ಆರ್.ಬಿ.ಜಗದೀಶ್ ಕಾರ್ಕಳ
ಜನಪ್ರತಿನಿಧಿ ಹಾಗೂ ಇಲಾಖಾಧಿಕಾರಿಗಳ ಇಚ್ಛಾಶಕ್ತಿಗೆ ಪೂರಕವಾಗಿ ಸರ್ಕಾರದಿಂದ ಅನುದಾನ ಲಭಿಸಿದಾಗ ಅಭಿವೃದ್ಧಿ ಕೆಲಸಗಳು ತ್ವರಿತಗತಿಯಲ್ಲಿ ನಡೆಯಲು ಸಾಧ್ಯ ಎಂಬುದಕ್ಕೆ ಪಾಜಿಗುಡ್ಡೆ ಅಪಾಯಕಾರಿ ತಿರುವು ರಸ್ತೆ ಅಭಿವೃದ್ಧಿ ಕಾಮಗಾರಿ ಇತ್ತೀಚಿನ ಉದಾಹರಣೆ.
ಬಜಗೋಳಿಯಿಂದ ಹೊಸ್ಮಾರು ಕಡೆ ಹೋಗುವಾಗ ಪಾಜಿಗುಡ್ಡೆ ಎಂಬಲ್ಲಿ ರಸ್ತೆ ತಿರುವು ಇದೆ. ಇಲ್ಲಿ ಹಲವಾರು ವಾಹನಗಳ ಚಾಲಕರು ಅಪಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರದೇಶವನ್ನು ಅಪಾಯಕಾರಿ ವಲಯವಾಗಿ ಲೋಕೋಪಯೋಗಿ ಇಲಾಖೆ ಘೋಷಿಸಿದೆ. ಈ ಬಗ್ಗೆ ವಿಜಯವಾಣಿ ಸಮಗ್ರ ಸರಣಿ ವರದಿ ಪ್ರಕಟಿಸಿ ಜಿಲ್ಲಾಡಳಿತವನ್ನು ಎಚ್ಚರಿಸಿತ್ತು. ಅದಾದ ಬಳಿಕ ಅನುದಾನ ಮಂಜೂರಾಗಿ ಕಾಮಗಾರಿ ನಡೆಯುತ್ತಿದೆ.
ಪಾಜಿಗುಡ್ಡೆ ಅಪಾಯಕಾರಿ ತಿರುವು ರಸ್ತೆ ಬದಲಾಗಿ ಹೊಸ ರಸ್ತೆ ನಿರ್ಮಿಸುವ ಯೋಜನೆ ರೂಪುರೇಷೆ ಸಿದ್ಧಪಡಿಸುವಂತೆ ಶಾಸಕ ವಿ.ಸುನೀಲ್‌ಕುಮಾರ್ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದು, ಅದರಂತೆ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದೆ. ಪಾಜಿಗುಡ್ಡೆ ಸಂಪರ್ಕಿಸುವ ಮುನ್ನವೇ ಅಲ್ಲಿಂದ ಎಡಕ್ಕೆ ತಿರುವು ಪಡೆದು ಚೆಂಡೆ ಬಸದಿ ರಸ್ತೆಯಾಗಿ ಹರಿಯಪ್ಪ ಕರೆ ಸಂಪರ್ಕಿಸುವ ನೂತನ ರಸ್ತೆ ನಿರ್ಮಾಣದ ಯೋಜನೆ ಇದು. ಹೊಸ ರಸ್ತೆ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧಪಡಿಸಿದ ಬಹುತೇಕ ಭಾಗ ಅರಣ್ಯ ಇಲಾಖೆ ಅಧೀನದಲ್ಲಿ ಇರುವುದರಿಂದ ಇಲಾಖೆ ಆಕ್ಷೇಪದಿಂದ ಈ ಪ್ರಸ್ತಾವಕ್ಕೆ ಅಡ್ಡಿಯಾಯಿತು.
