ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ವೇದಿಕೆ ಸಜ್ಜುಗೊಂಡಿರುವಂತೆಯೇ ದೇಶಾದ್ಯಂತ ಭಕ್ತರು ವಿಧವಿಧ ಸೇವೆಗೆ ಮುಂದಾಗುತ್ತಿದ್ದಾರೆ. ಹುಬ್ಬಳ್ಳಿಯ ಯುವಕನೊಬ್ಬ ಅಯೋಧ್ಯೆಗೆ ಪಾದಯಾತ್ರೆ ಹೊರಡುವ ಮೂಲಕ ವಿಶಿಷ್ಟ ಸೇವೆಗೆ ಅಣಿಯಾಗಿದ್ದಾನೆ.
ಅಯೋಧ್ಯೆಯ ಮರ್ಯಾದಾ ಪುರುಷೋತ್ತಮನ ದರ್ಶನ ಪಡೆಯಬೇಕೆಂಬುದು ಈತನ ಆಸೆ. ಶ್ರೀರಾಮ ಮಂದಿರದ ಕನಸು ನನಸಾಗುವ ಹೊತ್ತಿನಲ್ಲಿ ನಡೆದುಕೊಂಡೇ ಅಯೋಧ್ಯೆ ತಲುಪಬೇಕು. ಅಲ್ಲಿ ಶ್ರೀರಾಮನನ್ನು ಕಣ್ತುಂಬಿಕೊಳ್ಳಬೇಕೆಂದು ಇಲ್ಲಿಯ ಆನಂದ ನಗರದ ಘೋಡಕೆ ಪ್ಲಾಟ್ ನಿವಾಸಿ ಮನೋಜ್ ಅರ್ಕಾಟ್ ಪಾದಯಾತ್ರೆ ಆರಂಭಿಸಿದ್ದಾನೆ.
ತಾಯಿ ಹಾಗೂ ಅಕ್ಕಂದಿರೊಂದಿಗೆ ವಾಸವಿರುವ ಮನೋಜ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಶ್ರೀರಾಮನ ಪರಮಭಕ್ತನಾಗಿರುವ ಈತ ಪಾದಯಾತ್ರೆ ಮೂಲಕ ಅಯೋಧ್ಯೆಗೆ ತೆರಳುವುದಾಗಿ ಮನೆಯಲ್ಲಿ ತಿಳಿಸಿದಾಗ ಆರಂಭದಲ್ಲಿ ತಾಯಿ ಬೇಡ ಎಂದರೂ ನಂತರದಲ್ಲಿ ಒಪ್ಪಿಕೊಂಡರು.
ಕಳೆದ ಡಿಸೆಂಬರ್ 22ರಂದು ಹುಬ್ಬಳ್ಳಿಯ ಸಿದ್ಧಾರೂಢರ ದರ್ಶನ ಪಡೆದು ಯಾತ್ರೆ ಆರಂಭಿಸಿದ್ದಾರೆ. ಊಟ, ವಸತಿ ಯಾವುದರ ಬಗ್ಗೆಯೂ ಯೋಚಿಸದೇ ಕೈಯಲ್ಲಿ ಧ್ವಜ ಹಿಡಿದು, ಕೊರಳಲ್ಲಿ ಕೇಸರಿ ಶಾಲು ಹಾಕಿಕೊಂಡು ಶ್ರೀರಾಮ ನಾಮ ಜಪಿಸುತ್ತ ಪಾದಯಾತ್ರೆ ಸಾಗಿದೆ.
ದಾರಿಯುದ್ದಕ್ಕೂ ಅಲ್ಲಲ್ಲಿ ದೇವಸ್ಥಾನ, ಮಠ, ಮಂದಿರಗಳಲ್ಲಿ ವಾಸ್ತವ್ಯ ಹೂಡುವುದು, ಪ್ರಸಾದ ಸ್ವೀಕರಿಸುತ್ತ ದೃಢ ಮನಸ್ಸಿನಿಂದ ಹೆಜ್ಜೆ ಹಾಕಿದ್ದಾನೆ.
ಹುಬ್ಬಳ್ಳಿಯಿಂದ 1800 ಕಿ.ಮೀ. ದೂರದ ಅಯೋಧ್ಯೆಯನ್ನು ತಲುಪುವ ಈತನ ಆಶಯಕ್ಕೆ ಅಲ್ಲಲ್ಲಿ ರಾಮಭಕ್ತರು ಸಹಕಾರ ನೀಡುತ್ತಿದ್ದಾರೆ. ಕೆಲವರು ಊಟ, ಉಪಾಹಾರದ ವ್ಯವಸ್ಥೆ ಮಾಡುತ್ತಿದ್ದಾರೆ.
ಒಟ್ಟಾರೆ, ವಿನೂತನ ಸೇವೆಗೆ ಮುಂದಾಗಿರುವ ಮನೋಜ ಜ. 20ಕ್ಕೆ ಅಯೋಧ್ಯೆ ತಲುಪಲು ಸಂಕಲ್ಪ ಮಾಡಿದ್ದಾನೆ. ಕರ್ನಾಟಕ, ಮಹಾರಾಷ್ಟ್ರ ದಾಟಿ ಸದ್ಯ ಮಧ್ಯಪ್ರದೇಶ ತಲುಪಿದ್ದಾರೆ. ಚಳಿಯ ಮಧ್ಯೆಯೂ ಯಾತ್ರೆ ಮುಂದುವರಿಸಿದ್ದಾರೆ. ಅವರ ಯಾತ್ರೆ ಯಶಸ್ವಿಯಾಗಲಿ ಎಂಬುದು ಭಕ್ತರ ಹಾರೈಕೆ.