ತುಮಕೂರು : ಜಿಲ್ಲೆಯಲ್ಲಿ 10842 ಪಡಿತರ ಚೀಟಿ ರದ್ದುಪಡಿಸಲಾಗಿದ್ದು, ಈ ಪೈಕಿ 960 ಕಾರ್ಡ್‌ಗಳು ಸರ್ಕಾರಿ ನೌಕರರು ಹೊಂದಿದ್ದರೂ ಎಂಬ ಆಘಾತಕಾರಿ ಅಂಶ ಆಹಾರ ಇಲಾಖೆ ಅಂಕಿ, ಅಂಶದಲ್ಲಿ ಬಯಲಾಗಿದೆ.
960 ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರ 4117 ಕಾರ್ಡ್‌ಗಳು, ಕುಟುಂಬದ ಆದಾಯ 1.20 ಲಕ್ಷಕ್ಕಿಂತ ಹೆಚ್ಚಿರುವ 936 ಕಾರ್ಡ್‌ಗಳು, 3 ಹೆಕ್ಟೇರ್‌ಗಿಂತ ಹೆಚ್ಚು ಭೂಮಿ ಹೊಂದಿರುವ 2532 ಹಾಗೂ ಆಹಾರ ನಿರೀಕ್ಷಕರು ಪತ್ತೆ ಹಚ್ಚಿರುವ 2297 ಪಡಿತರ ರದ್ದುಪಡಿಸಲಾಗಿದೆ. ಚಿಕ್ಕನಾಯಕನಹಳ್ಳಿ 666, ಗುಬ್ಬಿ 857, ಕೊರಟಗೆರೆ 743, ಕುಣಿಗಲ್ 1228, ಮಧುಗಿರಿ 930, ಪಾವಗಡ 1084, ಶಿರಾ 1379, ತಿಪಟೂರು 847, ತುಮಕೂರು ನಗರದ 1311, ಗ್ರಾಮಾಂತರ 928 ಹಾಗೂ ತುರುವೇಕೆರೆ ತಾಲೂಕಿನ 869 ಒಟ್ಟು 10482 ಕಾರ್ಡ್ ರದ್ದಾಗಿವೆ.
ಜಿಲ್ಲೆಯಲ್ಲಿ ಮೃತಪಟ್ಟಿರುವ 48333 ಸದಸ್ಯರ ಹೆಸರುಗಳನ್ನು ಕಾರ್ಡ್‌ಗಳಿಂದ ತೆಗೆದುಹಾಕಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 717334 ಪಡಿತರ ಚೀಟಿಗಳು ಉಳಿದಿವೆ. ಸಾಕಷ್ಟು ಎಚ್ಚರಿಕೆಯ ನಡುವೆಯೂ ಇನ್ನೂ ಸಾಕಷ್ಟು ಅನರ್ಹರು ಬಿಪಿಎಲ್ ಕಾರ್ಡ್ ವಾಪಸ್ ನೀಡದೆ ವಂಚಿಸುತ್ತಿರುವುದು ಇದೆ.
ಪಡಿತರ ಚೀಟಿ ಬಯಸಿ 20 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 10 ಸಾವಿರಕ್ಕೂ ಹೆಚ್ಚು ಅರ್ಜಿಗಳ ವಿಲೇವಾರಿ ಇನ್ನೂ ಬಾಕಿ ಇದೆ. ಸಲ್ಲಿಕೆಯಾದ ಅರ್ಜಿಗಳ ಪೈಕಿ 3618 ಸ್ವೀಕೃತವಾಗಿದ್ದು 5365 ಅರ್ಜಿಗಳು ತಿರಸ್ಕೃತಗೊಂಡಿವೆ. ಪಡಿತರ ವಿತರಣೆಯಲ್ಲಿ ಲೋಪವೆಸಗಿದ ಹಿನ್ನೆಲೆಯಲ್ಲಿ ಕುಣಿಗಲ್ ತಾಲೂಕಿನ ಕೊತ್ತಗೆರೆ, ತೆರೆದಕುಪ್ಪೆಯಲ್ಲಿ ಎರಡು ನ್ಯಾಯಬೆಲೆ ಅಂಗಡಿ ಅಮಾನತುಗೊಳಿಸಲಾಗಿದೆ. ಗುಬ್ಬಿ ತಾಲೂಕಿನ ಕುಂಟರಾಮನಹಳ್ಳಿಯಲ್ಲಿ 1 ಅಂಗಡಿ ಲೈಸೆನ್ಸ್ ರದ್ದುಗೊಳಿಸಲಾಗಿದೆ.
ಸರ್ಕಾರ ನಿಗದಿಪಡಿಸಿದ ಮಾನದಂಡ ಉಲ್ಲಂಘಿಸಿ ಬಿಪಿಎಲ್ ಕಾರ್ಡ್ ಹೊಂದಿರುವವರು ವಾಪಸ್ ನೀಡಲು ಸೂಚನೆ ನೀಡಲಾಗಿದೆ. ಜನವರಿ ಅಂತಯದವರೆಗೆ ಜಿಲ್ಲೆಯಲ್ಲಿ 10842 ಪಡಿತರ ಚೀಟಿ ರದ್ದುಪಡಿಸಲಾಗಿದೆ. ಶ್ರೀನಿವಾಸಯ್ಯ ಜಂಟಿ ನಿರ್ದೇಶಕ, ಆಹಾರ ಇಲಾಖೆ