ಮಂಗಳೂರು : ಮಂಗಳೂರು ತಾಲೂಕಿನಲ್ಲಿ ಮುಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಮಳೆಯಾಶ್ರಿತ ಭತ್ತವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೆಳೆ ವಿಮೆ ಯೋಜನೆಯಡಿ ನೋಂದಣಿಗಾಗಿ ಅಧಿಸೂಚಿಸಲಾಗಿದೆ. ನೋಂದಣಿಗೆ ಆಗಸ್ಟ್ 16 ಕೊನೆಯ ದಿನ.ರೈತರು ಪಹಣಿ ಪತ್ರ, ಖಾತೆ ಪಾಸ್ ಪುಸ್ತಕ, ಕಂದಾಯ ರಶೀದಿ ಮತ್ತು ಆಧಾರ್ ಸಂಖ್ಯೆಗಳನ್ನು ಒದಗಿಸಿ ಸ್ಥಳೀಯ ಸಾಲ ನೀಡುವ ವಾಣಿಜ್ಯ ಅಥವಾ ಗ್ರಾಮೀಣ ಮಟ್ಟದ ವ್ಯವಸಾಯ ಸೇವಾ ಸಹಕಾರ ಸಂಘಗಳು, ಸಾರ್ವಜನಿಕ ಸೇವಾ ಕೇಂದ್ರ, ವಿಮಾಸಂಸ್ಥೆಗಳನ್ನು ಸಂಪರ್ಕಿಸಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬೇಕು.
ಅಧಿಸೂಚಿತ ಘಟಕದಲ್ಲಿ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಕಂಡು ಬಂದಲ್ಲಿ ಮುಂಚಿತವಾಗಿ ವಿಮೆ ಮಾಡಿದ ರೈತರಿಗೆ ಶೇ.25 ರಷ್ಟು ಬೆಳೆ ನಷ್ಟ ಪರಿಹಾರ ದೊರೆಯಲಿದೆ. ಕಟಾವಿನ ನಂತರದ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭ (14 ದಿನಗಳ ಒಳಗೆ) ಚಂಡಮಾರುತ, ಅಕಾಲಿಕ ಮಳೆಯಿಂದ ಬೆಳೆ ನಾಶವಾದಲ್ಲಿ ವೈಯಕ್ತಿಕವಾಗಿ ಪರಿಹಾರ ದೊರೆಯಲಿದೆ. ರೈತರು ವಿಮಾ, ಆರ್ಥಿಕ ಸಂಸ್ಥೆ ಅಥವಾ ಕೃಷಿ ತೋಟಗಾರಿಕಾ ಇಲಾಖೆ 72 ಗಂಟೆಗಳ ಒಳಗಾಗಿ ಬೆಳೆ ಹಾನಿ ವಿವರದ ಮಾಹಿತಿ ಒದಗಿಸಬೇಕು. ಮಳೆ ಅಭಾವ ಅಥವಾ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಅಧಿಸೂಚಿತ ಘಟಕದಲ್ಲಿ 75ರಷ್ಟು ಬಿತ್ತನೆ ಾಗದಿದ್ದಲ್ಲಿ ವಿಮೆ ಮಾಡಿಸಿದ ರೈತರಿಗೆ ವಿಮಾ ,ಒತ್ತದ ಶೇ. 25 ರಷ್ಟು ಪರಿಹಾರ ದೊರೆಯಲಿದೆ.
ಬೆಳೆ ಸಾಲ ಪಡೆದ ರೈತರು ಬೆಳೆ ವಿಮೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಕೊನೆಯ ದಿನಾಂಕದ ಒಂದು ವಾರದ ಮೊದಲು ಈ ಬಗ್ಗೆ ಮುಚ್ಚಳಿಕೆ ಪತ್ರ ನೀಡಿ ಬೆಳೆ ವಿಮೆಯಿಂದ ಕೈ ಬಿಡಲು ಕೋರಲಾಗುವುದು ಎಂದು ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
........................