ಮಸ್ಕಿಯಲ್ಲಿ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ ಕುರಿತ ಅರಿವು ಮೂಡಿಸುವ ಕಾರ್ಯಕ್ರಮವನ್ನು ಶಾಸಕ ಆರ್.ಬಸನಗೌಡ ತುರ್ವಿಹಾಳ ಉದ್ಘಾಟಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಹಿಬೂಬ್ ಸಾಬ್ ಮುದ್ದಾಪುರ, ತಾಪಂ ಇಒ ಅಮರೇಶ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೆಶಕ ಬಸವರಾಜ ಯಂಕಂಚಿ ಇತರರಿದ್ದರು. 
ಜಿಲ್ಲೆ

ಸ್ವಂತ ಉದ್ಯೋಗದಿಂದ ಉತ್ತಮ ಜೀವನ

Kopala - Desk - Eraveni

ಮಸ್ಕಿ: ಸರ್ಕಾರದ ವಿವಿಧ ಯೋಜನೆಗಳ ಬಳಸಿಕೊಂಡು ಯುವಕರು ಸ್ವಾವಲಂಬಿ ಜೀವನ ಕಂಡುಕೊಳ್ಳಬೇಕು. ಅಲ್ಲದೆ ಇತರರಿಗೂ ಕೆಲಸ ನೀಡುವ ಮೂಲಕ ಉದ್ಯೋಗದಾತರಾಗಬೇಕು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ತಾಪಂ ಸಭಾಂಗಣದಲ್ಲಿ ರಾಯಚೂರಿನ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಹುಬ್ಬಳ್ಳಿ ಖಾದಿ ಗ್ರಾಮೋದ್ಯೋಗ ಆಯೋಗ ಆಯೋಜಿಸಿದ್ದ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ ಕುರಿತ ಅರಿವು ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಉತ್ತಮ ಜೀವನ ನಡೆಸಲು ಸ್ವಂತ ಉದ್ಯೋಗ ಸಹಕಾರಿಯಾಗುತ್ತದೆ. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಅನೇಕ ಯೋಜನೆಗಳಿದ್ದು, ಸದುಪಯೋಗ ಪಡೆದುಕೊಳ್ಳಬೇಕು. ಸ್ಥಳೀಯ ಬ್ಯಾಂಕ್‌ಗಳೂ ನಿರುದ್ಯೋಗಿ ಯುವಕರಿಗೆ ಸಾಲ ಸೌಲಭ್ಯ ಒದಗಿಸಿ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸಿಇಒ ವಿ.ಜಿ.ವೆಂಕಟೇಶ ಮಾತನಾಡಿ, ಸರ್ಕಾರ ಉದ್ದಿಮೆ ಸ್ಥಾಪಿಸಲು ಆರ್ಥಿಕ ಸಹಾಯ ನೀಡಲು ಅನೇಕ ಯೋಜನೆಗಳನ್ನು ರೂಪಿಸಿದೆ. ಯುವಕರು ಸರಿಯಾದ ತರಬೇತಿ ಪಡೆದು, ಇಲಾಖೆ ಮೂಲಕ ಬ್ಯಾಂಕ್ ಅನ್ನು ಸಂಪರ್ಕಿಸಿ ಉದ್ದಿಮೆ ಸ್ಥಾಪಿಸಲು ಮುಂದೆ ಬರಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಹಿಬೂಬ್ ಸಾಬ್ ಮುದ್ದಾಪುರ, ತಾಪಂ ಇಒ ಅಮರೇಶ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೆಶಕ ಬಸವರಾಜ ಯಂಕಂಚಿ, ಎಸ್‌ಬಿಐ ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿರುಮಲೇಶ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೆ.ರಾಯಣ್ಣ ಮಾತನಾಡಿದರು.