ಜಿಲ್ಲೆ

ಕರಾವಳಿ ಪ್ಯಾಕೇಜ್ ಮುಂದುವರಿಕೆ ಚಿಂತನೆ

Dakshina Kannada

ಮಂಗಳೂರು: ಭತ್ತದ ಬೆಳೆಗೆ ಕರಾವಳಿ ಪ್ಯಾಕೇಜ್ ಹೆಸರಿನಲ್ಲಿ ಹೆಕ್ಟೇರ್‌ಗೆ 7,500 ರೂ. ನೀಡುವ ಯೋಜನೆಯನ್ನು ಒಂದು ವರ್ಷ ಕೊಟ್ಟು ನಿಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ವಿಚಾರ ಗಮನಕ್ಕೆ ತಂದಿದ್ದು, ಯೋಜನೆ ಮುಂದುವರಿಸುವ ಸಾಧ್ಯತೆ ಪರಿಶೀಲಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ ಕುಂಜತ್ತಬೈಲ್‌ನಲ್ಲಿ ಹಡಿಲು ಭೂಮಿಯಲ್ಲಿ ಭತ್ತ ಕೃಷಿ ನೇಜಿ ನಾಟಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಹಡಿಲು ಭೂಮಿ ಉಳುಮೆ ಮಾಡಿ ಭತ್ತ ಕೃಷಿ ಮಾಡುವುದರಿಂದ ಉತ್ಪನ್ನ ಹೆಚ್ಚಾಗಿ ರಾಷ್ಟ್ರದ ಆದಾಯ ಹೆಚ್ಚಾಗುವುದರ ಜತೆಗೆ ರೈತರ ಆದಾಯವೂ ದ್ವಿಗುಣವಾಗಲಿದೆ. ಕೃಷಿಕ ಸಂತುಷ್ಟನಾಗಿದ್ದರೆ ಮಾತ್ರ ರಾಷ್ಟ್ರ ಸಮೃದ್ಧವಾಗಲು ಸಾಧ್ಯ. ಹಡಿಲು ಭೂಮಿ ಕೃಷಿಗೆ, ಸಚಿವನಾಗಿ ಎಲ್ಲ ರೀತಿಯ ಬೆಂಬಲ ನೀಡುತ್ತಿದ್ದೇನೆ. ಸರ್ಕಾರ ಮಟ್ಟದಲ್ಲಿ ಏನು ಅನುಕೂಲ ಮಾಡಿಕೊಡಬೇಕೋ ಅದನ್ನು ಮಾಡಲಾಗುವುದು ಎಂದರು.

ರೈತರಿಗೆ ಟಿಲ್ಲರ್: ಕೇಂದ್ರ ಸರ್ಕಾರದ ಫಾರ್ಮ್ ಬ್ಯಾಂಕಿಂಗ್ ಯೋಜನೆಯಡಿ ಬಂದಿರುವ 150-200 ಟಿಲ್ಲರ್‌ಗಳನ್ನು ಜಿಲ್ಲಾವಾರು ಹಂಚಿಕೆ ಮಾಡಲಾಗಿದೆ. ಗ್ರಾಮದಲ್ಲಿ 20 ಜನ ರೈತರು ಸೇರಿ ಒಂದು ಕೃಷಿ ಸಹಕಾರಿ ಸಂಘ ಸ್ಥಾಪನೆ ಮಾಡಿ 2 ಲಕ್ಷ ರೂ. ಹಾಕಿದರೆ, ಸರ್ಕಾರದಿಂದ 8 ಲಕ್ಷ ರೂ. ಅನುದಾನವಾಗಿ ನೀಡಲಾಗುತ್ತದೆ. ಅದರಲ್ಲಿ ಟ್ರ್ಯಾಕ್ಟರ್, ಟಿಲ್ಲರ್ ಮೊದಲಾದ ಉಳುಮೆಗೆ ಸಂಬಂಧಿಸಿದ ಯಂತ್ರಗಳನ್ನು ಪಡೆಯಬಹುದಾಗಿದೆ. ಗ್ರಾಮದ 20 ಕುಟುಂಬಗಳು ಇದನ್ನು ಬಳಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕುಚ್ಚಲಕ್ಕಿ ಬೆಳೆಯಲು ಬೆಂಬಲ: ಪಡಿತರ ಇಲಾಖೆ ಮೂಲಕ ಕುಚ್ಚಲಕ್ಕಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಬೆಳೆಯುವ ಎಂಒ4 ಕೆಂಪಕ್ಕಿಯನ್ನು ಸರ್ಕಾರವೇ ಖರೀದಿ ಮಾಡಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ. ಇಲ್ಲೇ ಭತ್ತ ಬೆಳೆಸಿ, ಖರೀದಿಗೆ ಅನುಕೂಲ ಮಾಡಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ಸಿಕ್ಕರೆ ಜಿಲ್ಲೆಯ ಭತ್ತದ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಡಾ.ವೈ.ಭರತ್ ಶೆಟ್ಟಿ, ಕಾರ್ಪೋರೇಟರ್‌ಗಳಾದ ಲೋಹಿತ್ ಅಮೀನ್, ಕಿರಣ್ ಕುಮಾರ್, ಸುಮಂಗಲಾ, ಶರತ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ, ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ಅಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ ಮೊದಲಾದವರು ಉಪಸ್ಥಿತರಿದ್ದರು.

