ಜಿಲ್ಲೆ

ಭತ್ತ ಮಾರಲು ರೈತರಿಗೆ ಷರತ್ತು ಏಕೆ ?

ಸುನಿಲ್ ಪೊನ್ನೇಟಿ

ಮಡಿಕೇರಿ:

ಹೆಚ್ಚಾಗಿರುವ ಉತ್ಪಾದನಾ ವೆಚ್ಚ, ಲಾಭಕ್ಕಿಂತ ನಷ್ಟವೇ ಹೆಚ್ಚು ಮತ್ತಿತರ ಕಾರಣಗಳಿಂದ ಇತ್ತೀಚಿನ ವರ್ಷಗಳಲ್ಲಿ ಭತ್ತ ಬೆಳೆಯುವ ರೈತರ ಸಂಖ್ಯೆ ಕೊಡಗಿನಲ್ಲಿ ತೀವ್ರಗತಿಯಲ್ಲಿ ಇಳಿಕೆ ಕಾಣುತ್ತಿದೆ. ಈ ವರ್ಷ ಒಟ್ಟು 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ 20,854 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಮುಂಗಾರು ಹಂಗಾಮಿನ ನಾಟಿ ಕಾರ್ಯ ನಡೆದಿದೆ. ಈ ಮೂಲಕ ಶೇ. 72ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ. ಒಂದೊಮ್ಮೆ ಭತ್ತದ ಕಣಜ ಎಂದೇ ಗುರುತಿಸಲಾಗುತ್ತಿದ್ದ ಕೊಡಗಿನಲ್ಲಿ ಭತ್ತ ಕೃಷಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿದಿದೆ.

ಈ ಮಧ್ಯೆ ಭತ್ತ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಶುರುಮಾಡಿದೆ. 2024-25ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಕ್ರಿಯೆ ಭಾನುವಾರ (ಡಿ.1) ಆರಂಭವಾಗಿದೆ. ಇದೀಗ ರೈತರ ನೋಂದಣಿ ಕಾರ್ಯ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಭತ್ತ ಮತ್ತು ರಾಗಿ ಖರೀದಿ ಆರಂಭವಾಗಲಿದೆ. ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್ 2,300 ರೂ. ಮತ್ತು ರಾಗಿ ಪ್ರತಿ ಕ್ವಿಂಟಲ್‌ಗೆ 4,290 ರೂ. ನಿಗದಿಪಡಿಸಲಾಗಿದೆ.

ಜಿಲ್ಲೆಯಲ್ಲಿ ಮಡಿಕೇರಿ ಎಪಿಎಂಸಿ ಆವರಣ, ಕುಶಾಲನಗರ ಎಪಿಎಂಸಿ ಆವರಣ, ಗೋಣಿಕೊಪ್ಪ ಎಪಿಎಂಸಿ ಆವರಣ, ಸೋಮವಾರಪೇಟೆ ಎಪಿಎಂಸಿ ಮಾರ್ಕೆಟ್ ಆವರಣ ಹಾಗೂ ವಿರಾಜಪೇಟೆ ಪಟ್ಟಣದಲ್ಲಿ ಖರೀದಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಮಾಡಲಾಗುತ್ತದೆ. ಭತ್ತ ಮಾರಾಟ ಮಾಡಬೇಕಾದರೆ ರೈತರು ಪ್ರೂಟ್ಸ್ ತಂತ್ರಾAಶದಲ್ಲಿ ನೋಂದಣಿಯಾಗಿರಬೇಕು. ಇಲ್ಲದಿದ್ದರೆ ಪ್ರೂಟ್ಸ್ ತಂತ್ರಾAಶದಲ್ಲಿ ನೋಂದಣಿ ಮಾಡಿಕೊಂಡು ತಾವು ಬೆಳದ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದು. ಇದರ ಜತೆಯಲ್ಲಿ ಗುಣಮಟ್ಟದ ಭತ್ತ ಖರೀದಿ, ಯೋಜನೆಯ ದುರುಪಯೋಗ ತಪ್ಪಿಸಲು ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿದೆ. ಆದರೆ ಇವು ರೈತ ಸ್ನೇಹಿ ಆಗಿಲ್ಲ ಎನ್ನುವ ಆರೋಪಗಳಿವೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಭತ್ತ ಬೆಳೆಯುವುದೇ ಕಷ್ಟವಾಗಿದೆ. ಅಕಾಲಿಕ ಮಳೆ, ರೋಗಬಾಧೆ, ಕಾರ್ಮಿಕರ ಕೊರತೆ ಇಂಥ ಹಲವಾರು ಸಮಸ್ಯೆಗಳಿಂದ ಭತ್ತ ಕೃಷಿ ಲಾಭದಾಯಕವಲ್ಲ ಎಂದು ಬೆಳೆಗಾರರು ತೀರ್ಮಾನ ಮಾಡಿಬಿಟ್ಟಿದ್ದಾರೆ. ಗದ್ದೆ ಮುಚ್ಚಿ ಕಾಫಿ ತೋಟ ಮಾಡುತ್ತಿದ್ದಾರೆ. ಭತ್ತ ಬೆಳೆಗಾರರಿಗೆ ಎಕರೆಗೆ 25 ಸಾವಿರ ರೂ. ಸಹಾಯ ಧನವನ್ನು ಸರ್ಕಾರ ಕೊಡಬೇಕು. ಬೆಂಬಲ ಬೆಲೆ ನಿಗದಿ ಮಾಡಿ ಪ್ರಯೋಜನವಿಲ್ಲ.

