ಮಂಗಳೂರು: ‘ಪಚ್ಚನಾಡಿ’ ಎಂದರೆ ತ್ಯಾಜ್ಯ ಸುರಿಯುವ ಪ್ರದೇಶ ಎನ್ನುವ ಭಾವನೆಯಿದ್ದು, ಇದಕ್ಕೆ ಪೂರಕವೆಂಬಂತೆ ಡಂಪಿಂಗ್ ಯಾರ್ಡ್ ಪ್ರದೇಶದ ರಸ್ತೆಯ ಎರಡೂ ಬದಿ ಅನಾಗರಿಕ ಸಂಸ್ಕೃತಿಯ ಜನರು ಎಸೆದು ಹೋಗಿರುವ ತ್ಯಾಜ್ಯ ರಾಶಿ ಬಿದ್ದಿವೆ.
ಮಂಗಳೂರು ಮಹಾ ನಗರ ವ್ಯಾಪ್ತಿಯಲ್ಲಿ ಸಂಗ್ರಹಿಸಲಾಗುವ ದಿನವೊಂದಕ್ಕೆ ಟನ್‌ಗಟ್ಟಲೆ ತ್ಯಾಜ್ಯವನ್ನು ಸಂಸ್ಕರಣೆ ಮಾಡಿ ವಿಲೇವಾರಿ ಮಾಡುವ ಕೆಲಸ ಪಚ್ಚನಾಡಿ ವಾರ್ಡ್ ವ್ಯಾಪ್ತಿಯಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಡೆಯುತ್ತದೆ. ಇಲ್ಲಿ ತ್ಯಾಜ್ಯ ವಿಲೇವಾರಿ ಪ್ರದೇಶವೆಂದು ಎಲ್ಲೆಂದರಲ್ಲಿ ಕಸ ಎಸೆಯುವುದು ಕಂಡ ಬರುತ್ತಿದೆ. ತೆರವುಗೊಳಿಸಿದರೂ ಜನರು ಕಾರು, ದ್ವಿಚಕ್ರ ವಾಹನಗಳಲ್ಲಿ ಬಂದು ಮತ್ತೆ ಅಲ್ಲಿಯೇ ಎಸೆದು ಹೋಗುತ್ತಿದ್ದು, ಸ್ವಚ್ಛತೆಗೆ ಸವಾಲಾಗಿ ಪರಿಣಮಿಸಿದೆ.
ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳ ಉಳಿಕೆ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲ, ಗೋಣಿ ಚೀಲಗಳಲ್ಲಿ ತುಂಬಿ ತಂದು ರಸ್ತೆ ಬದಿಯಲ್ಲಿ ಸುರಿದಿರುವುದು ಕಂಡು ಬರುತ್ತಿದೆ. ನೀರಿನ ಬಾಟಲಿಗಳು, ಆಹಾರ ವಸ್ತುಗಳನ್ನು ತಿನ್ನಲು ಉಪಯೋಗಿಸುವ ತಟ್ಟೆಗಳು, ಚಮಚ, ಪ್ಲಾಸ್ಟಿಕ್ ಲೋಟಗಳು ಸಹಿತ ನಿರುಪಯುಕ್ತ ಬೆಡ್‌ಗಳು, ಕಮೋಡ್‌ಗಳು ಎಲ್ಲವೂ ಪಚ್ಚನಾಡಿಯ ರಸ್ತೆ ಬದಿಯಲ್ಲಿವೆ. ದೊಡ್ಡ ಪ್ರಮಾಣದ ತ್ಯಾಜ್ಯಗಳನ್ನು ರಾತ್ರಿ ವೇಳೆ ಎಸೆದಿರುವ ಕುರುಹುಗಳು ಇವೆ. ಉಳಿದಂತೆ ಹಗಲು ವಾಹನಗಳಲ್ಲಿ ಹೋಗುವವರು ಎಸೆದು ಹೋಗುವುದು ಸಾಮಾನ್ಯವಾಗಿದೆ.
ಸಿಸಿ ಕ್ಯಾಮರಾ ನಿಗಾ ಅವಶ್ಯ: ಡಂಪಿಂಗ್ ಯಾರ್ಡ್ ಪ್ರದೇಶ ಭಾಗಶಃ ನಿರ್ಜನವಾಗಿದೆ. ರಸ್ತೆ ಬದಿಯಲ್ಲಿ ಯಾರ್ಡ್‌ನ ಸೆಕ್ಯುರಿಟಿಯವರನ್ನು ಹೊರತುಪಡಿಸಿ ಬೇರೆ ಯಾರೂ ಇರುವುದಿಲ್ಲ. ಕೆಲವು ವೇಳೆ ವಾಹನ ಸಂಚಾರವೂ ವಿರಳವಾಗಿರುತ್ತದೆ. ರಾತ್ರಿ ವೇಳೆ ಲಾರಿಗಳಲ್ಲಿ ತ್ಯಾಜ್ಯ ತಂದು ಸುರಿದರೂ ಕೇಳುವವರಿಲ್ಲ. ರಸ್ತೆಯುದ್ದಕ್ಕೂ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ನಿಗಾ ವಹಿಸಬೇಕು ಎಂದು ಪರಿಸರವಾದಿ ಕೃಷ್ಣಪ್ಪ ಬೋಂದೆಲ್ ಒತ್ತಾಯಿಸಿದ್ದಾರೆ.
ಬೀದಿ ನಾಯಿಗಳ ಕಾಟ: ಪಚ್ಚನಾಡಿ ಪರಿಸರದಲ್ಲಿ ನೂರಾರು ಸಂಖ್ಯೆಯಲ್ಲಿ ಬೀದಿನಾಯಿಗಳಿವೆ. ಇಲ್ಲಿ ಉಳಿಕೆಯಾದ ಆಹಾರ ವಸ್ತುಗಳನ್ನು ಎಸೆದು ಹೋಗುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಅದನ್ನು ತಿಂದು ಬೀದಿ ನಾಯಿಗಳು ಬದುಕುತ್ತಿರುತ್ತವೆ. ಕೆಲವೊಮ್ಮೆ ದ್ವಿಚಕ್ರ ವಾಹನಗಳಲ್ಲಿ ಹೋಗುವವರನ್ನು ಅಟ್ಟಿಸಿಕೊಂಡು ಬರುತ್ತವೆ. ವಾಹನಗಳಿಗೆ ಅಡ್ಡ ಬರುವಾಗ ಅಪಘಾತಗಳಿಗೂ ಕಾರಣವಾಗುತ್ತಿವೆ. ಸ್ಥಳೀಯ ಶಾಲಾ ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ರಸ್ತೆ ಬದಿಗಳಲ್ಲಿ, ನಿರ್ಜನ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಸುಶಿಕ್ಷಿತ, ಪ್ರಜ್ಞಾವಂತ, ಉನ್ನತ ಸ್ಥಾನದಲ್ಲಿರುವವರೇ ವಾಹನಗಳಲ್ಲಿ ಬಂದು ರಸ್ತೆ ಬದಿ ಮನೆಯ ತ್ಯಾಜ್ಯ ಎಸೆದು ಹೋಗುತ್ತಿರುವುದು ವಿಪರ‌್ಯಾಸ. ಸಿಸಿ ಕ್ಯಾಮರಾ ನಿಗಾ ಇಟ್ಟು, ಕಸ ಎಸೆಯುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು.
ಕೃಷ್ಣಪ್ಪ ಬೋಂದೆಲ್
ಪರಿಸರವಾದಿ