತ್ತಿದೆ ಎಂದರು.
ಬಿ. ಜಂಬಯ್ಯ ಮಾತನಾಡಿದರು. ಸಂತೋಷ ಪತ್ತಾರ ಅವರಿಗೆ ಚಿತ್ತಾರ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ದತ್ತಿ ದಾನಿ ದೀಪಕ ಬಿ., ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಡಾ. ಧನವಂತ ಹಾಜವಗೋಳ, ಎಸ್.ಕೆ ಪತ್ತಾರ, ಬಸವರಾಜ ಕುರಿ, ರಾಜು ಬೇಡಗೌಡರ, ಕುಮಾರ ಕಾಟೇನಹಳ್ಳಿ, ಸುಪ್ರಿಯಾ ದೀಪಕ, ಬಾಣದ ನಂದಕುಮಾರ, ಪ್ರಶಾಂತ ಮಾಂಡ್ರೆ, ಪ್ರಿಯಾಂಕಾ ಕಾಳೆ, ವಿಶ್ವೇಶ್ವರ ಪಟಗಾರ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಡಾ. ಧನವಂತ ಹಾಜವಗೊಳ ವಂದಿಸಿದರು.