ಎಸ್.ಪಿ. ಪೊನ್ನಪ್ಪ, ಕೃಷಿಕ, ತಾಕೇರಿ ಗ್ರಾಮ

ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಳೆ ಬೀಳುತ್ತದೆ. ಇಳುವರಿ ಸಿಗುತ್ತಿಲ್ಲ. ಭತ್ತ ಬೆಳೆಯಲೇ ಬೇಕಾದ ಅನಿವಾರ್ಯತೆ ಇದೆ. ಸರ್ಕಾರದ ಷರತ್ತಿನಂತೆ ಭತ್ತವನ್ನು ಖರೀದಿ ಕೇಂದ್ರಕ್ಕೆ ಕೊಡಲು ಅಸಾಧ್ಯದ ಮಾತು. ಷರತ್ತುಗಳಿಲ್ಲದೆ ಭತ್ತ ಖರೀದಿ ಮಾಡಿ ಹೆಚ್ಚಿನ ಬೆಂಬಲ ನೀಡಿದರೆ ಭತ್ತ ಕೃಷಿಕರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.

ಜಯಂತಿ, ಕೃಷಿಕ ಮಹಿಳೆ, ಸೂರ್ಲಬ್ಬಿ ಗ್ರಾಮ

ಇತ್ತೀಚೆಗೆ ರೈತರು ಭತ್ತ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. ಈ ಹಿಂದೆ ರೈತರು ಬೆಳೆದ ಭತ್ತಕ್ಕೆ ಯಾವುದೇ ಬೆಂಬಲ ಬೆಲೆ ಸಿಗುತ್ತಿರಲಿಲ್ಲ. ಬೆಳೆ ಬೆಳೆದು ಮಾರಾಟ ಮಾಡುವುದರಲ್ಲಿ ಸಿಗುವ ಆದಾಯಕ್ಕಿಂತ ಖರ್ಚು ಹೆಚ್ಚಿತ್ತು. ಹಾಗಾಗಿ ಇಂದು ಭತ್ತದ ಗದ್ದೆಗಳು ಅಡಿಕೆ ಕಾಫಿ ತೋಟಗಳಾಗಿ ಬದಲಾಗಿದೆ. ಮುಂದಿನ ದಿನಗಳಲ್ಲಿ ರೈತರು ಭತ್ತ ಗದ್ದೆಗಳನ್ನು ಉಳಿಸಲೇಬೇಕಿದೆ. ಊಟಕ್ಕೆ ಬೇರೆ ಏನನ್ನೂ ತಿನ್ನಲು ಸಾಧ್ಯವಿಲ್ಲ, ಅಡಿಕೆ ಹಾಗೂ ಕಾಫಿ ಯಿಂದ ಹಣ ಸಂಪಾದನೆ ಮಾಡಬಹುದು ಆದರೆ ತಿನ್ನಲು ಆಗುವುದಿಲ್ಲ.

