ಮೈಸೂರು: ದೇಶದ ಸಾಮಾಜಿಕ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪ್ರತಿಯೊಬ್ಬ ಭಾರತೀಯನೂ ಪ್ರಯತ್ನಿಸಬೇಕು ಎಂದು ‘ಪ್ಯಾಡ್ ಮ್ಯಾನ್’ ಖ್ಯಾತಿಯ ಕೊಯುಮತ್ತೂರಿನ ಅರುಣಾಚಲಂ ಮರುಗನಂತಂ ಹೇಳಿದರು.
ಇಂಡಸ್ ಉದ್ಯಮಿಗಳ ಜಾಗತಿಕ ಸಂಸ್ಥೆ (ಟೈ ಗ್ಲೋಬಲ್) ಮೈಸೂರು ಘಟಕದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಸಂಜೆ ಟೈ ಜಾಗತಿಕ ಶೃಂಗಸಭೆ-2024ರ ಪೂರ್ವಭಾವಿ ಸಮ್ಮೇಳನದಲ್ಲಿ ಮಾತನಾಡಿದರು.
ಭಾರತ ಸಮಸ್ಯೆಗಳಿಂದ ತುಂಬಿರುವ ದೇಶ. ಇಲ್ಲಿ ಪ್ರತಿ ಹೆಜ್ಜೆಗೂ ಸಮಸ್ಯೆಗಳಿವೆ. ಯುರೋಪ್ ದೇಶಗಳಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಈ ರೀತಿ ಸಮಸ್ಯೆ ಎದುರಿಸಿದ ಅನುಭವವೂ ಆ ದೇಶದವರಿಗೆ ಇಲ್ಲ. ಆದ್ದರಿಂದ ಈ ಸಮಸ್ಯೆಗಳಿಗೆ ಅವರು ಪರಿಹಾರ ಹುಡುಕಲಾರರು. ಹೀಗಾಗಿ, ಸಂಕಷ್ಟಗಳಿಗೆ ಹೊಂದಿಕೊಂಡಿರುವ ಭಾರತೀಯರೇ ಇವುಗಳಿಗೆ ಪರಿಹಾರ ಶೋಧಿಸಬೇಕಾಗಿದೆ ಎಂದರು.
ವಿಶ್ವದ ಮೊದಲ ಬಾರಿ ಕಡಿಮೆ ವೆಚ್ಚದ ಸ್ಯಾನಿಟರಿ ಪ್ಯಾಡ್ ತಯಾರಿಕಾ ಯಂತ್ರ ಸಂಶೋಧನೆ ಮಾಡಿರುವ ಅವರು, ತಮ್ಮ ಸಾಧನೆಯನ್ನು ಸಭಿಕರ ಮುಂದೆ ಹಾಸ್ಯದ ಮೂಲಕ ತೆರೆದಿಟ್ಟರು.
‘ಭಾರತದಲ್ಲಿ ಶೇ.90ರಷ್ಟು ಮಹಿಳೆಯರು ಸ್ಯಾನಿಟರಿ ಪ್ಯಾಡ್ ಬಳಕೆ ಮಾಡಲ್ಲ. ಇದು ಬ್ರಿಟನ್ನರಿಗೆ ದೊಡ್ಡ ವಿಷಯ. ಆದರೆ, ಭಾರತೀಯರಿಗೆ ಇದು ವಿಷಯವೇ ಅಲ್ಲ. ಈ ಕುರಿತು ಬಹಳಷ್ಟು ಜನರಿಗೆ ಅರಿವಿಲ್ಲ. ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ನ್ಯೂಸ್ ಪೇಪರ್, ಎಲೆ, ಮರಳು, ಬೂದಿ ಬಳಕೆ ಮಾಡಿರುವ ಉದಾಹರಣೆಗಳಿವೆ ಎಂದು ಹೇಳಿದರು.
ಸ್ಯಾನಿಟರಿ ಪ್ಯಾಡ್ ಒಂದಕ್ಕೆ ಬಹುರಾಷ್ಟ್ರೀಯ ಕಂಪನಿಗಳು 60 ರೂಪಾಯಿ ನಿಗದಿ ಪಡಿಸಿದ್ದವು. ಒಂದು ಪ್ಯಾಡ್‌ನಲ್ಲಿ 10 ಗ್ರಾಂ ನಷ್ಟು ಹತ್ತಿ ಬಳಸಿದೆ. ಇಷ್ಟಕ್ಕೆ ಇಷ್ಟು ಹಣವೇ? ನಾಲ್ಕು ಪಟ್ಟು ಹೆಚ್ಚಿನ ಬೆಲೆ ನಿಗದಿ ಮಾಡಿದ್ದರಿಂದ ಬಡ ಕುಟುಂಬದ ಮಹಿಳೆಯರು ಪ್ಯಾಡ್ ಉಪಯೋಗದಿಂದ ದೂರ ಉಳಿದಿದ್ದರು. ಇದು ಹೊಸ ಅನ್ವೇಷಣೆಗೆ ಪ್ರೇರಣೆ ಆಯಿತು ಎಂದು ತಮ್ಮ ಸಾಧನೆಯ ಹಿಂದಿನ ಸ್ಪೂರ್ತಿಯನ್ನು ತಿಳಿಸಿದರು.
