ಗಂಗಾವತಿ: ಅಂಜನಾದ್ರಿ ಕ್ಷೇತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುವುದರ ಜತೆಗೆ ಭತ್ತದ ನಾಡು ರಫ್ತು ಕೇಂದ್ರವಾಗುವ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹೇಳಿದರು.
ತಾಪಂ ಮಂಥನ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾದಿನಾಚರಣೆ ಉದ್ಘಾಟಿಸಿ ಮಾತನಾಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಧ್ಯಮ ಕ್ಷೇತ್ರದ ಮೇಲೆ ಅವಲಂಬನೆಯಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಹರಿಸುವ ರೀತಿಯಲ್ಲಿ ವರದಿ ನೀಡಬೇಕಿದೆ ಎಂದರು.
ಅಂಜನಾದ್ರಿ, ಭತ್ತ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ತಾಲೂಕು ವಿಶಿಷ್ಟ ರೀತಿಯಲ್ಲಿ ಸಾಧನೆ ಮಾಡಿದ್ದು, ಇದಕ್ಕೆ ಮಾಧ್ಯಮ ಕಾರ್ಯ ಪ್ರಮುಖ. ವಸ್ತು ನಿಷ್ಠ ವರದಿಗಾರಿಕೆ ಪ್ರತಿಯೊಬ್ಬರಲ್ಲೂ ಬರಬೇಕಿದ್ದು, ಸ್ಥಳೀಯ ವರದಿಗಾರರು ರಾಜ್ಯಮಟ್ಟದಲ್ಲಿ ಗಮನಸೆಳೆಯುವಂತಾಗಬೇಕಿದೆ ಎಂದು ಹೇಳಿದರು.
ಹಿರಿಯ ವೈದ್ಯ ಡಾ.ಜಿ.ಚಂದ್ರಪ್ಪ ಮಾತನಾಡಿ, ವಾಸ್ತವಿಕತೆ ಗ್ರಹಿಸಿ, ಸ್ಪಷ್ಟ ಮಾಹಿತಿಯೊಂದಿಗೆ ವರದಿ ಸುದ್ದಿ ಬರೆಯಬೇಕಿದ್ದು, ಜ್ವಲಂತ ಸಮಸ್ಯೆಗಳತ್ತ ಗಮನಹರಿಸುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ‘ವಿಜಯವಾಣಿ’ ಪತ್ರಿಕೆ ವಿತರಕ ಪಂಪಾಪತಿ ಕುಂಬಾರ, ಶರತ್, ವಿವಿಧ ಪತ್ರಿಕೆ ವಿತರಕರಾದ ಚನ್ನಬಸವ, ಕಾಶೀನಾಥ, ಮುರ್ತುಜಾರನ್ನು ಸನ್ಮಾನಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಇಂಗಳಗಿ ನಾಗರಾಜ್ ಪ್ರಾಸ್ತಾವಿಕ ಮಾತನಾಡಿದರು.
ಹಿರಿಯ ವೈದ್ಯ ಡಾ.ಎ.ಸೋಮರಾಜು, ಉದ್ಯಮಿ ಜೋಗದ ನಾರಾಯಣಪ್ಪ ನಾಯಕ, ಲಯನ್ಸ್ ಕ್ಲಬ್ ತಾಲೂಕು ಅಧ್ಯಕ್ಷ ಡಾ.ಕೆ.ಅಮರೇಶ ಪಾಟೀಲ್, ಸಂಘದ ಉಪಾಧ್ಯಕ್ಷರಾದ ಜೋಗದ ಕೃಷ್ಣಪ್ಪ ನಾಯಕ, ಹರೀಶ್ ಕುಲ್ಕರ್ಣಿ, ಕಾರ್ಯದರ್ಶಿ ಬಿ.ದೇವರಾಜ್ ಇತರರಿದ್ದರು.