ಮಡಿಕೇರಿ:
ಪದಬಂಧಗಳನ್ನು ಬಿಡಿಸುವುದರಿಂದ ಹೊಸ ಪದಗಳ ಪರಿಚಯ ಮತ್ತು ಅವುಗಳ ಅರ್ಥಗಳನ್ನು ಕಲಿಯಲು ಸಹಾಯವಾಗುತ್ತದಲ್ಲದೆ ನಮ್ಮ ಶಬ್ದಭಂಡಾರ ಹೆಚ್ಚಿಸುವ ಮೂಲಕ ಭಾಷೆಯ ಮೇಲಿನ ಹಿಡಿತವನ್ನು ಬಲಪಡಿಸುತ್ತದೆ ಎಂದು ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜು ಪ್ರಭಾರ ಪ್ರಾಂಶುಪಾಲ ಎನ್.ಎಸ್. ಚಿದಾನಂದ ಹೇಳಿದರು. ಸ್ವಾತಂತ್ರö್ಯ ದಿನಾಚರಣೆ ಹಿನ್ನೆಲೆಯಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಪದಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಮಕ್ಕಳಲ್ಲಿ ಪತ್ರಿಕೆ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ವಿಜಯವಾಣಿ ದಿನಪತ್ರಿಕೆ ಹಲವಾರು ಕಾರ್ಯಕ್ರಮಗಳನ್ನು ವರ್ಷಪೂರ್ತಿ ನಡೆಸುತ್ತಿರುತ್ತದೆ. ಸ್ವಾತಂತ್ರö್ಯ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿರುವ ಪದಬಂಧ ಸ್ಪರ್ಧೆ ಕೂಡ ಇದರಲ್ಲಿ ಒಂದು. ಎಲ್ಲಾ ಭಾಷೆಯ ಪತ್ರಿಕೆಗಳಲ್ಲೂ ಪದಬಂಧ ಅಂಕಣ ಪ್ರತಿದಿನವೂ ಇರುತ್ತದೆ. ಪತ್ರಿಕೆ ಓದುವುದರ ಜತೆಗೆ ಪತ್ರಿಕೆಗಳಲ್ಲಿ ಇರುವ ಪದಬಂಧ ಬಿಡಿಸುವ ಹವ್ಯಾಸವನ್ನೂ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು.
ಪದಬಂಧಗಳನ್ನು ಬಿಡಿಸುವ ಹವ್ಯಾಸ ರೂಢಿಸಿಕೊಳ್ಳುವುದರಿಂದ ಅನೇಕ ಪ್ರಯೋಜನಗಳಿವೆ. ಪದಬಂಧ ಬಿಡಿಸುವ ಸಂದರ್ಭ ಹಿಂದಿನ ಜ್ಞಾನ ನೆನಪಿಸಿಕೊಳ್ಳಬೇಕು. ಒಗಟುಗಳನ್ನು ಪರಿಹರಿಸಲು ಗಮನ ಹರಿಸಬೇಕು. ಇದರಿಂದ ಜ್ಞಾಪಕಶಕ್ತಿ ಮತ್ತು ಏಕಾಗ್ರತೆ ಹೆಚ್ಚಲು ಸಹಕಾರಿ ಆಗುತ್ತದೆ. ಪದಬಂಧಗಳು ಮೆದುಳಿಗೆ ಉತ್ತಮ ವ್ಯಾಯಾಮ ನೀಡುತ್ತದೆ. ತರ್ಕ ಮತ್ತು ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಸುಧಾರಿಸುತ್ತದೆ. ಮಾನಸಿಕವಾಗಿ ಹೆಚ್ಚು ಚುರುಕಾಗಿರಿಸಲು ಸಹಕರಿಸುತ್ತದೆ.
ಪದಬಂಧಗಳನ್ನು ಬಿಡಿಸುವುದು ಬಿಡುವಿನ ವೇಳೆಯಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಯಾಗಿದೆ. ಇದರಿಂದ ಮನಸ್ಸನ್ನು ಬೇರೆ ವಿಷಯಗಳಿಂದ ದೂರವಿರಿಸಲು ಸಹಾಯ ಆಗುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಅನುಕೂಲಕಾರಿಯಾಗಿದೆ. ಪದಬಂಧಗಳಲ್ಲಿ ಇತಿಹಾಸ, ವಿಜ್ಞಾನ, ಕಲೆ, ಭೂಗೋಳ, ಮತ್ತು ಸಾಹಿತ್ಯದಂಥ ವಿವಿಧ ವಿಷಯಗಳ ಬಗ್ಗೆ ಪ್ರಶ್ನೆಗಳಿರುತ್ತವೆ. ಇದರಿಂದ ಸಾಮಾನ್ಯ ಜ್ಞಾನ ವಿಸ್ತರಿಸಲು ಸಹಾಯ ಆಗುತ್ತದೆ ಎಂದು ಹೇಳಿದರು.
