ಜಿಲ್ಲೆ

ಕೊಡಗಿನಲ್ಲಿ ಭತ್ತದ ಪ್ರದೇಶ ಗಣನೀಯ ಇಳಿಕೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಭತ್ತದ ಕಣಜ ಎಂದು ಗುರುತಿಸಿಕೊಂಡಿದ್ದ ಮಲೆನಾಡಿನ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಭತ್ತ ಬೆಳೆಯುವ ಪ್ರದೇಶ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ. ಈ ಮಧ್ಯೆ ಕೆಲವು ಆಸಕ್ತ ರೈತರು ಭತ್ತದ ಬಗ್ಗೆ ಇನ್ನೂ ಪ್ರೀತಿ ಇಟ್ಟುಕೊಂಡಿದ್ದರೂ ವರ್ಷದಿಂದ ವರ್ಷಕ್ಕೆ ಇಳುವರಿ ಕುಸಿತ ಆಗುತ್ತಿರುವುದು ಆತಂಕ ಮೂಡಿಸಿದೆ. ಈಗಲಾದರೂ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವತ್ತ ಗಮನ ಹರಿಸದಿದ್ದರೆ ಇಲ್ಲಿನ ಭೂಮಿ ಭವಿಷ್ಯದಲ್ಲಿ ಬರಡಾಗುವ ಎಲ್ಲಾ ಸಾಧ್ಯತೆಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕಾವೇರಿ, ಹಾರಂಗಿ, ಹೇಮಾವತಿ, ಲಕ್ಷö್ಮಣತೀರ್ಥ ಸೇರಿದಂತೆ ಪ್ರಮುಖ ನದಿಗಳು ಹರಿಯುವ ಕೊಡಗಿನ ನದಿ ಬದಿಯ ಜಮೀನುಗಳು ಮಾತ್ರವಲ್ಲದೆ, ಈ ನದಿಗಳಿಗೆ ಸೇರುವ ಉಪನದಿಗಳು, ಸಣ್ಣಪುಟ್ಟ ತೊರೆಗಳಿಗೆ ಹೊಂದಿಕೊAಡAತಿರುವ ಭೂಮಿಯಲ್ಲಿ ಮೊದಲಿನಿಂದಲೂ ಭತ್ತದ ಕೃಷಿ ಮಾಡಿಕೊಂಡು ಬರಲಾಗುತ್ತಿದೆ. ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯ ನಿರ್ಮಾಣ ಆಗುವ ತನಕವೂ ಜಿಲ್ಲೆಯಲ್ಲಿ ಮಳೆಯಾಶ್ರಿತವಾಗಿ ಭತ್ತ ಬೆಳೆಯಲಾಗುತ್ತಿತ್ತು. ಪ್ರಸ್ತುತ ಜಿಲ್ಲೆಯಲ್ಲಿ ಕೇವಲ 1,264 ಹೆಕ್ಟೇರ್ ಪ್ರದೇಶ ಮಾತ್ರ ನೀರಾವರಿಗೆ ಒಳಪಟ್ಟಿದ್ದರೆ ಉಳಿದ ಜಾಗದಲ್ಲಿ ಮಳೆಯನ್ನೇ ನಂಬಿ ವ್ಯವಸಾಯ ಮಾಡಲಾಗುತ್ತಿದೆ.

2019-20ರಲ್ಲಿ ಜಿಲ್ಲೆಯಲ್ಲಿ 29,759 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳ ಬಿತ್ತನೆ ಮಾಡಲಾಗುತ್ತಿತ್ತು. ಆದರೆ ಈಗ 2023-24ರಲ್ಲಿ ಈ ಪ್ರಮಾಣ 15,820 ಹೆಕ್ಟೇರ್ ಪ್ರದೇಶಕ್ಕೆ ಬಂದು ನಿಂತಿದೆ. 2019-20ರಲ್ಲಿ ಕೊಡಗಿನಲ್ಲಿ 1,06,975 ಟನ್‌ಗಳಷ್ಟು ಭತ್ತ ಬೆಳೆಯಲಾಗುತ್ತಿತ್ತು. 2023-24ರಲ್ಲಿ ಈ ಪ್ರಮಾಣ 53,152 ಟನ್‌ಗಳಿಗೆ ಕುಸಿದಿದೆ. ಭತ್ತ ಬೆಳೆಯುವ ಪ್ರದೇಶದಲ್ಲೂ ಇಳಿಕೆ ಆಗಿದ್ದು ಕಳೆದ ವರ್ಷ 15,820 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿರುವುದಾಗಿ ಕೃಷಿ ಇಲಾಖೆ ಅಂಕಿ ಅಂಶಗಳು ಮಾಹಿತಿ ನೀಡಿವೆ.

