ಹಟ್ಟಿಚಿನ್ನದಗಣಿ: ತಾಲೂಕಾಗುವ ಎಲ್ಲಾ ಅರ್ಹತೆಗಳಿದ್ದರೂ ರಾಜಕೀಯ ಇಚ್ಛಾ ಶಕ್ತಿ ಕೊರತೆಯಿಂದ ಹಟ್ಟಿ ಪಟ್ಟಣದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಕಳೆದ 6 ತಿಂಗಳಿಂದ ಕುಡಿವ ನೀರಿನ ಸಮಸ್ಯೆ ತಲೆದೋರಿದ್ದು, ಇತ್ಯರ್ಥಪಡಿಸುವವರೆಗೆ ನಿರಂತರ ಹೋರಾಟ ನಡೆಸುವದಾಗಿ ಎಂದು ನವಭಾರತ ಹಿಂದು ದಲಿತ ಸಂಘಟನೆಯ ಜಿಲ್ಲಾಧ್ಯಕ್ಷ ವಿನೋದಕುಮಾರ್ ಹೇಳಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಕುಡಿವ ನೀರು ಪೂರೈಕೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಟ್ಟಿಯಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿವರೆಗೆ ಸಂಘಟನೆಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆ ಜನಸಂಖ್ಯೆಯಲ್ಲಿ 6ನೇ ಸ್ಥಾನ ಹೊಂದಿದ ಪಟ್ಟಣದಲ್ಲಿ ವಿವಿಧ ರಾಜ್ಯದ, ಜನರು ಕಾರ್ಮಿಕರು ವಾಸಿಸುತ್ತಿದ್ದಾರೆ. ಚಿನ್ನ ತೆಗೆಯುವ ಸ್ಥಳದಲ್ಲಿ ನೀರಿಗೆ ಹಣ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಪಟ್ಟಣಕ್ಕೆ ಪ್ರತ್ಯೇಕ ಶಾಶ್ವತ ಕುಡಿಯುವ ನೀರು ಒದಗಿಸುವುದು ಹಾಗೂ ಸಮಗ್ರ ಅಭಿವೃದ್ಧಿಗೆ ಜಿಲ್ಲಾಡಳಿತ ಸರ್ಕಾರ ಕ್ರಮಕೈಗೊಳ್ಳುವವರೆಗೆ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: ಕೆಲ ಅಧಿಕಾರಿಗಳು ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ, ಧರ್ಮಕ್ಕೂ ಆಡಳಿತಕ್ಕೂ ಸಂಬಂಧವಿಲ್ಲ: ಸಿದ್ದರಾಮಯ್ಯ
ಮಾಜಿ ಮಂಡಲ ಪ್ರಧಾನ ನರಸಿಂಗ್‌ಬಾನ್ ಠಾಕೂರ್ ಹಾಗೂ ಮಾಜಿ ಎಪಿಎಂಸಿ ನಿರ್ದೇಶಕ ಎನ್.ಸ್ವಾಮಿ ನಾಯಿಕೋಡಿ ಮಾತನಾಡಿ, ಕುಡಿವ ನೀರು ಪೂರೈಕೆಗಾಗಿ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಹಟ್ಟಿ ಪಟ್ಟಣ ಬಂದ್ ಮಾಡಿ ಪ್ರತಿಭಟಿಸಿದ್ದರು ಸಾರ್ವಜನಿಕರ ಹೋರಾಟಕ್ಕೆ ಜಿಲ್ಲಾಡಳಿತ ಯಾವುದೆ ಕವಡೆ ಕಿಮ್ಮತ್ತು ನೀಡುತ್ತಿಲ್ಲ. ನಿರ್ಲಕ್ಷೃ ಧೋರಣೆ ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಟ್ಟಿಯಿಂದ ಪ್ರಾರಂಭವಾದ ಪಾದಯಾತ್ರೆ ವಂದಲಿ, ಚಿಂಚರಕಿ, ನವಲಕಲ್, ಸಿರವಾರ, ಕಲ್ಮಲಾ ಮಾರ್ಗವಾಗಿ ಸಾಗಲಿದೆ. ದಿನವೊಂದಕ್ಕೆ 30 ಕಿ.ಮೀನಂತೆ ಕ್ರಮಿಸಿ ಮೂರನೇ ದಿನಕ್ಕೆ ರಾಯಚೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ಪಾದಯಾತ್ರೆಯಲ್ಲಿ 3 ಚಕ್ರದ ಸೈಕಲ್ ಮೂಲಕ ಹೊರಟಿದ್ದ ಅಂಗವಿಕಲ ಮಾಜಿ ಗ್ರಾಪಂ ಸದಸ್ಯ ನಿಂಗಪ್ಪ ರಾಮರಹೀಂ ಕಾಲನಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಸಂಹಟ್ಟಿ ನಗರ ಘಟಕದ ಅಧ್ಯಕ್ಷ ವೆಂಕಟೇಶ್ ಗಿರಿ, ಮಾಜಿ ಗ್ರಾ.ಪಂ ಸದಸ್ಯ ನಿಂಗಪ್ಪ ರಾಮರಹೀಮ್ ಕಾಲನಿ, ಪ್ರಮುಖರಾದ ಭೀಮರಾಯ ಭಜಂತ್ರಿ, ವೆಂಕೋಬ್ ಪವಾಡೆ, ಅಮರೇಶ್, ಮೌನೇಶ್, ಗೋವಿಂದ್ ನಾಯಕ್, ಚನ್ನಪ್ಪ, ನಿಂಗಯ್ಯ, ಬಸವರಾಜ್, ರಮೇಶ್, ದೇವರಾಜ್ ಬೈಚಬಾಳ್, ಶೌಕತ್, ಮಲ್ಲಿಕಾರ್ಜುನ್, ರವಿ ಉಳಿಮೇಶ್ವರ, ಮೌನೇಶ್ ಕಾಕಾನಗರ, ಶಿವಪುತ್ರಪ್ಪ, ಭರ್ಮಾಜಿ ಇತರಿದ್ದರು.