ತುಮಕೂರು : ಪರಿಶಿಷ್ಟ ಪಂಗಡ ಮೀಸಲಾತಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕುರುಬ ಸಮುದಾಯ ಹಮ್ಮಿಕೊಂಡಿರುವ ಹಕ್ಕೊತ್ತಾಯ ಪಾದಯಾತ್ರೆಗೆ ಜಾತ್ಯತೀತವಾಗಿ ಬೆಂಬಲ ವ್ಯಕ್ತವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
ಕಾಗಿನೆಲೆಯಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆ ಶನಿವಾರ ತುಮಕೂರು ತಾಲೂಕು ಕೋರಾಕ್ಕೆ ಆಗಮಿಸಿದ್ದು, ಜಾಗೃತಿ ಸಭೆಗೂ ಮುನ್ನ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ, ಕುಪ್ಪಾರ, ಮಾದಾರಚೆನ್ನಯ್ಯ, ಬೋವಿ ಸೇರಿ ವಿವಿಧ ಸಮುದಾಯಗಳ ಮಠಾಧೀಶರು, ರಾಜಕೀಯ ನಾಯಕರು ಪಾದಯಾತ್ರೆಗೆ ಬೆಂಬಲ ನೀಡಿದ್ದಾರೆ ಎಂದರು.
ಎಸ್ಟಿ ಹೊಸ ಬೇಡಿಕೆ ಅಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಕುರುಬ ಸಮುದಾಯ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿತ್ತು. ಆದರೆ, ಆ ನಂತರ ಎಸ್ಟಿ ಜಾತಿ ಪಟ್ಟಿಯಿಂದ ಕೈ ಬಿಡಲಾಗಿದೆ. ಹಾಗಾಗಿ, ಫೆ.7ರಂದು 10 ಲಕ್ಷಕ್ಕೂ ಹೆಚ್ಚು ಜನ ಬೆಂಗಳೂರಿನಲ್ಲಿ ಸೇರುವ ಮೂಲಕ ರಾಜ್ಯ, ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಿದ್ದೇವೆ ಎಂದರು. 1995ರಲ್ಲಿ ಸಂಸತ್ತಿನಲ್ಲೂ ಕೂಡ ಮಂಡನೆ ಆಗಿದ್ದು ಕುರುಬ ಅನ್ನುವ ಪದ ಬಿಟ್ಟು ಹೋಗಿದೆ. ಇನ್ನು ರಾಮಕೃಷ್ಣ ಹೆಗಡೆ ಅವರು 1986ರಲ್ಲಿ ಕುರುಬ ಸಮುದಾಯಕ್ಕೆ ಎಸ್ಟಿ ಸೌಲಭ್ಯ ನೀಡಿದ್ದರು. ಆದರೆ, ಯಾರೋ ಒಬ್ಬ ನ್ಯಾಯಾಲಯಕ್ಕೆ ಹೋದ ಕಾರಣ ಸೌಲಭ್ಯ ಕೈತಪ್ಪಿತು. ಗೊಂಡ, ಜೇನುಕುರುಬ ಎಲ್ಲವೂ ಒಂದೇ ಎಂದು ಸಿದ್ದರಾಮಯ್ಯ ಸರ್ಕಾರ ಸಹ ಈ ಹಿಂದೆ ಹೇಳಿತ್ತು. ಈ ಎಲ್ಲ ಕಾರಣದಿಂದ ಸೌಲಭ್ಯ ಕೇಳುತ್ತಿದ್ದೇವೆ ಎಂದರು.
ಕುಲಶಾಸ್ತ್ರ ಅಧ್ಯಯನ: ಪರಿಶಿಷ್ಟ ಪಂಗಡಕ್ಕೆ ಕುರುಬರನ್ನು ಸೇರಿಸುವುದರಿಂದ ಬೇರೆಯವರಿಗೆ ಅನ್ಯಾಯವಾಗುವುದಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಿ ಎನ್ನುವುದು ನಮ್ಮ ಆಗ್ರಹ. ಕುಲಶಾಸ್ತ್ರ ಅಧ್ಯಯನ ಆಗಬೇಕಿದೆ. ಕುರುಬ, ನಾಯಕ, ಬೇಡ, ಮಲಯರನ್ನು ಎಸ್ಟಿಗೆ ಸೇರಿಸಬೇಕು ಎನ್ನುವ ಕಡತ ಕೇಂದ್ರ ಸರ್ಕಾರಕ್ಕೆ ಹೋಗಿತ್ತು. ಆದರೆ ನಮಗೆ ಈ ಸೌಲಭ್ಯ ತಪ್ಪಿದೆ. ಅದನ್ನು ಸರಿಪಡಿಸಿ ಎನ್ನುತ್ತಿದ್ದೇವೆ ಎಂದು ಎಚ್.ಎಂ.ರೇವಣ್ಣ ಹೇಳಿದರು.