ನೀತು, ಚಿನ್ನಳ್ಳಿ, ಶನಿವಾರಸಂತೆ

ಪ್ರಮುಖ ಆಹಾರ ಧಾನ್ಯವಾದ ಭತ್ತಕ್ಕೆ ಬೆಂಬಲ ಬೆಲೆ ನಿಗದಿ ಪಡಿಸಬೇಕು. ಪ್ರಸ್ತುತ ಕ್ಟಿಂಟಲ್ ರಾಗಿಗೆ ಇರುವ ಬೆಲೆಗಿಂತ ಭತ್ತಕ್ಕೆ ಕಡಿಮೆ ಬೆಲೆ ಇದೆ. ಈ ಬೆಳೆ ಬೆಳೆಯಲು ಖರ್ಚು ಅಧಿಕವಾಗಿದ್ದು, ಆದಾಯ ಕಡಿಮೆ ಇರುವುದರಿಂದ ಜಿಲ್ಲೆಯಲ್ಲಿ ರೈತರು ಭತ್ತ ಬೆಳೆಗೆ ಉತ್ಸಾಹ ತೋರುತ್ತಿಲ್ಲ. ಕ್ಟಿಂಟಾಲ್‌ಗೆ ಕನಿಷ್ಠ 5 ಸಾವಿರ ರೂ. ನಿಗದಿಪಡಿಸಿದ್ದಲ್ಲಿ ಭತ್ತ ಬೆಳೆಯಲು ರೈತರು ಆಸಕ್ತಿ ತೋರಿಸುತ್ತಾರೆ.

ಚೇಂದAಡ ಅಜಿತ್ ಪೂಣಚ್ಚ, ಸಂಚಾಲಕ, ರೈತ ಸಂಘ, ಕೊಡಗು

ಜಿಲ್ಲೆಯಲ್ಲಿ ಭತ್ತದ ಬೆಳೆ ಕಡಿಮೆಯಾಗುತ್ತಿದೆ. ನಮ್ಮ ಊರಿನಲ್ಲಿ ಕಾಡಾನೆಗಳ ಹಾವಳಿಯಿಂದ ಭತ್ತದ ಕೃಷಿ ಕೈಬಿಡುತ್ತಿದ್ದಾರೆ. ಹೀಗಾದರೆ ಕಷ್ಟ. ಬೆಳೆದ ಅಲ್ಪ ಸ್ವಲ್ಪ ಬೆಳೆಗೆ ಸರ್ಕಾರ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು. ಅದರಲ್ಲಿಯೂ ಹಲವಾರು ನಿಬಂಧನೆಗಳನ್ನು ಹಾಕಿ ರೈತರಿಗೆ ತಲೆನೋವಾಗುವಂತೆ ಮಾಡಿದ್ದಾರೆ. ಕೂಡಲೇ ಎಲ್ಲವನ್ನೂ ಸರಳೀಕರಣಗೊಳಿಸಬೇಕು.

ಕೆ.ಜೆ. ಮಧು, ಕೃಷಿಕ, ಮಾಯಮುಡಿ

ಕೊಡಗಿನಲ್ಲಿ ಇತ್ತೀಚಿನ ಮಟ್ಟಿಗೆ ಭತ್ತದ ಬೆಳೆಯಲ್ಲಿ ಸಿಗುವ ಲಾಭಕ್ಕಿಂತ ಭತ್ತ ಬೆಳೆಯಲು ತಗುಲುವ ವೆಚ್ಚ ಅಧಿಕವಾಗುತ್ತಿದೆ. ಈ ಕಾರಣದಿಂದ ಒಂದಷ್ಟು ವರ್ಷಗಳಿಂದ ಭತ್ತ ಬೆಳೆಯುವ ಪ್ರದೇಶ ಗಣನೀಯವಾಗಿ ಕಡಿಮೆಯಾಗುತ್ತಾ ಬಂದಿದೆ. ಇದೀಗ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತ ಖರೀದಿಸುತ್ತಿರುವುದು ಉತ್ತಮ. ಆದರೆ ಖರೀದಿಯ ಸಂದರ್ಭ ರೈತರಿಗೆ ಯಾವೆಲ್ಲ ನಿಯಮ, ಷರತ್ತುಗಳನ್ನು ವಿಧಿಸುತ್ತದೆ ಎಂಬುದರೊAದಿಗೆ ಬೆಂಬಲ ಬೆಲೆ ಯೋಜನೆ ರೈತರಿಗೆ ಎಷ್ಟರ ಮಟ್ಟಿಗೆ ಕೈ ಹಿಡಿಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ದಿನೇಶ್, ಬಿಳುಗುಂದ ಗ್ರಾಮ, ವಿರಾಜಪೇಟೆ.