ಆಹಾರ ಧಾನ್ಯ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಸಾಕಷ್ಟು ಪ್ರೋತ್ಸಾಹಕ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದ್ದು, ಕೃಷಿ ಕ್ಷೇತ್ರವನ್ನು ಸುಸ್ಥಿರ ಮತ್ತು ಲಾಭದಾಯವಾಗಿಸಲು ಪ್ರಯತ್ನಿಸುತ್ತಿದೆ. ಕೃಷಿ ಭಾಗ್ಯ ಯೋಜನೆ ಕೇಂದ್ರವಾಗಿರಿಸಿಕೊAಡು ವಿವಿಧ ರೈತ ಪರ ಯೋಜನೆಗಳನ್ನು ಸಂಯೋಜಿಸುವ ಮೂಲಕ ಆಹಾರ ಉತ್ಪಾದನೆ ಮತ್ತು ರೈತರ ಆದಾಯ ಹೆಚ್ಚಿಸುವ ಕಾರ್ಯಕ್ರಮವನ್ನೂ ಜಾರಿಗೆ ತರಲಾಗುತ್ತಿದೆ. ಆಹಾರ ಧಾನ್ಯ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ಪ್ರೋತ್ಸಾಹ ಸಿಗುತ್ತಿದ್ದರೂ ಭೂಮಿಯ ಫಲವತ್ತತೆ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮಣ್ಣಿನ ಫಲವತ್ತತೆ ಇಳಿಕೆ ಆಗುತ್ತಿರುವುದಕ್ಕೆ ಸಾಕ್ಷಿ ಎನ್ನುವಂತೆ ಕಳೆದ ಒಂದು ದಶಕದಲ್ಲಿ ಜಿಲ್ಲೆಯಲ್ಲಿ ಭತ್ತದ ಇಳುವರಿ ಪ್ರಮಾಣ ಶೇ.14.59ರಷ್ಟು ಕಡಿಮೆ ಆಗಿದೆ. 2013-14ರಲ್ಲಿ ಹೆಕ್ಟೇರ್‌ಗೆ 4,417 ಕೆಜಿಯಷ್ಟಿದ್ದ ಭತ್ತದ ಇಳುವರಿ 2022-23ರಲ್ಲಿ ಹೆಕ್ಟೇರ್‌ಗೆ 3,854 ಕೆಜಿಗೆ ಇಳಿಕೆ ಆಗಿದೆ. ಈ ಒಂದು ದಶಕದ ಅವಧಿಯಲ್ಲಿ ಇಳುವರಿ ಪ್ರಮಾಣದಲ್ಲಿ ಏರಿಳಿಕೆಯೂ ಕಂಡು ಬಂದಿದೆ. 2014-15ರಲ್ಲಿ ಹೆಕ್ಟೇರ್‌ಗೆ 4,399 ಕೆಜಿ, 2015-16ರಲ್ಲಿ 4,266 ಕೆಜಿ, 2016-17ರಲ್ಲಿ 3,818 ಕೆಜಿ, 2017-18ರಲ್ಲಿ 3,733 ಕೆಜಿ, 2018-19ರಲ್ಲಿ 4,419 ಕೆಜಿ, 2019-20ರಲ್ಲಿ 4,041 ಕೆಜಿ, 2020-21ರಲ್ಲಿ 3,963 ಕೆಜಿ, 2021-22ರಲ್ಲಿ 3,966 ಕೆಜಿ ಇಳುವರಿ ದಾಖಲಾಗಿರುವುದಾಗಿ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಮುಖವಾಗಿ ಮಳೆಯ ಕಣ್ಣಾಮುಚ್ಚಾಲೆ ಭತ್ತದ ಇಳುವರಿ ಮೇಲೆ ಪರಿಣಾಮ ಬೀರಿದರೂ ಭೂಮಿಯ ಫಲವತ್ತತೆ ನಾಶವಾಗುತ್ತಿರುವುದು ಕೂಡ ಇದಕ್ಕೆ ಇನ್ನೊಂದು ಕಾರಣವಾಗಿದೆ. 2017ರ ತನಕವೂ ಕೊಡಗಿನಲ್ಲಿ ವಾಡಿಕೆಯ ಮಳೆ ಸುರಿಯುತ್ತಿತ್ತು. ಮಳೆಗಾಲದ ತಿಂಗಳುಗಳಲ್ಲೇ ಮಳೆ ಆಗುತ್ತಿತ್ತು. ಆದರೆ 2018ರ ನಂತರ ಇದು ದೊಡ್ಡ ಮಟ್ಟದಲ್ಲಿ ಏರುಪೇರು ಕಾಣುತ್ತಿರುವುದನ್ನು ತಜ್ಞರು ಗುರುತಿಸಿದ್ದಾರೆ. 2018ರ ಮಹಾಮಳೆ ಮತ್ತು ಪ್ರಾಕೃತಿಕ ವಿಕೋಪ ಇಲ್ಲಿನ ಮಣ್ಣು ಹಾಗೂ ಪರಿಸರದ ಮೇಲೆ ಪರಿಣಾಮ ಬೀರಿದ್ದು, ಅದು ಈಗಲೂ ಮುಂದುವರಿದುಕೊAಡು ಬಂದಿದೆ.