ಪರಿವಾರ, ತಳವಾರರನ್ನು ಕುಲಶಾಸ್ತ್ರ ಅಧ್ಯಯನ ಇಲ್ಲದೆ ಎಸ್ಟಿಗೆ ಸೇರಿಸಲಾಗಿದೆ. ಅದೇ ಪ್ರಕಾರ ನಮ್ಮನ್ನೂ ಸೇರಿಸಬೇಕು. ಈ ಹಿಂದೆ ಕುರುಬರು ಪಾದಯಾತ್ರೆ ಮಾಡಿ ಸೌಲಭ್ಯಗಳನ್ನು ಪಡೆದ ನಿದರ್ಶನವಿದೆ. ಈ ಹಿಂದೆ ಕನಕ ಗೋಪುರ ವಿಚಾರದಲ್ಲಿಯೂ ಹೋರಾಟ ಮಾಡಿ ಗೆದ್ದಿದ್ದೇವೆ ಎಂದರು. ಈ ಹೋರಾಟದಲ್ಲಿ ನಾವು ಕೆ.ಎಸ್.ಈಶ್ವರಪ್ಪ ಅವರನ್ನು ನಾಯಕರನ್ನಾಗಿ ಮಾಡುವುದಾಗಲಿ, ಸಿದ್ದರಾಮಯ್ಯ ಅವರನ್ನು ಕಡೆಗಣಿಸುವುದಾಗಲಿ ಮಾಡಿಲ್ಲ. ಕುರುಬರಿಂದ ಕುರುಬರಿಗಾಗಿ ಕುರುಬರಿಗೋಸ್ಕರ ನಡೆಯುತ್ತಿರುವ ಹೋರಾಟ ಇದು. ಯಾವುದೇ ಆರ್‌ಎಸ್‌ಎಸ್ ಸಂಘಟನೆ ಇಲ್ಲ. ಸಿದ್ದರಾಮಯ್ಯ ಅವರಿಗೆ ಬೇಡಿಕೆಗಳ ಬಗ್ಗೆ ಕೆಲ ಅನುಮಾನಗಳಿದ್ದು, ಅದನ್ನು ಬಗೆಹರಿಸಲಾಗಿದೆ. ಅವರು ಫೆ.7ರಂದು ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ರೇವಣ್ಣ ತಿಳಿಸಿದರು.
5 ಕೆಜಿ ತೂಕ ಕಡಿಮೆಯಾದ ಶ್ರೀಗಳು: ಜ.15ರಂದು ಕಾಗಿನೆಲೆಯಿಂದ ಆರಂಭವಾದ ಪಾದಯಾತ್ರೆ ಹಾವೇರಿ, ದಾವಣಗೆರೆ, ಚಿತ್ರದುರ್ಗ ಈಗ ತುಮಕೂರು ತಲುಪಿದೆ. ಪಾದಯಾತ್ರೆಯಲ್ಲಿ ಪ್ರತಿನಿತ್ಯ 25-20 ಕಿ.ಮೀ.,ನಡೆದಿದ್ದು 17ನೇ ದಿನದ ಹೊತ್ತಿಗೆ 5 ಕೆಜಿ ತೂಕ ಕಡಿಮೆ ಆಗಿದ್ದೇನೆ. ಆರೋಗ್ಯ ಚೆನ್ನಾಗಿದ್ದು, ಸದೃಢವಾಗಿದ್ದೇನೆ ಎಂದು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ಮುಸ್ಲಿಮರ ಮನೆಯಲ್ಲಿ ಶ್ರೀಗಳ ಪೂಜೆ: ಕಾಗಿನೆಲೆ ಕನಕಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದ ಪಾದಯಾತ್ರೆ ಶನಿವಾರ ಸಂಜೆ ತುಮಕೂರು ನಗರ ಪ್ರವೇಶಿಸಿತು. ತಾಲೂಕಿನ ಗಡಿಭಾಗ ಸೀಬಿ ದೇವಸ್ಥಾನದಲ್ಲಿ ಬೀಡುಬಿಟ್ಟಿದ್ದ ಪಾದಯಾತ್ರಿಗಳು ಶನಿವಾರ ಬೆಳಗ್ಗೆ ಅಲ್ಲಿಂದ ಹೊರಟು 9 ಗಂಟೆಗೆ ಕೋರಾ ತಲುಪಿದರು. ಈ ಸಂದರ್ಭದಲ್ಲಿ ಕೋರಾ ಗ್ರಾಪಂ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ನಜೀರ್ ಅಹ್ಮದ್ ಮನೆಯಲ್ಲಿ ಶ್ರೀಗಳ ಪೂಜೆ, ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿತ್ತು. ಮುಸ್ಲಿಮರ ಮನೆಯಲ್ಲಿ ಶ್ರೀಗಳು ಪೂಜೆ ಸಲ್ಲಿಸಿ, ಉಪಾಹಾರ ಸ್ವೀಕರಿಸಿ ಭಾವೈಕ್ಯತೆ ಮೆರೆದರು. ಮಧ್ಯಾಹ್ನ 2 ಗಂಟೆಗೆ ಜಾಗೃತಿ ಸಭೆ ಇದ್ದ ಹಿನ್ನೆಲೆಯಲ್ಲಿ ಶ್ರೀಗಳು ನಜೀರ್ ಅಹ್ಮದ್ ಮನೆ ಆವರಣದಲ್ಲೇ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅಲ್ಲೇ ಕೆಲಹೊತ್ತು ವಿಶ್ರಾಂತಿ ಮಾಡಿದರು. ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಚ್.ಎಂ ರೇವಣ್ಣ ಸಹ ಜತೆಯಲ್ಲಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮುರಳೀಧರ ಹಾಲಪ್ಪ ಸೇರಿ ಹಲವು ರಾಜಕೀಯ ಮುಖಂಡರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.