ಹಡಿಲು ಭೂಮಿಯಲ್ಲಿ ಕೃಷಿ ತೊಡಕು ನಿವಾರಣೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಮಾಡದೆ ಹಡಿಲು ಬಿದ್ದಿರುವ ಸುಮಾರು 8 ಸಾವಿರ ಎಕರೆ ಭೂಮಿಯಿದ್ದು, ಅಲ್ಲಿ ಕೃಷಿ ಮಾಡಲು ಇರುವ ಕಾನೂನು ತೊಡಕು ನಿವಾರಿಸಿ, ಸಹಕಾರ ಸಂಸ್ಥೆಗಳ ಸಹಾಯ ಪಡೆದು ಸೂಕ್ತ ಕೃಷಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಪೂರ್ವ ಸಿದ್ಧತೆ ಕುರಿತು ಶುಕ್ರವಾರ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದ ಇತರ ಜಿಲ್ಲೆಗಳಿಗಿಂತ ಕರಾವಳಿ ಭೌಗೋಳಿಕವಾಗಿ ಭಿನ್ನವಾಗಿದ್ದು, ಇಲ್ಲಿನ ಕೃಷಿಯೂ ಭಿನ್ನವಾಗಿದೆ. ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸಮಗ್ರ ವರದಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಹಡಿಲು ಬಿದ್ದಿರುವ ಸುಮಾರು 3 ಸಾವಿರ ಎಕರೆ ಭೂಮಿಯಲ್ಲಿ ಕೃಷಿ ಮಾಡಲು ಆಯಾ ಕ್ಷೇತ್ರದ ಶಾಸಕರು ಮುಂದಾಗಿರುವುದು ಶ್ಲಾಘನೀಯ ಎಂದರು.

ಶಾಸಕರಾದ ರಾಜೇಶ್ ನಾಯ್ಕ, ಉಮಾನಾಥ ಕೋಟ್ಯಾನ್, ಡಾ.ವೈ.ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿ.ಪಂ ಸಿಇಒ ಡಾ.ಕುಮಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ಮತ್ತಿತರರಿದ್ದರು.

ಜಿಲ್ಲೆಯಲ್ಲಿ ನವೆಂಬರ್ ತಿಂಗಳಿಂದ ಪಡಿತರ ಅಂಗಡಿಗಳಲ್ಲಿ ಕುಚ್ಚಲಕ್ಕಿ ವಿತರಿಸಲು ನಿರ್ಧರಿಸಲಾಗಿದೆ. ಇದಕ್ಕೆ ಸುಮಾರು 12 ಲಕ್ಷ ಕ್ವಿಂಟಾಲ್ ಅಕ್ಕಿಯ ಅವಶ್ಯಕತೆಯಿದ್ದು, ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಗುರುತು ಮಾಡಲಾಗಿರುವ ಹಡಿಲು ಭೂಮಿಯಿಂದ ಹೆಕ್ಟೇರ್ ಒಂದಕ್ಕೆ 15 ಕ್ವಿಂಟಾಲ್ ಅಕ್ಕಿಯಂತೆ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಕ್ವಿಂಟಾಲ್ ಅಕ್ಕಿ ಬೆಳೆಯುವ ಗುರಿ ಹೊಂದಲಾಗಿದೆ.

- ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