ಅವೈಜ್ಞಾನಿಕ ಕೃಷಿ ಪದ್ಧತಿ, ಮಿತಿಮೀರಿದ ರಸಗೊಬ್ಬರ ಬಳಕೆ, ಅಸಮರ್ಪಕ ನೀರು ನಿರ್ವಹಣೆ ಮತ್ತಿತರ ಕಾರಣಗಳಿಂದ ಮಣ್ಣಿನ ಫಲವತ್ತತೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಮಣ್ಣಿನಲ್ಲಿ ಆಮ್ಲೀಯ ಅಂಶ ಹೆಚ್ಚು ಹೊಂದಿರುವ ರಾಜ್ಯದ 3 ಜಿಲ್ಲೆಗಳಲ್ಲಿ ಪೈಕಿ ಕೊಡಗು ಒಂದಾಗಿದ್ದು, ಉಳಿದ 2 ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನ ಮಣ್ಣಿನಲ್ಲಿ ಆಮ್ಲೀಯತೆಯ ಪ್ರಮಾಣ ಹೊಂದಿರುವ ಭೂಮಿಯ ವಿಸ್ತೀರ್ಣ ಜಾಸ್ತಿ ಇದೆ. ಹಾಸನದಲ್ಲಿ 36.52 ಹೆಕ್ಟೇರ್‌ಗಳಷ್ಟು ಜಾಗದಲ್ಲಿ ಆಮ್ಲೀಯತೆ ಪ್ರಮಾಣ ಹೆಚ್ಚಿದ್ದರೆ, ಉತ್ತರ ಕನ್ನಡ ಜಿಲ್ಲೆಯ 79.70 ಹೆಕ್ಟೇರ್ ಪ್ರದೇಶದ ಮಣ್ಣಿನಲ್ಲಿ ಆಮ್ಲೀಯತೆ ಪ್ರಮಾಣ ಹೆಚ್ಚು ಕಂಡುಬAದಿದೆ. ಕೊಡಗಿನಲ್ಲಿ 97.61 ಹೆಕ್ಟೇರ್ ಭೂಮಿಯಲ್ಲಿ ಆಮ್ಲೀಯತೆ ಪ್ರಮಾಣ ಜಾಸ್ತಿ ಇರುವುದು ಕಂಡುಬAದಿದೆ.

ಯಾವುದೇ ಜಮೀನಿನಲ್ಲಿ ನಿರೀಕ್ಷಿಸಿದಂತೆ ಉತ್ತಮ ಫಸಲು ಸಿಗಬೇಕು ಎಂದರೆ ಅಲ್ಲಿಯ ಮಣ್ಣು ಫಲವತ್ತಾಗಿರಬೇಕು. ಮಣ್ಣಿನ ಬಣ್ಣವನ್ನು ನೋಡಿದ ಕೂಡಲೇ Àಫಲವತ್ತತೆ ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಮಣ್ಣಿನ ಪರೀಕ್ಷೆ ನಡೆಸಬೇಕು. ಸರ್ಕಾರವೇ ಮಣ್ಣು ಪರೀಕ್ಷಾ ಕೇಂದ್ರಗಳನ್ನು ತೆರೆದು ರೈತರ ಜಮೀನಿನ ಮಣ್ಣಿನ Àಫಲವತ್ತತೆ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟಿದೆ. ಸುಸಜ್ಜಿತ ಪ್ರಯೋಗಾಲಯಗಳಲ್ಲಿ ತಜ್ಞರು ಮಣ್ಣಿನ ಪರೀಕ್ಷೆ ನಡೆಸಿ ಕೊರತೆಯಿರುವ ಅಂಶಗಳು ಮತ್ತು ಫಲವತ್ತತೆ ಹೆಚ್ಚಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಾರೆ. ರೈತರ ಇದರ ಪ್ರಯೋಜನ ಪಡೆದುಕೊಳ್ಳಬಹುದು.

