ಮಂಗಳೂರು: ಸಂಘ ಹಾಗೂ ಸಂಘಟನೆ ಬೆಳೆದಾಗ, ಸಮಾಜದ ಬೆಳವಣಿಗೆಯಾಗುತ್ತದೆ. ಸದಸ್ಯರೆಲ್ಲರೂ ಪ್ರೀತಿ, ಮಾನವೀಯತೆ ಹಾಗೂ ಅಭಿಮಾನದಿಂದ ಒಗ್ಗೂಡಿ ಸಂಘಟನೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಅಂಧರ ಸೇವಾ ಸಂಘದ ಕಾರ್ಯದರ್ಶಿ ಪಿ. ರವೀಂದ್ರರಾವ್ ಹೇಳಿದರು.
ನಗರದ ಹೊಟೇಲ್ ವುಡ್ ಲ್ಯಾಂಡ್ಸ್‌ನಲ್ಲಿ ನಡೆದ ಸಂಘದ 44ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿರುವ ಅಶಕ್ತರಿಗೆ ಹಾಗೂ ದೃಷ್ಟಿಹೀನರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳಿಗೆ ನಮ್ಮ ಸಂಸ್ಥೆಯಿಂದ ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಉಚಿತವಾಗಿ ನಿರಂತರವಾಗಿ ನೇತ್ರ ತಪಾಸಣೆಯನ್ನು ಸತತ 44 ವರ್ಷಗಳಿಂದ ನಡೆಸುತ್ತಾ ಬರುತ್ತಿದ್ದು, ಕಣ್ಣಿನ ದೃಷ್ಟಿ ಹಾಗೂ ನೊಂದವರಿಗೆ ಬೆಳಕನ್ನು ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಜೊತೆ ಕಾರ್ಯದರ್ಶಿ ಪಿ. ಶೋಭಾ ರಾವ್ ಸ್ವಾಗತಿಸಿ, 2024-2025ರ ವಾರ್ಷಿಕ ವರದಿಯನ್ನು ವಾಚಿಸಿದರು. ನಂತರ ಸಂಘದ ಮುಂದಿನ ವರ್ಷಗಳಲ್ಲಿ 12 ಉಚಿತ ಕಣ್ಣಿನ ತಪಾಸಣೆಯನ್ನು ಗ್ರಾಮಾಂತರ ಪ್ರದೇಶದಲ್ಲಿ ಜಾತಿ ಮತ ಬೇಧವಿಲ್ಲದೆ ಮಾಡುವ ಬಗ್ಗೆ ಚರ್ಚೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಸಂಘಕ್ಕೆ ಎಸ್. ಜಿ. ಹೆಗ್ಡೆಯವರು ಎಂಡೋಮೆಂಟ್ ಫಂಡ್ಸ್ ಗೆ 10,000 ರೂ. ನೀಡಿದರು.
ಸುಮಾರು 3 ದಶಕಗಳಿಂದ ನಿರಂತರವಾಗಿ ಸಂಘದ ವಿವಿಧ ಪದಾಧಿಕಾರಿಗಳಾಗಿ ಸೇವೆಯನ್ನು ಸಲ್ಲಿಸಿರುವ ಅಧ್ಯಕ್ಷ ವೈ.ಆರ್.ಭಟ್ ಅವರನ್ನು ಸನ್ಮಾನಿಸಲಾಯಿತು. ಕೋಶಾಧಿಕಾರಿ ಎಂ.ವಿ. ಸುಬ್ರಹ್ಮಣ್ಯ ಅವರನ್ನು ನಿವಾಸದಲ್ಲಿ ಸನ್ಮಾನಿಸಲಾಯಿತು.
ಸಂಘದ ಸದಸ್ಯರಾದ ಪಿ. ಸುರೇಂದ್ರ ರಾವ್, ಕೆ.ಎಸ್. ಹೊಳ್ಳ, ತಾರಾ ಹೊಳ್ಳ ಶುಭರಾವ್, ಅಂಬಾ ಕಾಮತ್, ಮಲ್ಲಿಕ ಅಶೋಕ್, ಉಷಾ ರಾವ್ ಮತ್ತು ಸತೀಶ್ ರಾವ್, ಡಾ.ಪಿ. ಸುಬ್ಬ ರಾವ್ ದಂಪತಿ ಹಾಗೂ ಡಾ. ಜಗದೀಶ್ ದಂಪತಿ ಹಾಗೂ ಡಾ. ಸುಪ್ರಸಾದ್ ರಾವ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಪಿ. ರವೀಂದ್ರರಾವ್ ವಂದಿಸಿದರು.