ವಿಟ್ಲ: ಸ್ವದೇಶಿ ಚಿಂತನೆಯನ್ನು ಆಗಿನ ಕಾಲದಲ್ಲೇ ವಾಜಪೇಯಿ ಹಾಕಿಕೊಂಡಿದ್ದರು. ಜನ ಸಂಘದ ಸಮಯದಿಂದ ಕೆಲಸ ಮಾಡಿದವರ ಸ್ಮರಣೆ ಮಾಡಬೇಕಾಗಿದೆ. ರಾಜಕೀಯವನ್ನು ಸಮಾಜ ಕಟ್ಟುವ ಸಾಧನವಾಗಿ ಬಳಸಿಕೊಂಡ ವಾಜಪೇಯಿ, ಪ್ರತಿಯೊಬ್ಬರಲ್ಲಿ ವಿಶ್ವಾಸ ತುಂಬುವ ಮೂಲಕ ಭಾರತೀಯತೆಯ ರೂಪವಾಗಿದ್ದರು. ಮಹಾ ಕುಂಬದ ಮೂಲಕ ಹಿಂದು ಭಾವನೆಗಳು ಜಾಗೃತಿಯಾಗಿ, ಕಾಂಗ್ರೆಸ್‌ನವರ ಬಾಯಲ್ಲೂ ಹಿಂದು ಎಂದು ಹೇಳುವಂತೆ ಬಿಜೆಪಿ ಸಂಘಪರಿವಾರ ಮಾಡಿದೆ ಎಂದು ವಿಧಾನ ಪರಿಷತ್ತು ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು.
ಕುದ್ದುಪದವು ದಿವ್ಯ ಶಕ್ತಿ ಯುವಕ ಮಂಡಲದ ಆವರಣದಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಪುಣಚ ಮತ್ತು ವಿಟ್ಲ ಮಹಾಶಕ್ತಿ ಕೇಂದ್ರದ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ದಿಯ ಅಂಗವಾಗಿ ನಡೆದ ಪಾದಯಾತ್ರೆಯಲ್ಲಿ ಮಾತನಾಡಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ವಾಜಪೇಯಿಯವರ ವ್ಯಕ್ತಿತ್ವವನ್ನು ರಾಷ್ಟ್ರಕ್ಕೆ ಪರಿಚಯಿಸುವ ಜತೆಗೆ ಅವರ ಆದರ್ಶಗಳನ್ನು ಮೈಗೂಡಿಸುವ ನಿಟ್ಟಿನಲ್ಲಿ ಅವರ ಸ್ಮರಣೆ ಮಾಡಲಾಗುತ್ತಿದೆ. ಜಗದ್ಗುರು ಭಾರತವನ್ನು ಕಾಣುವ ನಿಟ್ಟಿನಲ್ಲಿ ವಾಜಪೇಯಿ ಅವರ ಕೊಡುಗೆ ದೊಡ್ಡದಿದೆ. ಅವರ ಒಡನಾಡಿಯಾಗಿ ರಾಷ್ಟ್ರ ಕಟ್ಟುವ ಕೆಲಸ ಮಾಡಿದವರನ್ನು ಸ್ಮರಿಸಲಾಗುತ್ತಿದೆ. ಮೌಲ್ಯಯುತ ರಾಜಕಾರಣಕ್ಕೆ ಒತ್ತು ನೀಡಿದ ಏಕೈಕ ವ್ಯಕ್ತಿಯಾದವರು ಅಟಲ್ ಬಿಹಾರಿ ವಾಜಪೇಯಿ ಎಂದು ತಿಳಿಸಿದರು.
ಕೇಪು ಕಲ್ಲಂಗಳ ಆಶ್ರಮ ಶಾಲೆಯ ಸಮೀಪದ ಪಾಜಪೇಯಿ ರಸ್ತೆಯಿಂದ ಕುದ್ದುಪದವು ವರೆಗೆ ಪಾದಯಾತ್ರೆ ನಡೆಯಿತು.
ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಕಾರ್ಯದರ್ಶಿ ವಿದ್ಯಾ ಗೌರಿ, ಜಿಲ್ಲಾ ಎಸ್.ಟಿ. ಮೋರ್ಚ ಅಧ್ಯಕ್ಷ ಹರೀಶ್ ಬಿಜತ್ರೆ ಉಪಸ್ಥಿತರಿದ್ದರು. ಹರಿಪ್ರಸಾದ್ ಯಾದವ ನಿರೂಪಿಸಿದರು.