ಜಿಲ್ಲೆ

ವಿಕ್ಟೋರಿಯಾದಲ್ಲಿ ‘ನೋವು ನಿರ್ವಹಣಾ ಕ್ಲಿನಿಕ್’

ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ವಿಕ್ಟೋರಿಯಾ ಆವರಣದಲ್ಲಿ ನೂತನ ‘ನೋವು ನಿರ್ವಹಣಾ ಕ್ಲಿನಿಕ್’ ಆರಂಭಿಸಲಾಗಿದ್ದು, ಇದೇ ವೇಳೆ 2ನೇ ಅತ್ಯಾಧುನಿಕ ಎಂಆರ್‌ಐ ಯಂತ್ರವನ್ನೂ ಅಳವಡಿಸಲಾಗಿದೆ.

ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ನೋವು ನಿರ್ವಹಣಾ ಕ್ಲಿನಿಕ್, ಎಂಆರ್‌ಐ ಯಂತ್ರ, ಸಂಸ್ಥೆಯ ನೂತನ ಕ್ಯಾಂಟೀನ್, ಆಟದ ಮೈದಾನದ ಲೈಟ್ ಸೇರಿ ವಿವಿಧ ಸೌಲಭ್ಯಗಳಿಗೆ ಚಾಲನೆ ನೀಡಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ನೋವು ನಿರ್ವಹಣಾ ಕ್ಲಿನಿಕ್ ಆರಂಭಿಸಲಾಗಿದ್ದು, ಇದರಲ್ಲಿ ಕ್ಯಾನ್ಸರ್‌ನೋವು, ಮಸ್‌ಕ್ಯುಲೋಸ್ಕೆಲಿಟಲ್ ನೋವು, ಬೆನ್ನುಮೂಳೆ ಸಂಬಂಧಿತ ನೋವು ಮತ್ತು ಕೀಲು ನೋವಿನಂತಹ ತೀವ್ರವಾದ ಮತ್ತು ದೀರ್ಘಕಾಲದ ನೋವುಗಳಿಗೆ ಆರೈಕೆ ಮಾಡಲಾಗುವುದು. ಪ್ರಾಯೋಗಿಕವಾಗಿ ಆರಂಭವಾಗಿರುವ ಈ ಕ್ಲಿನಿಕ್ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಕಾರ್ಯನಿರ್ವಹಿಸಲಿದ್ದು, ಆಸ್ಪತ್ರೆ ಅರಿವಳಿಕೆ ವಿಭಾಗದಿಂದ ನಿರ್ವಹಿಸಲ್ಪಡುತ್ತದೆ.

ಅತ್ಯಾಧುನಿಕ ವ್ಯವಸ್ಥೆಯ ಎಂಆರ್‌ಐ ಯಂತ್ರ: ರಾಜ್ಯದಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ದಿನದ 24 ಗಂಟೆ ಹಾಗೂ ವರ್ಷದ 365 ದಿನವೂ ಕಾರ್ಯನಿರ್ವಹಿಸುವ ಏಕೈಕ ಎಂಆರ್‌ಐ ಕೇಂದ್ರವೆಂದರೆ ಅದು ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಎಂಆರ್‌ಐ ಯಂತ್ರ. ಮೊದಲಿಗೆ ಕೇವಲ ಒಂದು ಯಂತ್ರವಿತ್ತು. ಇದೀಗ ರೋಗಿಗಳ ಅನುಕೂಲಕ್ಕಾಗಿ ಬಿಎಂಸಿಆರ್‌ಐ ಹೊಸದಾಗಿ ಮತ್ತೊಂದು ಎಂಆರ್‌ಐ ಯಂತ್ರವನ್ನು ಅಳವಡಿಸಿದೆ. ಯುನೈಟೆಡ್ ಇಮೇಜಿಂಗ್ ಯುಎಂಆರ್, 570 ವೈಡ್ ಬೋರ್ 1.5 ಟೆಸ್ಲಾ ಎಂಆರ್‌ಐ ಯಂತ್ರವು ಹಲವಾರು ಸುಧಾರಿತ ಹಾರ್ಡ್ ವೇರ್‌ಮತ್ತು ಸಾಫ್ಟ್ ವೇರ್‌ಗಳನ್ನು ಹೊಂದಿದೆ.