ಕಾರವಾರ: ಸೆಪ್ಟೆಂಬರ್ 27 ರಂದು ಬೆಳಗ್ಗೆ 10.30 ಕ್ಕೆ ನಗರದ ಬಾಡ ಶಿವಾಜಿ ಬಿ.ಎಡ್. ಕಾಲೇಜ್ ಅವರಣದಲ್ಲಿ ಪಹರೆ ಸ್ವಚ್ಛತೆಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಎಂದು ಸಂಸ್ಥೆಯ ಗೌರವ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಿರಿಯ ಐಎಎಸ್ ಅಧಿಕಾರಿ ಉಜ್ವಲ ಕುಮಾರ ಘೋಷ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ.ದಿಲೀಶ್ ಶಶಿ, ಎಸ್ ಪಿ ದೀಪನ್ ಎಂ.ಎನ್. ಸಿಸಿಎಫ್ ಟಿ.ಹೀರಾಲಾಲ್ ಇರುವರು ಎಂದು ಮಾಹಿತಿ ನೀಡಿದರು.
2003 ರಲ್ಲಿ ಪಹರೆ ವೇದಿಕೆ ಪ್ರಾರಂಭವಾಗಿತ್ತು. ವಿವಿಧ ಹೋರಾಟ ನಡೆಸಲಾಗಿತ್ತು. 2015 ರ ಜನವರಿಯಲ್ಲಿ ಪಹರೆ ಪ್ರತಿ ಶನಿವಾರ ಸ್ವಚ್ಛತೆಯ ಕಾರ್ಯ ಆರಂಭಿಸಿತು. ಇಲ್ಲಿವರೆಗೆ 560 ವಾರ ಸ್ವಚ್ಛತೆ ಮಾಡಲಾಗಿದೆ.
ವಕೀಲರು, ವೈದ್ಯರು, ವ್ಯಾಪಾರಸ್ಥರು, ಸರ್ಕಾರಿ ನೌಕರರು, ಬ್ಯಾಂಕ್ ಅಧಿಕಾರಿಗಳು, ಉದ್ಯಮಿಗಳು ಇರುವುದು ವಿಶೇಷ ಎಂದರು.
ಜಾಗೃತಿಗಾಗಿ ಪಹರೆಯಿಂದ ಪಾದಯಾತ್ರೆ ಮಾಡಲಾಗಿದೆ. ಕಾರವಾರ ಬಿಟ್ಟು ಬೇರೆ ಸ್ಥಳಗಳಲ್ಲಿಯೂ ಪಾದಯಾತ್ರೆ ಮಾಡಲಾಗಿದೆ ಎಂದರು.
ವೇದಿಕೆಯ ಮಾಜಿ ಗೌರವ ಅಧ್ಯಕ್ಷೆ ಪ್ರಕಾಶ ಕೌರ್, ಜಿ.ಡಿ ಮನೋಜೆ, ಕೆ.ಡಿ.ಪೆಡ್ನೇಕರ್, ಖೈರುನ್ನಿಸ್ಸಾ ಶೇಖ್, ಶಿವಾನಂದ ಶಾನಭಾಗ ಸುದ್ದಿಗೋಷ್ಠಿಯಲ್ಲಿದ್ದರು.
500 ಲೋಡ್ ಗೂ ಹೆಚ್ಚು ಕಸ
ಪಹರೆ ಅಧ್ಯಕ್ಷ ನಾಗರಾಜ ನಾಯ್ಕ ಮಾತನಾಡಿ, ಇಡೀ ದೇಶದಲ್ಲಿಯೇ ಇಷ್ಟು ವರ್ಷ ನಿರಂತರ ಸ್ವಚ್ಛತೆ ಮಾಡಿದ ಬೇರೊಬ್ಬರಿಲ್ಲ ಎಂದರು. ಕನಿಷ್ಠ 500 ಲೋಡ್ ಗೂ ಅಧಿಕ ಪ್ಲಾಸ್ಟಿಕ್ ಹೆಕ್ಕಿದ್ದೇವೆ ಎಂಬುದನ್ನು ಹೇಳಲು ಹೆಮ್ಮೆಯಾಗುತ್ತದೆ. ದಶಮಾನೋತ್ಸವ ಅಂಗವಾಗಿ ಮಾಜಿ ಗೌರವ ಅಧ್ಯಕ್ಷರಿಗೆ, ಪೌರ ಕಾರ್ಮಿಕರಿಗೆ ಸನ್ಮಾನ, ಗಿಡಗಳ ವಿತರಣೆ ಮಾಡಲಿದ್ದೇವೆ ಎಂದರು.