ತೀರ್ಪುಗಾರರ ಪೈಕಿ ಒಬ್ಬರಾದ ಉಪನ್ಯಾಸಕಿ ಪಿ.ಆರ್. ಮುಕ್ತಕೇಶಿ ಮಾತನಾಡಿ ಇಂದಿನ ತಲೆಮಾರಿನ ವಿದ್ಯಾರ್ಥಿಗಳಲ್ಲಿ ಪತ್ರಿಕೆ ಓದುವ ಹವ್ಯಾಸ ಕಡಿಮೆ ಆಗುತ್ತಿದೆ. ಪದಬಂಧಗಳ ಬಗ್ಗೆ ಹೆಚ್ಚಿನವರಿಗೆ ಅರಿವು ಇಲ್ಲ. ಈ ನಿಟ್ಟಿನಲ್ಲಿ ವಿಜಯವಾಣಿ ಪತ್ರಿಕೆ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಪದಬಂಧ ಬಿಡಿಸುವುದು ಒಳ್ಳೆಯ ಮಾನಸಿಕ ಚಟುವಟಿಕೆ ಆಗಿದೆ. ಈ ಮೂಲಕ ತಮ್ಮ ಜ್ಞಾನವನ್ನೂ ವಿಸ್ತರಿಸಿಕೊಳ್ಳಬಹುದು. ಇಂಥ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಸಂದರ್ಭ ನಿಯಮಾವಳಿಗಳನ್ನು ಸ್ಪಷ್ಟವಾಗಿ ಗಮನಿಸಬೇಕು. ಸಂಘಟಕರು ನಿಗದಿಪಡಿಸಿದ ನಿಯಮಾವಳಿಗಳನ್ನು ಪಾಲಿಸದಿದ್ದರೆ ತೀರ್ಪುಗಾರರು ಅಂಕಗಳನ್ನು ಕಳೆಯುವ ಸಂದರ್ಭವೇ ಹೆಚ್ಚಾಗಿರುತ್ತದೆ ಎಂದರು.
ಉಪನ್ಯಾಸಕರಾದ ಕೆ.ಎಂ. ಅಭಿಲಾಶ್, ಪೂರ್ಣಿಮ, ಕೋಮಲ ಇದ್ದರು.
ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು 550ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು ವಿವಿಧ ತರಗತಿಗಳಿಂದ ಉಪನ್ಯಾಸಕರು ಆಯ್ಕೆ ಮಾಡಿದ 50 ವಿದ್ಯಾರ್ಥಿಗಳು ವಿಜಯವಾಣಿ ಪದಬಂಧ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಸ್ಪರ್ಧೆಗೆ ಅರ್ಧ ಗಂಟೆಯ ಕಾಲಮಿತಿ ನಿಗದಿಪಡಿಸಲಾಗಿತ್ತು. ಯೋಚನೆ ಮಾಡಿ ಪದಬಂಧ ಭರ್ತಿ ಮಾಡಬೇಕು. ಒಮ್ಮೆ ಭರ್ತಿ ಮಾಡಿದ ಉತ್ತರಗಳನ್ನು ಪದೇ ಪದೇ ಅಳಿಸುವುದು, ಹೊಡೆದುಹಾಕುವುದು ಮಾಡದಂತೆ ಸೂಚನೆ ನೀಡಲಾಗಿತ್ತು. ವಿಶೇಷ ಎಂದರೆ ನಿಗದಿಯಾಗಿದ್ದ 20 ಪ್ರಶ್ನೆಗಳಿಗೆ ಒಬ್ಬರು ಕೂಡ ಸರಿಯುತ್ತರ ಬರೆದಿರಲಿಲ್ಲ. ಹಾಗಾಗಿ ಅತಿ ಹೆಚ್ಚು ಸರಿ ಉತ್ತರಗಳನ್ನು ಬರೆದವರನ್ನು ವಿಜೇತರನ್ನಾಗಿ ತೀರ್ಪುಗಾರರು ಆಯ್ಕೆ ಮಾಡಿದರು. 18 ಸರಿ ಉತ್ತರ ಬರೆದ ಆರ್.ಎ. ಚೈತನ್ಯಾ ಪ್ರಥಮ ಬಹುಮಾನ ಗಳಿಸಿದರೆ, 17 ಸರಿ ಉತ್ತರ ಬರೆದ ಮೊಹಮ್ಮದ್ ಮೊಯಿನುದ್ದೀನ್ ದ್ವಿತೀಯ ಹಾಗೂ 14 ಸರಿ ಉತ್ತರ ಬರೆದ ಬಿ.ಎಲ್. ಫಾತಿಮತ್ ಹುಸೇನ್ ತೃತೀಯ ಬಹುಮಾನ ಗಳಿಸಿದರು.