ಜಿಲ್ಲೆ

ಪಹಣಿ ದೋಷ ಸರಿಪಡಿಸಿ, ಅಧಿಕಾರಿಗಳಿಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಸೂಚನೆ ದೇವನಹಳ್ಳಿಯಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟನೆ

Bengaluru Rural

ದೇವನಹಳ್ಳಿ: ಸರ್ಕಾರ ರೈತರಿಂದ ಖರೀದಿಸುವ ರಾಗಿಗೆ ಉತ್ತಮ ಬೆಲೆ ನೀಡುತ್ತಿದ್ದರೂ ಅದರ ಪ್ರಯೋಜನ ಬಹಳಷ್ಟು ರೈತರಿಗೆ ದೊರೆಯಲು ವಿಧಿಸಿರುವ ನಿಬಂಧನೆಗಳಿಂದ ಸೌಲಭ್ಯ ಪಡೆಯಲು ತೊಂದರೆಯಾಗುತ್ತಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಗೋದಾಮಿನಲ್ಲಿ ಗುರುವಾರ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಅಧಿಕಾರಿಗಳ ಲೋಪದಿಂದ ಬಹಳಷ್ಟು ರೈತರ ಜಮೀನಿನ ಪಹಣಿಯ ಬೆಳೆ ಕಾಲಂನಲ್ಲಿ ರಾಗಿಬೆಳೆ ಎಂದು ನಮೂದಿಸಿಲ್ಲ. ಅಂತಹ ಪಹಣಿ ನೀಡುವ ರೈತರ ರಾಗಿಯನ್ನು ಕೇಂದ್ರದಲ್ಲಿ ಖರೀದಿಸುವುದಿಲ್ಲ. ಹಾಗಾಗಿ ರೈತರಿಂದ ಖರೀದಿಗೆ ನಿಗದಿಪಡಿಸಿರುವ ದಿನಾಂಕ ವಿಸ್ತಿರಿಸಿ ರೈತರ ಪಹಣಿಗಳಲ್ಲಿ ರಾಗಿಬೆಳೆ ಎಂದು ತಿದ್ದುಪಡಿ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಖಾಸಗಿ ವ್ಯಾಪಾರಿಗಳು ರೈತರಿಂದ ರಾಗಿ ಖರೀದಿಸುವಾಗ ತೂಕದಲ್ಲಿ ಮತ್ತು ಬೆಲೆಯಲ್ಲಿ ಮೋಸ ಮಾಡುತ್ತಾರೆ ಎಂಬ ದೂರುಗಳಿವೆ. ಆ ರೀತಿ ಇಲ್ಲಿ ಆಗಬಾರದು. ರೈತರಿಂದ ಖರೀದಿಸಿದ ರಾಗಿಗೆ ಅವರ ಖಾತೆಗೆ ಹಣ ಜಮಾ ಮಾಡಿ ಎಂದು ಹೇಳಿದರು.

ಆಹಾರ ನಾಗರಿಕ ಸರಬರಾಜು ಇಲಾಖೆಯ ಶಿರಸ್ತೇದಾರ್ ರಂಗನಾಥ ಮಾತನಾಡಿ, ಸರ್ಕಾರ ಪ್ರತಿ ಕ್ವಿಂಟಾಲ್ ರಾಗಿಗೆ 3,150 ರೂ. ನಿಗದಿಪಡಿಸಿದೆ. ಇದರ ಜತೆಗೆ ಪ್ರತಿ ಚೀಲಕ್ಕೆ 12 ರೂಪಾಯಿ ನೀಡಲಾಗುವುದು. ಖರೀದಿ ಕೇಂದ್ರಕ್ಕೆ ತರುವ ರಾಗಿ ಶೇ.11 ಗಿಂತಲೂ ಹೆಚ್ಚಿನ ತೇವಾಂಶವಿರಬಾರದು. ರೈತರು ಕಂಪ್ಯೂಟರ್ ಪ್ರೂಟ್ ತಂತ್ರಾಂಶ ದತ್ತಾಂಶದಲ್ಲಿ ಹೆಸರು ನೊಂದಾಯಿಸಿ ಗುರುತಿನ ಚೀಟಿ ಪಡೆದಿರಬೇಕು ಎಂದರು.

ಇಲಾಖೆಯಲ್ಲಿ ಈವರೆಗೂ 1,870 ರೈತರು ನೊಂದಾಯಿಸಿಕೊಂಡಿದ್ದಾರೆ. ಫೆ.29 ರವರೆಗೂ ನೋಂದಣಿಗೆ ಕಾಲಾವಕಾಶವಿದೆ. ರಾಗಿ ಖರೀದಿಸಲು ಮಾರ್ಚ್ 31 ಅಂತಿಮ ದಿನವಾಗಿರುತ್ತದೆ. ರೈತರು ಆಧಾರ್‌ಕಾರ್ಡ್, ರಾಗಿ ಬೆಳೆ ಎಂದು ನಮೋದಾಗಿರುವ ಪಹಣಿ, ಬ್ಯಾಂಕ್ ಪಾಸ್‌ಬುಕ್ ಖಾತೆ ಸಂಖ್ಯೆ ನಕಲು ಪ್ರತಿ ತರಬೇಕು. ವಿವರಗಳಿಗೆ ದೂರವಾಣಿ ಸಂಖ್ಯೆ 9880156366 ಸಂಖ್ಯೆಗೆ ಕರೆ ಮಾಡಬಹುದು ಎಂದು ಹೇಳಿದರು.

ಪಡಿತರ ಚೀಟಿ ಹೊಂದಿರುವವರು ಕೆವೈಸಿ ಲಿಂಕ್ ಮಾಡಿಸುವುದು ಕಡ್ಡಾಯ. ಆಧಾರ್ ಲಿಂಕ್ ಮಾಡಿಸದೆ ಇರುವವರು ಸಮೀಪದ ಪಡಿತರ ವಿತರಣಾ ಕೇಂದ್ರದಲ್ಲಿ ಕೆವೈಸಿ ಲಿಂಕ್ ಮಾಡಿಸಬೇಕು ಎಂದು ಹೇಳಿದರು.

ಎಪಿಎಂಸಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಉಪಾಧ್ಯಕ್ಷ ಸುಧಾಕರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ತಾಪಂ ಸದಸ್ಯರಾದ ಕಾರಹಳ್ಳಿ ಶ್ರೀನಿವಾಸ್, ಎಸ್.ಮಹೇಶ್, ಪುರಸಭೆ ಮಾಜಿ ಸದಸ್ಯ ವಿ.ಗೋಪಾಲ್, ಗ್ರಾಪಂ ಸದಸ್ಯ ಬಿ.ಕೆ.ನಾರಾಯಣಸ್ವಾಮಿ, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಆರ್.ಮುನೇಗೌಡ, ತಾಲೂಕು ಕೃಷಿ ಸಹಾಯಕ ನಿರ್ದೇಶಕ ರೇವಣಪ್ಪ ಮನಗೋಳಿ, ರಾಗಿ ಖರೀದಿ ಕೇಂದ್ರದ ಅಧಿಕಾರಿ ಚಿಕ್ಕಬಸವಯ್ಯ ಮತ್ತಿತರರಿದ್ದರು.