ಜಿಲ್ಲೆ

ತರಬೇತಿ ಕೇಂದ್ರಗಳಿಂದ ಯಕ್ಷಗಾನ ಸಮೃದ್ಧ : ಎಡನೀರು ಶ್ರೀ ಆಶೀರ್ವಚನ

ಬದಿಯಡ್ಕ: ಶಿಸ್ತುಬದ್ಧವಾಗಿ ತರಬೇತಿ ನೀಡುವ ಯಕ್ಷಗಾನ ತರಬೇತಿ ಕೇಂದ್ರಗಳು ಹಲವಾರು ಮುಮ್ಮೇಳ, ಹಿಮ್ಮೇಳ ಕಲಾವಿದರನ್ನು ಸಮಾಜಕ್ಕೆ ಧಾರೆ ಎರೆದಿವೆ. ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರ ಎರಡು ದಶಕಗಳಲ್ಲಿ ಸೃಷ್ಟಿಸಿರುವ ಅನೇಕ ಕಲಾವಿದರು ಯಕ್ಷ ರಂಗದಲ್ಲಿ ಮಿಂಚಿದ್ದಾರೆ.ಯಕ್ಷಗಾನ ಕಲೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು ಈ ಪೀಳಿಗೆ ಜವಾಬ್ದಾರಿ. ಪರಂಪರೆಗೆ ಬದ್ಧವಾಗಿ ತರಬೇತಿ ನೀಡುತ್ತಿರುವ ಪೆರ್ಲದ ತರಬೇತಿ ಕೇಂದ್ರ ಯಕ್ಷಗಾನ ಕಲೆಯನ್ನು ಸಮೃದ್ಧವಾಗಿ ಬೆಳೆಸಿದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 20ನೇ ವಾರ್ಷಿಕೋತ್ಸವ ಅಂಗವಾಗಿ ಕೇಂದ್ರದ ಸಭಾಂಗಣದಲ್ಲಿ ಭಾನುವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭ, ಅಭಿನಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಬೆಂಗಳೂರು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಶಿವರಾಮ ಶೆಟ್ಟಿ ತಲ್ಲೂರು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಸ್ಥಾಪಕ, ನಾಟ್ಯಗುರು ಸಬ್ಬಣಕೋಡಿ ರಾಮಭಟ್ ಅವರ ಯಕ್ಷಗಾನ ತಿರುಗಾಟದ 50ನೇ ವಷರ್ದ ಸವಿನೆನಪಿನಲ್ಲಿ ಯಕ್ಷಗಾನ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕರು, ಯಕ್ಷಗಾನ ಸಂಘಗಳನ್ನು ಅಭಿನಂದಿಸಲಾಯಿತು.

ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಯಕ್ಷಗಾನ ಗುರು ಸಂಜೀವ ಸುವರ್ಣ, ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ, ಜೇನುಗೂಡು, ಪುತ್ತೂರಿನ ರೇವತಿ ರೈ ನಡುಬೈಲು, ಸತ್ಯ ಶಾಂತಾ ಪ್ರತಿಷ್ಠಾನ ಶಾಂತಾ ಕುಂಟಿನಿ, ಪ್ರಸಿದ್ಧ ಮದ್ದಳೆಗಾರ ಶಂಕರ ಕಾಮತ್ ಚೇವಾರು, ಪ್ರಸಿದ್ಧ ಯಕ್ಷಗಾನ ಕಲಾವಿದ ದೇವಕಾನ ಶ್ರೀಕೃಷ್ಣ ಭಟ್ ಉಪಸ್ಥಿತರಿದ್ದರು. ಕಲಾಪೋಷಕ ಡಾ.ವಿಷ್ಣುಭಟ್ ಬರೆಕರೆ ನೇತೃತ್ವದಲ್ಲಿ ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥಿಸಲಾಯಿತು. ಸಬ್ಬಣಕೋಡಿ ರಾಮಭಟ್ ಸ್ವಾಗತಿಸಿದರು. ಗಣೇಶ್ ಬೆಂಗಳೂರು ವಂದಿಸಿದರು. ಜ್ಯೋತ್ಸ್ನಾ ಕಡಂದೇಲು ನಿರೂಪಿಸಿದರು.