ಹುಬ್ಬಳ್ಳಿ: ಕಡ್ಡಾಯ ಸೇವಾ ಭದ್ರತೆಯನ್ವಯ ನೇಮಕಾತಿಪತ್ರ, ಸೇವಾ ಪುಸ್ತಕ ನಿರ್ವಹಣೆ, 60 ವರ್ಷದ ನಂತರವೇ ನಿವೃತ್ತಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನಗರದ ಚನ್ನಮ್ಮ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ನಂತರ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಧಾರವಾಡಕ್ಕೆ ಪಾದಯಾತ್ರೆ ಆರಂಭಿಸಿದರು.
ಇದಕ್ಕೂ ಮೊದಲು ಮಾತನಾಡಿದ ನೌಕರರ ಸಂಘದ ಮಹಾಪ್ರಧಾನ ಕಾರ್ಯದರ್ಶಿ ಶ್ರೀಶೈಲ ಗುಡದಿನ್ನಿ, ಅಧಿಕಾರಿಗಳ ನಿರ್ಲಕ್ಷ್ಯ ಬಹಳ ಇದೆ. ಸರ್ಕಾರಗಳು ತಾರತಮ್ಯ ನೀತಿ ಅನುರಿಸುತ್ತಿವೆ. ಆಡಳಿತ ಮಂಡಳಿಗಳು ಸರ್ಕಾರದ ಆದೇಶಗಳನ್ನು ಗಾಳಿಗೆ ತೂರುತ್ತಿವೆ. ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜ್ ಉಪನ್ಯಾಸಕರಿಗೆ ಕನಿಷ್ಠ ಮೂಲ ವೇತನ ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿಲ್ಲ ಎಂದರು ಆರೋಪಿಸಿದರು.
ವಿವಿಧ ಸಂಘಟನೆಗಳ ಪ್ರಮುಖರಾದ ಸಂದೀಪ ಬೂದಿಹಾಳ, ಅಮೃತ ಇಜಾರಿ ಮಾತನಾಡಿ, ಗುರುವಿಗೆ ಸರಿಯಾದ ಸ್ಥಾನಮಾನ, ಸೌಲಭ್ಯ ಸಿಗುತ್ತಿಲ್ಲ. ಹೀಗಾದರೆ ಇನ್ನುಳಿದವರ ಗತಿಯೇನು? ಎಂದು ಪ್ರಶ್ನೆ ಮಾಡಿದರು.
ಪ್ರಮುಖರಾದ ಸಂಜೀವ ಶಿರಗನಳ್ಳಿ, ಡಾ. ಬಸವರಾಜ ಅಂಗಡಿ, ಆರ್. ರಂಜನ, ರವೀಂದ್ರ ಪಾಟೀಲ, ಎಂ.ಪಿ.ಎಂ. ಷಣ್ಮುಖಯ್ಯ, ಈರಣ್ಣ ಎಮ್ಮಿ, ಆರ್.ಬಿ. ಗರಗ, ಎಸ್.ಎನ್. ನೆಗಳೂರಮಠ, ನವೀನಕುಮಾರ ಮಡಿವಾಳರ ಇತರರು ಇದ್ದರು.