ಮುದ್ದೇಬಿಹಾಳ: ಪಹಣಿಯ 11ನೇ ಕಾಲಂನಲ್ಲಿ ವಕ್ಫ್ ಆಸ್ತಿ, ಕರ್ನಾಟಕ ಸರ್ಕಾರ ಎಂದು ನಮೂದಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕುಂಟೋಜಿ, ಬಿದರಕುಂದಿ ಗ್ರಾಮಗಳ ನೂರಾರು ರೈತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಆ ಶಬ್ದಗಳನ್ನು ಪಹಣಿಯಿಂದ ತೆಗೆದು ಹಾಕಲು ಸರ್ಕಾರ ಮತ್ತು ತಾಲೂಕಾಡಳಿತಕ್ಕೆ ಎರಡು ದಿನಗಳ ಗಡುವು ನೀಡಿದರು.
ಕುಂಟೋಜಿಯ ರೈತರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಿದರಕುಂದಿ ರೈತರೊಂದಿಗೆ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತ ಕಾಲ್ನಡಿಗೆ ಮೂಲಕ ಪ್ರಮುಖ ರಸ್ತೆ, ವೃತ್ತಗಳ ಮಾರ್ಗವಾಗಿ ಸಂಚರಿಸಿ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಸಲ್ಲಿಸಿದರು.
ಸರ್ಕಾರ, ತಾಲೂಕಾಡಳಿತ ಸ್ಪಂದಿಸದಿದ್ದರೆ ನ.6 ರಿಂದ ತಾಲೂಕು ಆಡಳಿತ ಸೌಧ ಆವರಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದರು.
ಬಹಿರಂಗ ಸಭೆಯಲ್ಲಿ ಕುಂಟೋಜಿ ರೈತರಾದ ಮಾಜಿ ಸೈನಿಕ ನಾಗಲಿಂಗಯ್ಯ ಮಠ, ಬಿ.ಎಸ್.ಹೂಗಾರ, ಸಿದ್ದು ಹೆಬ್ಬಾಳ, ಸಂಗಣ್ಣ ಬಾಗೇವಾಡಿ ಇನ್ನಿತರರು ಮಾತನಾಡಿ, ಕುಂಟೋಜಿ, ಬಿದರಕುಂದಿ ಗ್ರಾಮ ವ್ಯಾಪ್ತಿಯ 29 ರೈತರ ಅಂದಾಜು 380 ಎಕರೆ ಜಮೀನು ಸ್ವಂತ ಮಾಲ್ಕಿ ಕಬ್ಜಾ ವಹಿವಾಟಿನ ಜಮೀನುಗಳಾಗಿವೆ. ಇವುಗಳಲ್ಲಿ ಕೆಲವನ್ನು ಖರೀದಿ ಮಾಡಿದ್ದು ಇನ್ನು ಕೆಲವು ಪಿತ್ರಾರ್ಜಿತ ಆಸ್ತಿಯಾಗಿವೆ. ಈ ಜಮೀನುಗಳ ಸರ್ವೇ ನಂಬರ್‌ಗಳ ಪಹಣಿಯಲ್ಲಿ ವಕ್ಫ್ ಆಸ್ತಿ, ಕರ್ನಾಟಕ ಸರ್ಕಾರ ಎಂದು 2019ರ ಜನವರಿಯಲ್ಲಿ ಸೇರಿಸಲಾಗಿದೆ ಎಂದು ಚಿತ್ರಣ ಬಿಡಿಸಿಟ್ಟರು.
ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಮತ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದ ಶಾಸಕರು ಈಗ ಕಾಣೆಯಾದಂತಿದೆ. ನಮ್ಮ ಆಸ್ತಿಯಲ್ಲಿ ವಕ್ಫ್ ಹೆಸರು ಬಂದಿದೆ. ನಮ್ಮ ಪರವಾಗಿ ನಿಲ್ಲಬೇಕಾದ ಶಾಸಕರು ಸದನದಲ್ಲಾದರೂ ಈ ಬಗ್ಗೆ ಧ್ವನಿ ಎತ್ತಿ ರೈತರ ಪರ ತಾವಿದ್ದೇವೆ ಅನ್ನೋದನ್ನು ಸಾಬೀತುಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತರಾದ ಗುರುಲಿಂಗಪ್ಪ ಸುಲ್ಲಳ್ಳಿ, ಗುರುಪಾದ ಹೆಬ್ಬಾಳ, ಸಂತೋಷ ಬಿರಾದಾರ, ಬಸಯ್ಯ ಮಠ, ರಮೇಶ ಉಗರಗೋಳ, ಬಸಲಿಂಗಪ್ಪ ಕುಂಬಾರ, ಸಂಗಪ್ಪ ಕುಂಬಾರ, ಚನ್ನಬಸಪ್ಪ ಹಡಪದ, ನಹಿಂಪಾಷಾ ಇನಾಮದಾರ, ಯೂನಸ್‌ಪಾಷಾ ಇನಾಮದಾರ, ಚಂದ್ರಶೇಖರ ಕೋಳೂರ, ಗೋಲಪ್ಪ ಕುಂಟೋಜಿ, ಶಿವಾನಂದ ಕುಂಟೋಜಿ, ಶಿವನಗೌಡ ಲೋಕಾಪುರ ಇತರರಿದ್ದರು.