ಜೀವನದ ಅನಿವಾರ್ಯತೆಯಿಂದ 9ನೇ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ, ತಮಿಳುನಾಡಿನ ಕೊಯಮತ್ತೂರಿನ ವೆಲ್ಡಿಂಗ್ ವರ್ಕ್‌ಶಾಪ್‌ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದೆ. ಮದುವೆ ಬಳಿಕ ಈ ಸಮಸ್ಯೆ ಗಮನಕ್ಕೆ ಬಂದಿತು. 4 ಯಂತ್ರಗಳ ಮೂಲಕ 4 ಹಂತಗಳಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಸ್ಯಾನಿಟರಿ ಪ್ಯಾಡ್ ತಯಾರಿಸುವ ಮಾದರಿ ಸಿದ್ಧಪಡಿಸಿದೆ. ಅದಕ್ಕೆ ಮದ್ರಾಸ್ ಐಐಟಿ ಮೆಚ್ಚುಗೆ ಸೂಚಿಸಿತು. ನೂತನ ಅನ್ವೇಷಣೆಗಾಗಿ ನೀಡುವ ಪ್ರಶಸ್ತಿಯೂ ಒಲಿಯಿತು. ಅನ್ವೇಷಿಸುವ ಸ್ವಭಾವದಿಂದಲೇ ವರ್ಕ್‌ಶಾಪ್‌ನ ಸಾಮಾನ್ಯ ಸಹಾಯಕನಾದ ನಾನು, ದೇಶದ ಅತಿ ಪ್ರಮುಖ ಸಮಸ್ಯೆಗೆ ಅತ್ಯುತ್ತಮ ಪರಿಹಾರ ಕಲ್ಪಿಸಲು ಸಾಧ್ಯವಾಯಿತು ಎಂದರು.
ತಾನೊಬ್ಬನೇ ಕಡಿಮೆ ಬೆಲೆಯಲ್ಲಿ ಉತ್ಪಾದನೆ ಮಾಡುವುದಕ್ಕಿಂತಲೂ ದೇಶದ ಎಲ್ಲ ಮಹಿಳೆಯರು, ಸಂಘಗಳಿಗೂ ಇದರ ಉಪಯೋಗ ನೀಡಲು ಜಯಶ್ರೀ ಇಂಡಸ್ಟ್ರೀಸ್ ಮೂಲಕ 80 ಸಾವಿರ ರೂಪಾಯಿಗೆ ಯಂತ್ರವನ್ನೇ ಸಿದ್ಧ ಪಡಿಸಿ ಮಾರಾಟ ಮಾಡಿದೆ. ಈ ಯಂತ್ರಗಳು ಈಗ ದೇಶ-ವಿದೇಶಗಳ ಅನೇಕ ಭಾಗಗಳಲ್ಲಿ ಉಪಯೋಗಿಸಲಾಗುತ್ತಿದೆ ಎಂದರು.
ಉದ್ಯಮಿಗಳಾದ ಡಾ.ಅಲೋಕ್ ಗುಪ್ತಾ, ಡಾ.ಜಗನ್ನಾಥ್ ಶೈಣೆ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಯೋಗ ಗುರು ಡಾ.ರಾಘವೇಂದ್ರ, ಪ್ರಜಾ ಕುಟೀರ ಆಯುರ್ವೇದ ಸೆಂಟರ್‌ನ ನಿರ್ದೇಶಕ ಡಾ.ಎನ್.ವಿ.ಕೃಷ್ಣಮೂರ್ತಿ, ನವ ಉದ್ಯಮಿಗಳಾದ ಆರ್.ಜಿ.ಸಿಂಗ್, ಆದರ್ಶ್ ಸುಧೀಂದ್ರ, ಡಾ.ಚೈತ್ರ ನಾರಾಯಣ್, ವಿನಯ್‌ಬಾಬು, ಟೈ ಸಂಸ್ಥೆಯ ಜಿಲ್ಲಾ ಪದಾಧಿಕಾರಿಗಳಾದ ಮಹೇಶ್ ಕಟ್ಟಾಳೆ, ಮುಕುಂದ ಇನ್ನಿತರರಿದ್ದರು.