ಜಿಲ್ಲೆ

ಪಿ.ಆರ್.ತಿಪ್ಪೇಸ್ವಾಮಿ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭ ಅಂಗವಾಗಿ ‘ಚಿತ್ರಕಲಾ ಪ್ರದರ್ಶನ, ಸ್ಪರ್ಧೆ, ಪ್ರಾತ್ಯಕ್ಷಿಕೆ ಮತ್ತು ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ

ಅವಿನಾಶ್ ಜೈನಹಳ್ಳಿ

ಮೈಸೂರು: ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪಿ.ಆರ್.ತಿಪ್ಪೇಸ್ವಾಮಿ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದ ಅಂಗವಾಗಿ ‘ಚಿತ್ರಕಲಾ ಪ್ರದರ್ಶನ, ಸ್ಪರ್ಧೆ, ಪ್ರಾತ್ಯಕ್ಷಿಕೆ ಮತ್ತು ಪ್ರಶಸ್ತಿ ಪ್ರದಾನ’ ಕಾರ್ಯಕ್ರಮವನ್ನು ಸೆ.18 ರಿಂದ 20ರವರೆಗೆ ವಿಜಯನಗರ 2ನೇ ಹಂತದ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್‌ನಲ್ಲಿ ಆಯೋಜಿಸಲಾಗಿದೆ.

ಕರ್ನಾಟಕ ಲಲಿತಕಲಾ, ಶಿಲ್ಪಕಲಾ, ಜಾನಪದ ಅಕಾಡೆಮಿಗಳು ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ, ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್, ಕದಂಬ ರಂಗ ವೇದಿಕೆ, ಚಿತ್ರವನ ರೆಸಾರ್ಟ್ ಹಾಗೂ ರಾಮ್‌ಸನ್ಸ್ ಕಲಾ ಪ್ರತಿಷ್ಠಾನದ ಸಹಯೋಗದಲ್ಲಿ ಮೂರು ದಿನಗಳವರೆಗೆ ಕಾರ್ಯಕ್ರಮ ನಡೆಯಲಿದೆ. 20 ಹಿರಿಯ ಕಲಾವಿದರು, ಕಲಾ ಪೋಷಕರು ಹಾಗೂ ಯುವ ಕಲಾವಿದರಿಗೆ ‘ಪಿಆರ್‌ಟಿ ಕಲಾಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ.

18 ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಚಿತ್ರಕಲಾ ಶಿಬಿರವನ್ನು, ಹಿರಿಯ ಕಲಾವಿದ ಬಿ.ಪಿ.ರಾಮಕೃಷ್ಣ ಚಿತ್ರಕಲಾ ಪ್ರದರ್ಶನವನ್ನು, ಶಿಲ್ಪ ಕಲಾವಿದ ವಿಶ್ವಕರ್ಮ ಆಚಾರ್ಯ ಶಿಲ್ಪಕಲಾ ಪ್ರಾತ್ಯಕ್ಷಿಕೆಯನ್ನು ಹಾಗೂ ಉಪನ್ಯಾಸಕ ಸಯದ್ ಆಸೀಫ್ ಆಲಿ ಚಿತ್ರಕಲಾ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಫೆಲೋಶಿಪ್ ಇನ್ ಕಂಪನಿ ಸೆಕ್ರೆಟರಿ ವೀರೇಶ್ ಮೈಸೂರ್ ಜಗದೀಶ್ ಅವರು ಪಿಆರ್‌ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ.

19 ರಂದು ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಚಿತ್ರಕಲಾ ಸ್ಪರ್ಧೆ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ. ಸ್ಪರ್ಧೆಯಲ್ಲಿ ತುಮಕೂರು, ಧಾರವಾಡ, ಬೀದರ್ ಸೇರಿದಂತೆ ರಾಜ್ಯಾದ್ಯಂತ 15 ಕಲಾವಿದರು ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಸ್ಪರ್ಧೆಗೆ ಚಾಲನೆ ನೀಡಲಿದ್ದು, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುದರ್ಶನ್, ಪಿಆರ್‌ಟಿ ಟ್ರಸ್ಟ್ ನಿರ್ದೇಶಕ ಸಿ.ಚಿಕ್ಕಣ್ಣ ಭಾಗವಹಿಸಲಿದ್ದಾರೆ.

20 ರಂದು ಸಂಜೆ 4 ಗಂಟೆಗೆ ಪಿ.ಆರ್.ತಿಪ್ಪೇಸ್ವಾಮಿ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜತೆಗೆ ‘ಪಿಆರ್‌ಟಿ ಕಲಾಪ್ರಶಸ್ತಿ’ಯನ್ನು ಪ್ರದಾನ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸಮಾರೋಪ ಭಾಷಣ ಮಾಡಲಿದ್ದಾರೆ. ಶಾಸಕ ಕೆ.ಹರೀಶ್‌ಗೌಡ ಬಹುಮಾನ ವಿತರಣೆ ಮಾಡುವರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಪಿಆರ್‌ಟಿ ಭಾವ ಶಿಲ್ಪಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ವಿವಿಧ ಅಕಾಡೆಮಿಗಳ ಅಧ್ಯಕ್ಷರಾದ ಪ.ಸ.ಕುಮಾರ್, ಡಾ.ಮಾನಸ, ಎಂ.ಸಿ.ರಮೇಶ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.