ಜಿಲ್ಲೆ

ಆರಂಭವಾಗದ ಭತ್ತ, ರಾಗಿ ಖರೀದಿ ಪ್ರಕ್ರಿಯೆ

ಅವಿನಾಶ್ ಜೈನಹಳ್ಳಿ

ಅವಿನಾಶ್ ಜೈನಹಳ್ಳಿ ಮೈಸೂರು

ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿಗೆ ನೋಂದಣಿ ಆರಂಭವಾಗಿ ತಿಂಗಳಾದರೂ, ಖರೀದಿ ಆರಂಭವಾಗಿಲ್ಲ. ಪರಿಣಾಮ ರೈತರು ತಮ್ಮ ಬೆಳೆಗಳನ್ನು ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಮಾರಾಟಮಾಡುವ ಪರಿಸ್ಥಿತಿ ಎದುರಾಗಿದೆ.

ಕೇಂದ್ರ ಸರ್ಕಾರದಿಂದ 2024-25ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿ ಮಾಡುವ ಸಲುವಾಗಿ ಡಿಸೆಂಬರ್ ಕೊನೆಯ ವಾರದಿಂದ ನೋಂದಣಿ ಪ್ರಕ್ರಿಯೆ ಆರಂಭಿಸಿ, ಮುಕ್ತಾಯದ ಹಂತಕ್ಕೆ ಬಂದಿದೆ. ಜತೆಗೆ ಡಿಸೆಂಬರ್‌ನಿಂದಲೇ ಖರೀದಿ ಕೇಂದ್ರ ಆರಂಭಿಸಲಾಗಿದ್ದರೂ, ಈವರೆಗೆ ರೈತರಿಂದ ಭತ್ತ ಮತ್ತು ರಾಗಿಯನ್ನು ಖರೀದಿಸಿಲ್ಲ. ಪರಿಣಾಮ ತಾವು ಬೆಳೆದ ಫಸಲನ್ನು ಸಂಗ್ರಹ ಮಾಡಿಕೊಳ್ಳಲು ಸ್ಥಳಾವಕಾಶದ ಕೊರತೆಯಿಂದ ಹಾಗೂ ಸಾಲಗಾರರ ಹಾವಳಿಯಿಂದ ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ 47,50,040 ಕ್ವಿಂಟಾಲ್ ಭತ್ತ ಉತ್ಪಾದನೆಯಾಗಿದ್ದರೆ, 9,79,700 ಕ್ವಿಂಟಾಲ್ ರಾಗಿಯನ್ನು ಬೆಳೆಯಲಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿಗಾಗಿ ಉತ್ತಮ ಭತ್ತ ಪ್ರತಿ ಕ್ವಿಂಟಾಲ್‌ಗೆ 2320 ರೂ. 2ನೇ ದರ್ಜೆ ಭತ್ತಕ್ಕೆ 2300 ಹಾಗೂ ರಾಗಿಗೆ 4300 ರೂ. ನಿಗದಿಪಡಿಸಲಾಗಿದೆ. ಜಿಲ್ಲೆಯ 16 ಕಡೆಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಹೀಗಿದ್ದರೂ, ಖರೀದಿ ಪ್ರಕ್ರಿಯೆ ಆರಂಭಿಸುವಲ್ಲಿ ವಿಳಂಬವಾಗಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

32 ಸಾವಿರ ರೈತರಿಂದ ನೋಂದಣಿ

ಪ್ರಸಕ್ತ ಸಾಲಿನಲ್ಲಿ ಭತ್ತ ಮಾರಾಟ ಮಾಡಲು ಜಿಲ್ಲೆಯಿಂದ 832 ರೈತರು 28,511.05 ಕ್ವಿಂಟಲ್ ಮಾರಾಟ ಮಾಡಲು ನೋಂದಾಯಿಸಿಕೊಂಡಿದ್ದಾರೆ. ಹಾಗೆಯೇ 31,395 ಮಂದಿ ರೈತರು 4,71,845.05 ಕ್ವಿಂಟಾಲ್ ರಾಗಿ ಮಾರಾಟ ಮಾಡಲು ನೋಂದಣಿ ಮಾಡಿಸಿದ್ದಾರೆ. ಈ ಪ್ರಕ್ರಿಯೆ ಇನ್ನು ಪ್ರಗತಿಯಲ್ಲಿದ್ದು, ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಸದ್ಯ ಒಂದು ವಾರದಿಂದ ನೋಂದಣಿ ಮಾಡಿಕೊಂಡಿರುವ ರೈತರಿಂದ ಭತ್ತ ಖರೀದಿಸಲು ಆಹ್ವಾನ ನೀಡಲಾಗಿದ್ದರೂ ಕೆಲ ರೈತರು ಈಗಾಗಲೇ ಭತ್ತವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ.

