ಜಿಲ್ಲೆ

ಕೊಡವ ಮತ್ತು ಕೊಡವ ಭಾಷಿಕ ಸಮುದಾಯಗಳ ಸಂಸ್ಕೃತಿಯ ಭದ್ರತೆಗಾಗಿ ಪಾದಯಾತ್ರೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡವ ಮತ್ತು ಕೊಡವ ಭಾಷಿಕ ಸಮುದಾಯಗಳ ಸಂಸ್ಕೃತಿಯ ಭದ್ರತೆಗಾಗಿ, ಸಂವಿಧಾನಬದ್ಧವಾಗಿ ಹಕ್ಕು ಮತ್ತು ಸೌಲಭ್ಯಗಳ ಬೇಡಿಕೆ ಮುಂದಿಟ್ಟುಕೊAಡು ಫೆ.2ರಿಂದ ಕುಟ್ಟದಿಂದ ಮಡಿಕೇರಿಗೆ ಪಾದಯಾತ್ರೆ ನಡೆಸಲಾಗುತ್ತಿದ್ದು, ಇದಕ್ಕೂ ಕಟ್ಟೆಮಾಡು ವಿಷಯಕ್ಕೂ ಸಂಬAಧ ಇಲ್ಲ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಹೇಳಿದ್ದಾರೆ.

ಹಿಂದೊಮ್ಮೆ ವಿಶಾಲ ಕ್ರೋಢ ದೇಶ ಆಗಿದ್ದ ಕೊಡಗು 1956ರ ತನಕವೂ ಪ್ರತ್ಯೇಕ ಸಿ ರಾಜ್ಯ ಆಗಿತ್ತು. ವಿಶಾಲ ಕರ್ನಾಟಕದೊಂದಿಗೆ ವಿಲೀನ ಆದ ನಂತರ ಒಂದು ಜಿಲ್ಲೆಯಾಗಿ ಮಾತ್ರ ಉಳಿದುಕೊಂಡಿದೆ. ಅಂದಿನಿAದ ಇಂದಿನ ತನಕವೂ ಕೊಡವ ಮತ್ತು ಕೊಡವ ಭಾಷಿಕ ಸಮುದಾಯಗಳು ಕೊಡವ ಭಾಷೆ ಮತ್ತು ಸಂಸ್ಕೃತಿಯನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದು, ಇತರ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಿಕೊಂಡು ಬರಲಾಗುತ್ತಿದೆ. ಆದರೆ ಕೆಲ ಪಟ್ಟಭದ್ರ ಹಿತಾಶಕ್ತಿಗಳು ಮತ್ತು ಕಾಣದ ಕೈಗಳು ಕೆಲ ವರ್ಷಗಳಿಂದ ನಮ್ಮ ಸಂಸ್ಕೃತಿಯ ಮೇಲೆ ನಿರಂತರವಾಗಿ ದಬ್ಬಾಳಿಕೆ ಮತ್ತು ದಾಳಿ ನಡೆಸುತ್ತಾ ನಮ್ಮ ಆಚರಣೆ ಮತ್ತು ಉಡುಪುಗಳನ್ನು ಉದ್ದೇಶಪೂರ್ವಕವಾಗಿ ವಿರೂಪಗೊಳಿಸುತ್ತಿವೆ. ಸರ್ಕಾರಗಳೂ ಕೊಡವ ಮತ್ತು ಕೊಡವ ಭಾಷಿಕ ಸಮುದಾಯಗಳಿಗೆ ಸಂವಿಧಾನ ಬದ್ಧವಾಗಿ ದೊರಕಬೇಕಾದ ಹಕ್ಕು ಮತ್ತು ಬೇಡಿಕೆಗಳಿಗೆ ಇದುವರೆಗೂ ಮನ್ನಣೆ ನೀಡದಿರುವುದು ವಿಪರ್ಯಾಸ. ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊAಡು ನಮ್ಮ ಸಾಂವಿಧಾನಿಕ ಹಕ್ಕು, ಸಂಸ್ಕೃತಿಯ ಭದ್ರತೆಗಾಗಿ ಹಾಗೂ ಜನಾಂಗೀಯ ಅಸ್ತಿತ್ವ ಕಾಪಾಡುವ ನಿಟ್ಟಿನಲ್ಲಿ ಕುಟ್ಟದಿಂದ ಮಡಿಕೇರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಕೊಡವ ಸಮಾಜಗಳು ಸಂಘಟನೆಗಳು, ಭಾಷಿಕ ಸಮುದಾಯಗಳ ಸಂಘಟನೆಗಳು ಸೇರಿದಂತೆ ಎಲ್ಲಾ ಕೊಡವ ಅಭಿಮಾನಿಗಳು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾನುವಾರ (ಫೆ.2) ಕುಟ್ಟದಿಂದ ಆರಂಭವಾಗುವ ಪಾದಯಾತ್ರೆ ಹುದಿಕೇರಿ, ಪೊನ್ನಂಪೇಟೆ, ಗೋಣಿಕೊಪ್ಪಲು, ವಿರಾಜಪೇಟೆ, ಮೂರ್ನಾಡು ಮೂಲಕ 6 ದಿನಗಳ ಕಾಲ ಕ್ರಮಿಸಿ ಫೆ. 7ರಂದು ಮಡಿಕೇರಿಗೆ ತಲುಪಲಿದೆ. ಇದೇ ವೇಳೆ ಗಾಳಿಬೀಡು, ತಾಳತ್ತಮನೆ, ಸುಂಟಿಕೊಪ್ಪ, ಮಕ್ಕಂದೂರು, ಚೆಟ್ಟಳ್ಳಿ ಭಾಗಗಳಿಂದಲೂ ಪ್ರತ್ಯೇಕವಾಗಿ ಆಗಮಿಸಲಿರುವ ತಂಡಗಳು ಫೀ.ಮಾ. ಕಾರ್ಯಪ್ಪ ವೃತ್ತದ ಬಳಿ ಜಮಾವಣೆಗೊಂಡು ಮಡಿಕೇರಿಯ ಮುಖ್ಯ ರಸ್ತೆಯ ಮೂಲಕ ಸಾಗಿ ಮಡಿಕೇರಿ ಜ. ತಿಮ್ಮಯ್ಯ ಕ್ರೀಡಾಂಗಣದ ಬಳಿ ಇರುವ ಕೊಡವ ಸಮಾಜ ಮಂದ್‌ನಲ್ಲಿ ಸಮಾವೇಶಗೊಳ್ಳಲಿದೆ. ನಂತರ ನಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸರ್ಕಾರದ ಪ್ರತಿನಿಧಿಗೆ ಸಲ್ಲಿಸಲಾಗುತ್ತದೆ.

ಈ ಪಾದಯಾತ್ರೆ ಅತ್ಯಂತ ಶಿಸ್ತುಬದ್ಧವಾಗಿ ಇರಲಿದ್ದು, ಯಾವುದೇ ಘೋಷಣೆ, ಭಾಷಣಗಳು ಇರುವುದಿಲ್ಲ. ಮಾರ್ಗದುದ್ದಕ್ಕೂ ಶುಚಿತ್ವಕ್ಕೆ ಆದ್ಯತೆ ನೀಡಲಾಗುವುದು. ಈ ಹೋರಾಟಕ್ಕೆ ಎಲ್ಲಾ ಜನಪ್ರತಿನಿಧಿಗಳನ್ನೂ ಆಹ್ವಾನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅಖಿಲ ಕೊಡವ ಸಮಾಜ ಕಾರ್ಯದರ್ಶಿ ಕೀತಿಯಂಡ ವಿಜಯಕುಮಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.