ಬೆಂಬಲ ಬೆಲೆ ಯೋಜನೆ ಅಡಿ ಭತ್ತ ಖರೀದಿ ಪ್ರಕ್ರಿಯೆ ಘೋಷಣೆ ಮಾಡಲಾಗಿದ್ದು ಸಾಮಾನ್ಯ ಭತ್ತ ಕ್ವಿಂಟಾಲ್‌ಗೆ 2,300 ರೂ. ನಿಗದಿ ಪಡಿಸಲಾಗಿದೆ. ಖರೀದಿಯ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಸದ್ಯದ ಮಟ್ಟಿಗೆ ಬೆಂಬಲ ಬೆಲೆ ಯೋಜನೆ ರೈತರಿಗೆ ಹಲವು ಮಟ್ಟಿಗೆ ಪ್ರಯೋಜನವಾಗಬಹುದು. ನಿಯಮ, ಷರತ್ತುಗಳನ್ನು ವಿಧಿಸದೆ ಉತ್ತಮ ಭತ್ತಕ್ಕೆ ಉತ್ತಮ ಬೆಲೆಯನ್ನು ನೀಡಿದರೆ ಅನುಕೂಲ.

ಅಂಜಲಿ ಪಿ., ವಿದ್ಯಾರ್ಥಿನಿ, ವಿರಾಜಪೇಟೆ.

ಸರ್ಕಾರ ಬೆಂಬಲ ಬೆಲೆ ನೀಡುತ್ತಿದೆ. ಆದರೆ ಇದರಿಂದ ರೈತರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಬೆಳೆ ಬೆಳೆದು ಬರುವ ಸಂದರ್ಭ ವನ್ಯಪ್ರಾಣಿಗಳ ಹಾವಳಿಯಿಂದ ಬೆಳೆಗಳು ಅವುಗಳ ಆಹಾರವಾದರೆ, ಕಾರ್ಮಿಕರ ದುಬಾರಿ ವೇತನದಿಂದಾಗಿ ಇಂದು ಬೆಂಬಲ ನೀಡಿದರೂ ಕೃಷಿಕರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಇದು ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ.

ಪಟ್ಟೆಮನೆ ಉದಯಕುಮಾರ್, ಕೃಷಿಕ, ಸುಂಟಿಕೊಪ್ಪ

ಕೀಟ ನಿರ್ವಹಣೆ ಮತ್ತು ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆಗಳನ್ನು ರಕ್ಷಿಸಲು ಹೋರಾಡಿ ದಣಿದಿರುವ ಪ್ರಾಮಾಣಿಕ ರೈತನಿಂದ ಭತ್ತ ಖರೀದಿ ಸಂದರ್ಭ ಷರತ್ತುಗಳನ್ನು ಹಾಕುವ ಅಗತ್ಯವಿಲ್ಲ. ಉತ್ತಮ ಬೆಂಬೆಲ ಬೆಲೆ ಮುಂದಿನ ದಿನಗಳಲ್ಲಿ ಭತ್ತ ಬೆಳೆಯುವ ರೈತರಿಗೆ ಸಹಕಾರಿ ಆಗಬಲ್ಲದು. ಇದರಿಂದ ಭತ್ತ ಕೃಷಿಯೂ ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ.

ಕೊಲ್ಯದ ಗಿರೀಶ್, ಮಾಜಿ ಅಧ್ಯಕ್ಷ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ

ಭತ್ತ ಮಾರಾಟ ಮಾಡಬೇಕಾದ ರೈತರು ಈಗಾಗಲೇ ಪ್ರೂಟ್ಸ್ ತಂತ್ರಾAಶದಲ್ಲಿ ನೋಂದಣಿಯಾಗಿರಬೇಕು. ಒಂದು ವೇಳೆ ರೈತರು ನೋಂದಣಿ ಮಾಡದಿದ್ದಲ್ಲಿ ಪ್ರೂಟ್ಸ್ ತಂತ್ರಾAಶದಲ್ಲಿ ನೋಂದಣಿ ಮಾಡಿಕೊಂಡು ತಾವು ಬೆಳದ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ. ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿ ಮಾಡಿದ ಭತ್ತದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ಕುಮುದಾ ಶರತ್, ಜಂಟಿ ನಿರ್ದೇಶಕಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