ವಿಜಯವಾಣಿ ಸುದ್ದಿಜಾಲ ಧಾರವಾಡ
ಭೂಮಿಯ ಮೇಲೆ ಮಾನವ ಹಾಗೂ ಇತರ ಜೀವರಾಶಿಗಳಿಗೆ ರಕ್ಷಾ ಕವಚವಾದ ಓಝೋನ್ ಪದರು ವಾಯು ಮಾಲಿನ್ಯದಿಂದ ನಾಶವಾಗುತ್ತಿರುವುದು ಆತಂಕಕಾರಿ ಘಟನೆ ಎಂದು ಮೊರಬ ಕಾಲೇಜಿನ ಪ್ರಾಚಾರ್ಯ ಸೈಯದ್ ಯಾಜ್ ಅಹ್ಮದ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪವು ವಿಶ್ವ ಓಝೋನ್ ದಿನ ನಿಮಿತ್ತ ಸುಳ್ಳದ ಶ್ರೀ ಶಿವಾನಂದ ಭಾರತಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಓಝೊನ್ ಪದರು ರಕ್ಷಣೆಯಲ್ಲಿ ಸಹಕಾರಯುತ ಪ್ರಯತ್ನ ಉಪನ್ಯಾಸ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಓಝೋನ್ ಪದರು ನಾಶವಾಗಲು ಮಾನವ ನಿರ್ಮಿತ ಕೈಗಾರಿಕೆಗಳು, ಏರ್ಕಂಡೀಷನರ್ಗಳು ನೇರ ಕಾರಣ. ಈ ಪದರು ನಾಶದಿಂದ ಮಾನವ ಸೇರಿ ಭೂಮಿ ಮೇಲಿನ ಸಕಲ ಜೀವರಾಶಿಗಳಿಗೆ ಮಾರಕವಾಗಿದೆ. ಸೂರ್ಯನಿಂದ ಬಿಡುಗಡೆಯಾಗುವ ಅತ್ಯಂತ ಅಪಾಯಕಾರಿ ಅತಿ ನೇರಳೆ ಕಿರಣಗಳು ನೇರವಾಗಿ ಭೂಮಿಗೆ ಅಪ್ಪಳಿಸುವುದರಿಂದ ದೇಹ ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಸಿಎಫ್ಸಿ ನಿಯಂತ್ರಣ ಅಗತ್ಯ ಎಂದರು.
ವೀರಣ್ಣ ಒಡ್ಡೀನ ಮಾತನಾಡಿ, ಓಝೋನ ಪದರಿಗೆ ರಂಧ್ರ ಬಿದ್ದ ವಿಷಯ 1974ರಲ್ಲೇ ಪತ್ತೆ ಹಚ್ಚಲಾಗಿದ್ದು, ಸಿಎಫ್ಸಿ ನಿಷೇಧಕ್ಕೆ ಭಾರತ ಸೇರಿ ಜಗತ್ತಿನ ಅನೇಕ ದೇಶಗಳು ಮಾಂಟ್ರಿಯಲ್ ಒಪ್ಪಂದಕ್ಕೆ ಸಹಿ ಹಾಕಿವೆ. ಭವಿಷ್ಯದಲ್ಲಿ ಇದು ಗಂಡಾಂತರ ಕಾದಿದ್ದು, ಅಮೂಲ್ಯ ಜೀವ ರಾಶಿಗಳ ರಕ್ಷಾ ಕವಚ ಓಝೋನ್ ರಕ್ಷಿಸುವ ಪ್ರಯತ್ನ ಅಗತ್ಯ ಎಂದರು.
ಸುಳ್ಳದ ಗ್ರಾಪಂ ಅಧ್ಯಕ್ಷ ಶಿವಕಲ್ಲಪ್ಪ ದೇಮಕ್ಕನವರ ಕಾರ್ಯಕ್ರಮ ಉದ್ಘಾಟಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಯಲ್ಲಪ್ಪ ಮಾದರ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಹಸಬಿ ಜಿ. ಎಸ್., ಹಳ್ಳೂರ ಆರ್.ಬಿ., ವಿದ್ಯಾರ್ಥಿಗಳು, ಇತರರು ಇದ್ದರು.
ಎಸ್.ಎಸ್. ಜಗತಾಪ ಸ್ವಾಗತಿಸಿದರು. ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಚಿತ್ರಾ ಜಿ. ನಿರೂಪಿಸಿದರು. ಎಸ್.ಎಸ್. ಹೊಸಮನಿ ವಂದಿಸಿದರು.