ಹನೂರು : ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಇನ್ನು 10 ದಿನ ಬಾಕಿ ಇರುವಾಗಲೇ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ದಂಡು ಪಾದಯಾತ್ರೆ ಮೂಲಕ ಮ.ಬೆಟ್ಟಕ್ಕೆ ತೆರಳುತ್ತಿದ್ದಾರೆ.
ಮ.ಬೆಟ್ಟದಲ್ಲಿ ನಡೆಯುವ ದೀಪಾವಳಿ ಜಾತ್ರೆಗೆ ಪ್ರತಿ ವರ್ಷ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆ ಮೂಲಕ ಮ.ಬೆಟ್ಟಕ್ಕೆ ಆಗಮಿಸಿ ಅಲ್ಲಿಯೇ ನಾಲ್ಕೈದು ದಿನಗಳ ಕಾಲ ವಾಸ್ತವ್ಯ ಹೂಡುತ್ತಾರೆ. ಈ ವೇಳೆ ನಡೆಯುವ ವಿವಿಧ ಉತ್ಸವಗಳು ಹಾಗೂ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆಯುತ್ತಾರೆ. ಈ ಹಿಂದೆ ಜಾತ್ರೆ ಇನ್ನೇನು ನಾಲ್ಕೈದು ದಿನಗಳು ಬಾಕಿ ಇರುವಾಗ ಭಕ್ತರು ಪಾದಯಾತ್ರೆಯನ್ನು ಕೈಗೊಳ್ಳುತ್ತಿದ್ದರು. ಆದರೆ ಈ ಬಾರಿ ಜಾತ್ರೆ ನ.10ರಂದು ಆರಂಭವಾಗಲಿದ್ದು, 10 ದಿನ ಬಾಕಿ ಇದೆ. ಆದಾಗ್ಯೂ ಸಾವಿರಾರು ಭಕ್ತರು ಕೊಳ್ಳೇಗಾಲ - ಹನೂರು ಮಾರ್ಗವಾಗಿ ಮ.ಬೆಟ್ಟಕ್ಕೆ ತೆರಳುತ್ತಿದ್ದಾರೆ. ತಾಳುಬೆಟ್ಟದಲ್ಲಿ ರಾತ್ರಿ ವಾಸ್ತವ್ಯ ಹೂಡಿ ಮ.ಬೆಟ್ಟಕ್ಕೆ ತಲುಪಲಿದ್ದಾರೆ.
ಈಗಾಗಲೇ ಚಾಮರಾಜನಗರ ಸೇರಿದಂತೆ ಮೈಸೂರು, ಮಂಡ್ಯ, ರಾಮನಗರ, ಎಚ್.ಡಿ ಕೋಟೆ, ನಂಜನಗೂಡು, ನರಸೀಪುರ ಹಾಗೂ ಮಳವಳ್ಳಿ ಕಡೆಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಮ.ಬೆಟ್ಟಕ್ಕೆ ತೆರಳುತ್ತಿದ್ದಾರೆ. ಇದರಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವ ಸಹಾಯ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿರುವುದು ಒಂದೆಡೆಯಾದರೆ, ವಿವಿಧ ಗ್ರಾಮಗಳ ಗ್ರಾಮಸ್ಥರು ಚಂದಾ ರೂಪದಲ್ಲಿ ಹಣ ಸಂಗ್ರಹಿಸಿದ್ದು, ಮಾರ್ಗಮಧ್ಯದ ಅಲ್ಲಲ್ಲಿ ಅಡುಗೆಯನ್ನು ತಯಾರಿಸಿ ಒಟ್ಟಿಗೆ ಸೇರಿ ಸಹಭೋಜನ ಸ್ವೀಕರಿಸಿ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಾ ತಂಡೋಪತಂಡವಾಗಿ ತೆರಳುತ್ತಿದ್ದಾರೆ. ಈ ವೇಳೆ ಮಾದಪ್ಪನ ದೇವರ ಗುಡ್ಡರು ಕಂಸಾಳೆ ಬಾರಿಸುತ್ತಾ ಮಾದಪ್ಪನ ಹಾಡನ್ನು ಹಾಡುತ್ತಾ ತೆರಳಿದರೆ ಮಹಿಳೆಯರ ಗುಂಪು ಉಘೇ ಮಾದಪ್ಪ, ಜೈ ಮಹತ್ ಮಲೆಯಾ ಘೋಷಣೆಗಳನ್ನು ಕೂಗುತ್ತಾ ಉತ್ಸಾಹದಿಂದ ಮ.ಬೆಟ್ಟದತ್ತ ಹೆಜ್ಜೆ ಹಾಕುತ್ತಿರುವುದು ಕಳೆದ 2 ದಿನಗಳಿಂದ ಕಂಡು ಬರುತ್ತಿದೆ. ಮುಂಬರುವ ದಿನಗಳಲ್ಲಿ ಕಾಲ್ನಡಿಗೆಯ ಭಕ್ತರ ಸಂಖ್ಯೆ ಹೆಚ್ಚಾಗಲಿದೆ.