ಪರ್ಯಾಯ ಮಾರ್ಗ
ಹೊಸ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಆಕ್ಷೇಪದ ಮಾಹಿತಿ ಹೊರಬೀಳುತ್ತಿದ್ದಂತೆ ಪಾಜಿಗುಡ್ಡೆ ಏರುರಸ್ತೆಯನ್ನು ತಗ್ಗಿಸುವ ಮೂಲಕ ಪರ್ಯಾಯ ಮಾರ್ಗ ಕಂಡುಕೊಳ್ಳಲು ಲೋಕೋಪಯೋಗಿ ಇಲಾಖೆ ಮುಂದಾಗಿ ಮೊದಲ ಹಂತದಲ್ಲಿ ಸುಮಾರು 28 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿದೆ. ಬಜಗೋಳಿಯಿಂದ ಪಾಜಿಗುಡ್ಡೆಗೆ ಹೋಗುವಾಗ ರಸ್ತೆ ಏರುಮುಖ ಹಾಗೂ ತಿರುವು ಮುರುವಿನಿಂದ ಕೂಡಿದ್ದು, ಮುಂದೆ ಇಳಿಜಾರು ಹೊಂದಿದೆ. ಪ್ರಸ್ತುತ ಗುಡ್ಡೆಯನ್ನು ಸುಮಾರು ಎರಡು ಮೀಟರ್ ತಗ್ಗಿಸಲು ಯೋಜನೆ ರೂಪಿಸಿ ಕೆಲಸ ನಡೆಯುತ್ತಿದೆ. ಅಪಾಯಕಾರಿ ತಿರುವು ಭಾಗದ ರಸ್ತೆ ವಿಸ್ತರಿಸುವ ಕಾಮಗಾರಿ ಸಾಗುತ್ತಿದೆ. 135 ಮೀಟರ್ ರಸ್ತೆಯ ಅಭಿವೃದ್ಧಿ ಕಾಮಗಾರಿಯೂ ಇದರಲ್ಲಿ ಒಳಗೊಂಡಿದ್ದು, ಆ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಯೋಗ್ಯ ರಸ್ತೆಯಾಗಿ ಮಾರ್ಪಡಾಗಲಿದೆ.
ತೀರ್ಥಕ್ಷೇತ್ರ ಸಂಪರ್ಕಿಸುವ ರಸ್ತೆ
ಹೊರನಾಡು, ಶೃಂಗೇರಿ, ಉಡುಪಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಮೂಡುಬಿದಿರೆ ಸಹಿತ ವಿವಿಧ ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ ರಸ್ತೆ ಬಜಗೋಳಿ-ಹೊಸ್ಮಾರು ರಾಜ್ಯ ಹೆದ್ದಾರಿಯಾಗಿದೆ. ಪ್ರತಿದಿನ ನಾನಾ ಕಡೆಗಳಿಂದ ಯಾತ್ರಾರ್ಥಿಗಳ ವಾಹನಗಳು ಇದೇ ರಸ್ತೆಯಾಗಿ ಓಡಾಡುತ್ತಿದ್ದು, ಅಂಕುಡೊಂಕು, ಏರು ತಗ್ಗಿನಿಂದ ಕೂಡಿದ ಈ ರಸ್ತೆಯಿಂದಾಗಿ ವಾಹನಗಳ ಓಡಾಟಕ್ಕೆ ಕಷ್ಟಕರವಾಗಿತ್ತು.
ಶಾಸಕ ವಿ.ಸುನೀಲ್ ಕುಮಾರ್ ಮುತುವರ್ಜಿಯಿಂದ ಪಾಜಿಗುಡ್ಡೆ ಪರಿಸರದಲ್ಲಿ ಹಾದುಹೋಗಿರುವ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಬಜಗೋಳಿ-ಪಾಜಿಗುಡ್ಡೆ ನಡುವಿನ ಅಂಕುಡೊಂಕು ರಸ್ತೆಯನ್ನು ಕೆಲ ವರ್ಷಗಳ ಹಿಂದೆ ನೇರಗೊಳಿಸಲಾಗಿದ್ದು, ಅದಕ್ಕೂ ಮುನ್ನ ನಲ್ಲೂರಿನಲ್ಲಿ ಅಂಕುಡೊಂಕು ರಸ್ತೆಯನ್ನು ನೇರಗೊಳಿಸಿ ವಿಸ್ತರಿಸುವ ಮೂಲಕ ಅಪಘಾತ ತಡೆಗಟ್ಟಲಾಗಿದೆ.
ಸುಂದರ, ಕಾರ್ಯನಿರ್ವಹಕ ಹಿರಿಯ ಅಭಿಯಂತ, ಲೋಕೋಪಯೋಗಿ ಇಲಾಖೆ ಕಾರ್ಕಳ