ಜಿಲ್ಲೆ

ಆಕ್ಸಿಜನ್ ಘಟಕ ಕಾರ್ಯಾರಂಭಕ್ಕೆ ಸಿದ್ಧ

Dakshina Kannada

ವಿಜಯವಾಣಿ ಸುದ್ದಿಜಾಲ ಪುತ್ತೂರು

ಪುತ್ತೂರು ಉಪವಿಭಾಗದಲ್ಲೇ ಸುಸಜ್ಜಿತ ಹಾಗೂ ವಿಶಾಲ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಗೆಗೆ ಪಾತ್ರವಾಗಿರುವ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಜಂಬೋ ಸಿಲಿಂಡರ್ ಆಕ್ಸಿಜನ್ ಘಟಕ ಶೀಘ್ರ ಕಾರ್ಯಾರಂಭಿಸಲಿದೆ.

ಕ್ಯಾಂಪ್ಕೊ ಸಂಸ್ಥೆಯ ಸಹಭಾಗಿತ್ವದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆ ವಠಾರದಲ್ಲಿ ನಿರ್ಮಾಣಗೊಂಡಿರುವ, ಪ್ರತಿನಿತ್ಯ 100 ಜಂಬೋ ಸಿಲಿಂಡರ್ ಆಕ್ಸಿಜನ್ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಘಟಕ ಲೋಕಾರ್ಪಣೆಗೆ ಸಿದ್ಧವಾಗಿದೆ. ಮೇ 19ರಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಉಪಸ್ಥಿತಿಯಲ್ಲಿ ಆಕ್ಸಿಜನ್ ಘಟಕಕ್ಕೆ ಶಿಲಾನ್ಯಾಸ ನಡೆದಿದ್ದು, ನಾಲ್ಕು ತಿಂಗಳಲ್ಲೇ ಘಟಕ ನಿರ್ಮಾಣಗೊಂಡಿದೆ.

ಸರ್ಕಾರಿ ಆಸ್ಪತ್ರೆಗೆ ಪ್ರಸ್ತುತ 3.41 ಎಕರೆ ಜಾಗವಿದೆ. ಹಳೇ ತಾಲೂಕು ಕಚೇರಿ ಮತ್ತು ಹಳೇ ಸಬ್‌ಜೈಲ್ ಕಟ್ಟಡವಿರುವ ಪ್ರದೇಶದ 1.75 ಎಕರೆ ಸ್ಥಳವನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ನೋಂದಣಿ ಹಂತದಲ್ಲಿದೆ. ಇದರಿಂದ 5 ಎಕರೆಗೂ ಅಧಿಕ ಸ್ಥಳಾವಕಾಶ ಸಿಗಲಿದೆ. ಇದೇ ಸ್ಥಳದಲ್ಲಿ 600 ಚದರ ಅಡಿ ವಿಸ್ತೀರ್ಣದಲ್ಲಿ ಆಕ್ಸಿಜನ್ ಕಟ್ಟಡ ನಿರ್ಮಾಣಗೊಂಡಿದೆ. ಐದು ಮೀಟರ್ ಎತ್ತರದ ಕಟ್ಟಡ ಇದಾಗಿದ್ದು, 3 ಮೀಟರ್ ಎತ್ತರದಲ್ಲಿ ಪ್ಲಾಂಟ್ ಇರಲಿದೆ. ಘಟಕದಲ್ಲಿ ಪ್ರತಿದಿನ 100 ಜಂಬೋ ಸಿಲಿಂಡರ್‌ನಷ್ಟು ಆಕ್ಸಿಜನ್ ಉತ್ಪತ್ತಿಯಾಗಲಿದೆ.

ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಳಕೆ: ಕ್ಯಾಂಪ್ಕೊ ಸಹಭಾಗಿತ್ವದಲ್ಲಿ ಈ ಆಕ್ಸಿಜನ್ ಪ್ಲಾಂಟ್ ನಿರ್ಮಾಣಗೊಳ್ಳಲಿದೆ. ವೆಚ್ಚದ ಒಂದು ಕೋಟಿಯಲ್ಲಿ ಸ್ಥಾವರದ 80 ಲಕ್ಷ ರೂ. ಕ್ಯಾಂಪ್ಕೊ ಭರಿಸಲಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ 20 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ.

ಇಂದು ಲೋಕಾರ್ಪಣೆ: ಆಕ್ಸಿಜನ್ ಉತ್ಪಾದನಾ ಘಟಕವನ್ನು ಅ.6ರಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಪುತ್ತೂರು ನಗರಸಭಾಧ್ಯಕ್ಷ ಕೆ.ಜೀವಂಧರ್ ಜೈನ್, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಹಾಗೂ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ. ಇದೇ ವೇಳೆ ಮಧ್ಯಾಹ್ನ 12ಕ್ಕೆ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆ ನೆರವೇರಿಸಲಿರುವ ಸಚಿವರು, ವೆಬಿನಾರ್ ಮೂಲಕ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಕ್ಸಿಜನ್ ಉತ್ಪಾದನಾ ಘಟಕವನ್ನು ಉದ್ಘಾಟಿಸಲಿದ್ದಾರೆ.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಆಸ್ಪತ್ರೆ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಏಕಕಾಲದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣವಾಗಿರುವುದು ಕ್ಷೇತ್ರದ ದಾಖಲೆಯಾಗಿದೆ. ಈ ಮೂರು ಆಕ್ಸಿಜನ್ ಉತ್ಪಾದನಾ ಘಟಕಗಳು ದಾನಿಗಳ ನೆರವಿನಿಂದ ನಿರ್ಮಾಣಗೊಂಡಿದೆ.

-ಸಂಜೀವ ಮಠಂದೂರು, ಪುತ್ತೂರು ಶಾಸಕ