ಸಮಸ್ಯೆಯಲ್ಲಿ ರೈತರು: ಬಡ್ಡಿ ಸಾಲ ಮಾಡಿ ಹತ್ತಾರು ಎಕರೆಯಲ್ಲಿ ಭತ್ತ, ರಾಗಿ ಬೆಳೆದ ರೈತರು ಈಗಾಗಲೇ ಕಟಾವು ಮಾಡಿ ಎರಡು ತಿಂಗಳಾಗಿದೆ. ನೂರಾರು ಕ್ವಿಂಟಾಲ್‌ಗಟ್ಟಲೆ ಬೆಳೆದ ರೈತರು ಫಸಲನ್ನು ಸಂಗ್ರಹಿಸಿಟ್ಟಿಕೊಳ್ಳಲು ಗೋದಾಮು ಸೌಲಭ್ಯ ಇಲ್ಲದಿರುವುದು ಹಾಗೂ ಸಾಲಗಾರರ ಬಾಧೆಯಿಂದ ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿರುವುದು ಹೆಚ್ಚಾಗಿದೆ. ಪರಿಣಾಮ ಜಿಲ್ಲೆಯಲ್ಲಿ ಶೇ.50ರಷ್ಟು ರೈತರು ರಾಗಿ ಮತ್ತು ಭತ್ತವನ್ನು ಈಗಾಗಲೇ ದಲ್ಲಾಳಿಗಳಿಗೆ ಮಾರಾಟ ಮಾಡಿರುವುದು ಕಂಡುಬಂದಿದೆ.

ದಲ್ಲಾಳಿಗಳಿಗೆ ವರದಾನ

ಸರ್ಕಾರ ಇನ್ನೂ ಖರೀದಿ ಕೇಂದ್ರ ಆರಂಭಿಸದೇ ಇರುವುದು ದಲ್ಲಾಳಿಗಳಿಗೆ ವರದಾನವಾಗಿದೆ. ಭತ್ತ ಮತ್ತು ರಾಗಿ ಖರೀದಿ ಮಾಡದೇ ಇರುವುದರಿಂದ ರೈತರು ದಲ್ಲಾಳಿಗಳತ್ತ ಮುಖ ಮಾಡುತ್ತಿದ್ದಾರೆ. ಇದನ್ನೇ ಬಂಡವಳ ಮಾಡಿಕೊಂಡಿರುವ ದಲ್ಲಾಳಿಗಳು ಸಾವಿರಾರು ಕ್ವಿಂಟಾಲ್ ಭತ್ತ ಮತ್ತು ರಾಗಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಜತೆಗೆ ರೈತರ ಪಹಣಿ ಪಡೆದು ಅವರ ಹೆಸರಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿಯನ್ನು ಮಾರಾಟ ಮಾಡಿ ಹೆಚ್ಚು ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಆರೋಪ

ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ಭತ್ತಕ್ಕೆ 2320ರಿಂದ 2300ರೂ. ಇದ್ದರೆ ದಲ್ಲಾಳಿಗಳು ರೈತರಿಂದ ಕೇವಲ 1800ರಿಂದ 2000 ರೂ.ಗೆ ಖರೀದಿಸುತ್ತಿದ್ದಾರೆ. ಹಾಗೆಯೇ ರಾಗಿಗೆ 4300 ರೂ. ನಿಗದಿ ಮಾಡಿದ್ದರೆ, ದಲ್ಲಾಳಿಗಳು 2500 ರಿಂದ 2700 ರೂ.ಗೆ ಖರೀದಿಸುತ್ತಿದ್ದಾರೆ. ಬಳಿಕ ತಮಗೆ ಪರಿಚಯಸ್ಥ ರೈತರ ಪಹಣಿ ಪಡೆದು ಅವರ ಹೆಸರಿನಲ್ಲಿ ಆರ್‌ಎಂಸಿಗೆ ರಾಗಿ ಮತ್ತು ಭತ್ತವನ್ನು ಮಾರಾಟ ಮಾಡಿ ಹೆಚ್ಚು ಹಣ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸರ್ಕಾರದ ನಿರ್ಲಕ್ಷೃ ಧೋರಣೆಯಿಂದ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಡೆ ರಾಗಿ ಮತ್ತು ಭತ್ತ ಕಟಾವು ಕಾರ್ಯ ಪೂರ್ಣಗೊಂಡಿರುವುದಲ್ಲದೇ ಒಕ್ಕಣೆ ಕೆಸವೂ ಮುಗಿದಿದೆ. ಹೊಲ, ಗದ್ದೆಗಳಿಂದ ಫಸಲನ್ನು ಮನೆಗೆ ಕೊಂಡೊಯ್ದು ತಿಂಗಳಾದರೂ ಸರ್ಕಾರ ತೆರೆದಿರುವ ಕೇಂದ್ರಗಳಲ್ಲಿ ಖರೀದಿ ಆರಂಭವಾಗಿಲ್ಲ. ಪರಿಣಾಮ ಫಸಲನ್ನು ಸಂಗ್ರಹಿಸಿಡಲು ಜಾಗದ ಕೊರತೆ, ಸಾಲಗಾರರ ಹಾವಳಿಯಿಂದ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಒಂದು ವಾರದಿಂದ ನೋಂದಣಿ ಮಾಡಿಕೊಂಡಿರುವ ರೈತರಿಂದ ಭತ್ತ ಖರೀದಿಸಲು ಆಹ್ವಾನ ನೀಡಲಾಗಿದ್ದರೂ ಕೆಲ ರೈತರು ಈಗಾಗಲೇ ಭತ್ತವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಅತ್ತಹಳ್ಳಿ ದೇವರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ, ರಾಜ್ಯ ಕಬ್ಬು ಬೆಳೆಗಾರರ ಸಂಘ