ಮಣ್ಣಿನ ಫಲವತ್ತತೆ ಕಾಪಾಡಲು ಯೋಜನೆ

ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸರ್ಕಾರ ಕೂಡ ಹಲವಾರು ಯೋಜನೆಗಳನ್ನು ರೂಪಿಸಿದೆ. ಸಾವಯವ ಇಂಗಾಲ ಅಭಿಯಾನ ಯೋಜನೆಯಡಿ ಮಣ್ಣಿನಲ್ಲಿರುವ ಸಾವಯವ ಇಂಗಾಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಶೇ.75ರ ರಿಯಾಯಿತಿ ದರದಲ್ಲಿ ಹಸಿರೆಲೆ ಗೊಬ್ಬರ ಬೀಜಗಳನ್ನು ವಿತರಿಸಲಾಗುತ್ತಿದೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು, ಕೃಷಿ ಇಲಾಖೆಯಿಂದ ತರಬೇತಿ, ಅಭಿಯಾನ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯ ದುಷ್ಪರಿಣಾಮಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಸಾವಯವ ಗೊಬ್ಬರಗಳು, ಜೈವಿಕ ಗೊಬ್ಬರಗಳು, ನ್ಯಾನೋ ಗೊಬ್ಬರಗಳು, ಮಣ್ಣು ಸುಧಾರಕಗಳು ಮತ್ತು ನೈಸರ್ಗಿಕ ಕೃಷಿ, ಸಾವಯವ ಕೃಷಿಯ ಅಳವಡಿಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ. ರೈತರಿಗೆ ಮಣ್ಣು ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ರಸಗೊಬ್ಬರಗಳ ಬಳಕೆಯ ಶಿಫಾರಸ್ಸುಗಳನ್ನು ಮಾಡಲು ಮಣ್ಣು ಆರೋಗ್ಯ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ಇದರ ಮೂಲಕ ರಸಗೊಬ್ಬರಗಳ ಸಮತೋಲನಾತ್ಮಕ ಬಳಕೆಯ ಜೊತೆಗೆ ವಿವೇಚನಾಯುಕ್ತ ರಸಗೊಬ್ಬರಗಳ ಬಳಕೆಗೆ ಒತ್ತು ನೀಡಲಾಗುತ್ತಿದೆ.

ಆಹಾರ ಮತ್ತು ಪೌಷ್ಠಿಕ ಭದ್ರತೆ ಹಾಗೂ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆಗಳಡಿ ಹಸಿರೆಲೆ ಗೊಬ್ಬರ ಬೀಜಗಳು, ಜೈವಿಕ ಗೊಬ್ಬರಗಳು, ಸಾವಯವ ಗೊಬ್ಬರಗಳಾದ ಎರೆಹುಳುಗೊಬ್ಬರ, ರಂಜಕಯುಕ್ತ ಸಾವಯವ ಗೊಬ್ಬರ, ಸಿಟಿ ಕಾಂಪೋಸ್ಟ್ ಮತ್ತು ಎಣ್ಣೆ ರಹಿತ ಹಿಂಡಿ ಗೊಬ್ಬರಗಳು ಹಾಗೂ ಮಣ್ಣು ಸುಧಾರಕಗಳು ಮತ್ತು ಲಘುಪೋಷಕಾಂಶಗಳನ್ನು ಎಲ್ಲಾ ವರ್ಗದ ರೈತರಿಗೆ ಶೇ.50 ರ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ.

2013-14 ರಿಂದ 2022-23ನೇ ಸಾಲಿನ ಇಳುವರಿ ದತ್ತಾಂಶಗಳ ಆಧಾರದಲ್ಲಿ ಕಳೆದ ಒಂದು ದಶಕದಲ್ಲಿ ರಾಜ್ಯದಲ್ಲಿ ಭತ್ತ ಬೆಳೆಯ ಇಳುವರಿಯಲ್ಲಿ ಶೇ.1.80 ರಷ್ಟು ಇಳಿಕೆ ಕಂಡು ಬಂದಿದೆ. ಹವಾಮಾನ, ಕೀಟ, ರೋಗ ಬಾಧೆ, ಮಣ್ಣಿನ ಫಲವತ್ತತೆ, ತಳಿಗಳು ಇತ್ಯಾದಿಗಳ ಮೇಲೆ ಇಳುವರಿ ಅವಲಂಬಿತವಾಗಿರುತ್ತದೆ. ಹಾಗಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸರ್ಕಾರ ಆನೇಕ ಯೋಜನೆಗಳನ್ನು ರೈತರಿಗಾಗಿ ರೂಪಿಸಿದೆ. ರೈತರು ಇದರ ಸದ್ಬಳಕೆ ಮಾಡಿಕೊಂಡು ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬೇಕು.

ಎನ್. ಚಲುವರಾಯಸ್ವಾಮಿ, ಕೃಷಿ ಸಚಿವ