ಯಾದವ ಪೂಜಾರಿ ಕೋರ್ಯ ಅವರ ಭತ್ತದ ಗದ್ದೆಯಲ್ಲಿ ಮೀಟರ್ ತಳಿಯ ಭತ್ತ ನೇಜಿ ನಾಟಿ ಕಾರ್ಯಕ್ರಮ ನೀರಪಾದೆ ದ.ಕ.ಜಿ.ಪ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಮಕ್ಕಳಿಂದ ನೆರವೇರಿತು. 
ಜಿಲ್ಲೆ

ನೀರಪಾದೆ ಶಾಲೆ ಮಕ್ಕಳಿಂದ ನೇಜಿ ನಾಟಿ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ತಾಲೂಕು ಕೃಷಿ ಇಲಾಖೆ, ನೀರಪಾದೆ ಹಿ.ಪ್ರಾ.ಶಾಲೆ ಹಾಗೂ ಸ್ಥಳೀಯ ಉತ್ಸಾಹಿ ಯುವ ಕೃಷಿಕರ ನೆರವಿನೊಂದಿಗೆ ಶನಿವಾರ ಬಂಟ್ವಾಳ ತಾಲೂಕು ಪಾಣೆಮಂಗಳೂರು ಹೋಬಳಿ ಬಾಳ್ತಿಲ ಗ್ರಾಮದ ಕೋರ್ಯ ಮಹಮ್ಮಾಯಿ ದೈವಸ್ಥಾನದ ಮುಂಭಾಗದ ಯಾದವ ಪೂಜಾರಿ ಕೋರ್ಯ ಅವರ ಭತ್ತದ ಗದ್ದೆಯಲ್ಲಿ ಮೀಟರ್ ತಳಿಯ ಭತ್ತ ನೇಜಿ ನಾಟಿ ಕಾರ್ಯಕ್ರಮ ನೀರಪಾದೆ ದ.ಕ.ಜಿ.ಪ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಮಕ್ಕಳಿಂದ ನೆರವೇರಿತು.

ಶಾಲೆಯ ಪಠ್ಯೇತರ ಚಟುವಟಿಕೆ ಕೃಷಿ ಶಿಕ್ಷಣ ಅಂಗವಾಗಿ ಜರುಗಿದ ಈ ಕಾರ್ಯಕ್ರಮವನ್ನು ನೀರಪಾದೆ ಹಿ.ಪ್ರಾ.ಶಾಲೆ ಹಾಗೂ ಸ್ಥಳೀಯ ಉತ್ಸಾಹಿ ಯುವ ಕೃಷಿಕರ ನೆರವಿನೊಂದಿಗೆ ಜಂಟಿಯಾಗಿ ಆಯೋಜಿಸಲಾಗಿತ್ತು.

ಬಂಟ್ವಾಳ ಕೃಷಿ ಇಲಾಖೆ ಅಧಿಕಾರಿ ನಂದನ್ ಶೆಣೈ ಶಾಲಾ ಮಕ್ಕಳಿಗೆ ಭತ್ತ ಕೃಷಿಯ ಮಹತ್ವ ಹಾಗೂ ನೇಜಿ ನಾಟಿ ಕಾರ್ಯದ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಮುಖ್ಯಶಿಕ್ಷಕಿ ಜಯಶ್ರೀ ಎಸ್.ಭತ್ತ ಬೇಸಾಯದಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಕುರಿತು ವಿವರಿಸಿದರು. ಕೃಷಿಕ ಯಾದವ ಪೂಜಾರಿ ಕೋರ್ಯ ಭತ್ತ ಹಾಗೂ ಅಕ್ಕಿಯ ಅಳತೆ ಗೋಲುಗಳಾದ ಪಾವು, ಸೇರು, ಕಲಸೆ, ಮುಡಿ ಕುರಿತು ಮಾಹಿತಿ ನೀಡಿದರು. ವಿನ್ಸೆಂಟ್ ಲಸ್ರಾದೋ ಭತ್ತ ಕೃಷಿಯ ಉಳಿವಿನ ಜಾಗೃತಿ ಮೂಡಿಸಿದರು. ರೈತ ಮುಖಂಡ ಪ್ರೇಮನಾಥ ಶೆಟ್ಟಿ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಯೋಗಿಕ ಕೃಷಿ ಮಾಹಿತಿಯ ಅಗತ್ಯದ ಕುರಿತು ಮಾಹಿತಿ ನೀಡಿದರು. ಬಾಳ್ತಿಲ ಕೃಷಿ ಸಖಿ ಗುಲಾಬಿ ಭತ್ತದ ಬೀಜೋಪಚಾರದ ಮಾಹಿತಿ ನೀಡಿದರು. ಲಲಿತ ಪಾರಂಪರಿಕ ಸಂದಿ ಹಾಡುವ ಮೂಲಕ ಹುರಿದುಂಬಿಸಿದರು.

ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ನಯನ ಸತೀಶ್, ನೀರಪಾದೆ ಶಾಲಾ ಶಿಕ್ಷಕರಾದ ಜಗದೀಶ್, ರೇಷ್ಮಾ, ಭಾರ್ಗವಿ, ಕೃಷಿಕರಾದ ದಾಮೋದರ ಕೋರ್ಯ, ಸುರೇಂದ್ರ ಕೋರ್ಯ, ಕೂಸಪ್ಪ ಪೂಜಾರಿ ಮೊಟ್ಟಿಕಲ್, ನಿತಿನ್ ಕೋರ್ಯ, ಉಮ್ಮರ್ ಫಾರೂಕ್, ರಶೀದ್, ಅಬ್ದುಲ್ ರಹಿಮಾನ್, ಭರತ್ ಕೋರ್ಯ, ನಾರಾಯಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿಚಂದ್ರ ಕೋರ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ಸಂತೋಷ್ ಕುಮಾರ್ ಸ್ವಾಗತಿಸಿದರು. ಸುಮಾರು 40 ಮಂದಿ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.