ಬಸವಾಪಟ್ಟಣ: ಹೋಬಳಿಯಾದ್ಯಂತ ಭಾನುವಾರ ಸುರಿದ ಬಿರುಸಿನ ಮಳೆಗೆ ಸಾವಿರಾರು ಎಕರೆ ಭತ್ತ ಬೆಳೆಯುವ ಪ್ರದೇಶ ನೀರಿನಲ್ಲಿ ಮುಳುಗಡೆಯಾಗಿದೆ.
ಸೋಮವಾರ ಮಧ್ಯಾಹ್ನ ಸತತ ಒಂದೂವರೆ ತಾಸು ಬಿರುಸಿನ ಮಳೆಯಾಗಿದೆ. ಬಸವಾಪಟ್ಟಣದ ಸಿಹಿ ನೀರು ಕೆರೆ, ದಾಗಿನಕಟ್ಟೆಯ ಕೆರೆ, ಕಂಸಾಗರದ ಕೆರೆ ತುಂಬಿ ಕೋಡಿ ಬಿದ್ದು ಹರಿಯುತ್ತಿವೆ. ಅಚ್ಚುಕಟ್ಟು ಪ್ರದೇಶದ ಸಾವಿರಾರು ಎಕರೆ ಭತ್ತದ ಪ್ರದೇಶ ನೀರಿನಲ್ಲಿ ಮುಳುಗಡೆಯಾಗಿದೆ.
ಚಿರಡೋಣಿಯಿಂದ ಕಬ್ಬಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಕಣಿವೆ ಬಿಳಿಚಿಯಿಂದ ಕಬ್ಬಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸೇತುವೆಯ ಮೇಲೆ ಹಳ್ಳದ ಅಪಾರ ಹರಿಯುತ್ತಿರುವುದರಿಂದ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಮಳೆಯಿಂದಾಗಿ ಹೊಲಗದ್ದೆಗಳು ಜಲಾವೃತಗೊಂಡಿವೆ. ಮಳೆಗಾಳಿಗೆ ಬಸವಾಪಟ್ಟಣದ ಹೊನ್ನಾಳಿ ಕಡೆಯ ತಿರುವಿನಲ್ಲಿ ದೊಡ್ಡದಾದ ನೀಲಗಿರಿ ಮರ ಹಾಗೂ ಎರಡು ವಿದ್ಯುತ್ ಕಂಬಗಳು ಭಾನುವಾರ ರಾತ್ರಿ ನೆಲಕ್ಕೆ ಉರುಳಿವೆ. ಜೋಳದಾಳ್ ಬಿಟ್ಟರೆ ಬಸವಾಪಟ್ಟಣದಲ್ಲಿ ಅತಿ ಹೆಚ್ಚು 51.2 ಮಿ. ಮೀ. ಮಳೆಯಾಗಿದೆ.
ಬಸವಾಪಟ್ಟಣದಲ್ಲಿ 2 ಮನೆ, ಶೃಂಗಾರ ಬಾಗ್ ತಾಂಡಾದಲ್ಲಿ 1, ಬೆಳಗೆರೆಯಲ್ಲಿ 2, ದೊಡ್ಡಘಟ್ಟದಲ್ಲಿ 1, ಚಿರಡೋಣಿಯಲ್ಲಿ 1 ಮನೆಯ ಗೋಡೆಗಳು ಭಾಗಶಃ ಕುಸಿದಿವೆ ಎಂದು ಉಪ ತಹಸೀಲ್ದಾರ್ ನೀಲಮ್ಮ ತಿಳಿಸಿದ್ದಾರೆ.
ಸೂಳೆಕೆರೆ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆ ತೆನೆ ಕಟ್ಟುವ ಹಂತದಲ್ಲಿ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದ್ದು, ಸರ್ಕಾರ ಕೂಡಲೇ ಸಮೀಕ್ಷೆ ನಡೆಸಿ ಬೆಳೆ ಪರಿಹಾರ ನೀಡುವಂತೆ ಈ ಭಾಗದ ರೈತರು ಒತ್ತಾಯಿಸಿದ್ದಾರೆ.