ಬೆಂಗಳೂರು:ರಾಜಧಾನಿಯಲ್ಲಿ ಡೆಂಘೆ, ಜೀಕಾ, ಮಲೇರಿಯಾ ಸೇರಿ ಸಾಂಕ್ರಾಮಿಕ ರೋಗ ಹರಡುವ ಈಡಿಸ್ ಸೊಳ್ಳೆಗಳ ನಾಶಕ್ಕೆ ಬಿಬಿಎಂಪಿ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ.
ಪ್ರಾಯೋಗಿಕವಾಗಿ ಗಾಂಧಿನಗರ ಕ್ಷೇತ್ರದ ಗೋಪಾಲಪುರ ವ್ಯಾಪ್ತಿಯ 20 ಮನೆಗಳಿಗೆ 120 ಓವಿಟ್ರ್ಯಾಪ್ ಸಾಧನ ಅಳವಡಿಸಲಾಗಿದೆ. ಇದು ಮಡಿಕೆ ಆಕಾರದ ಬಯೋ ಸಾಧನವಾಗಿದೆ. ಕುಂಡದಲ್ಲಿ ರಾಸಾಯನಿಕ ಬೆರಸಿ ನೀರು ತುಂಬಲಾಗುತ್ತದೆ. ರಾಸಾಯನಿಕ ಮಿಶ್ರಣವು ಈಡಿಸ್ ಸೊಳ್ಳೆ ಹಾಗೂ ಅದರ ಮೊಟ್ಟೆ ನಾಶಪಡಿಸಲಿದೆ. ಬಯೋ ಟ್ರ್ಯಾಪ್ ಬಳಕೆಯಿಂದ ಶೇ.60 ಸೊಳ್ಳೆ ನಿಯಂತ್ರಿಸಬಹುದು. ಹೆಚ್ಚು ಸೊಳ್ಳೆಗಳಿರುವ ಕಡೆಗಳಲ್ಲಿ ಈ ಸಾಧನ ನೆರವಾಗಲಿದೆ.
ಅಳವಡಿಸುವ ಓವಿಟ್ರ್ಯಾಪ್ಗಳ ಕುರಿತು ಎರಡು ತಿಂಗಳ ಅಧ್ಯಯನ ನಡೆಸಲಾಗುತ್ತದೆ. 4 ವಾರ ನಂತರ ಓವಿಟ್ರ್ಯಾಪ್ ಬದಲಾಯಿಸಲಾಗುತ್ತದೆ. ಆರೋಗ್ಯ ಕಾರ್ಯಕರ್ತರು ಪ್ರತಿ ವಾರ ಭೇಟಿ ನೀಡಿ ಅದನ್ನು ಪರಿಶೀಲಿಸಿ ಅಪ್ಲಿಕೇಶನ್ನಲ್ಲಿ ಮಾಹಿತಿ ದಾಖಲಿಸುತ್ತಾರೆ. ಈ ಬಗ್ಗೆ ಬೆಂಗಳೂರು ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್ಐ), ಎಂ.ಎಸ್. ರಾಮಯ್ಯ ವೈದ್ಯಕಿಯ ಕಾಲೇಜು ಅಧ್ಯಯನದಲ್ಲಿ ತೊಡಗಿವೆ. ಸೊಳ್ಳೆ ಸಂತಾನೋತ್ಪತ್ತಿ ಸರಪಳಿ ಮುರಿಯಲು, ಹಾಟ್ಸ್ಪಾಟ್ ಗುರುತಿಸಲು, ಆಬೋರ್ವೈರಸ್ ಹರಡುವಿಕೆ ತಡೆಗೆ ಓವಿಟ್ರ್ಯಾಪ್ ಸಾಧನಗಳು ಅನುಕೂಲವಾಗಲಿವೆ. ಸೊಳ್ಳೆ ಲಾರ್ವಾಗಳ ವಿರುದ್ಧವೂ ಹೊರಡಲಿದೆ. ರಾಜ್ಯದಲ್ಲಿ ನಿತ್ಯ ಸರಾಸರಿ 400-550 ಡೆಂಘೆ ಕೇಸ್ಗಳು ದಾಖಲಾಗುತ್ತಿವೆ. ಚಿಕ್ಕ ಮಕ್ಕಳು ಇದಕ್ಕೆ ತುತ್ತಾಗುತ್ತಿರುವುದು ಆತಂಕ ತಂದೊಡ್ಡಿದೆ. ಹೀಗಾಗಿಕೆಲಸದ ಸ್ಥಳ, ಶಾಲೆ, ಕಾಲೇಜು, ಕಾರ್ಖಾನೆ, ಕೊಳೆಗೇರಿಗಳಲ್ಲಿ ನಾಗರಿಕರು, ಗರ್ಭಿಣಿಯರು ಮತ್ತು ಮಕ್ಕಳು ಜಾಗ್ರತರಾಗಬೇಕು ಎಂದು ಪಾಲಿಕೆ ತಿಳಿಸಿದೆ.
ವಿವಿಧ ಕಡೆ ಅಧ್ಯಯನ
* 6 ತಿಂಗಳಿಂದ ಮುಂಬೈನ ಧಾರಾವಿ ಕೊಳೆಗೇರಿಯಲ್ಲಿ ಓವಿಟ್ರ್ಯಾಪ್ ಸಾಧನ ಬಗ್ಗೆ ಅಧ್ಯಯನ.
* ಜಾಲಹಳ್ಳಿಯ ಭಾರತೀಯ ವಾಯುಪಡೆ ನಿಲ್ದಾಣದಲ್ಲಿ ಈ ಸಾಧನ ಅಳವಡಿಸುವ ಮೂಲಕ ಡೆಂಘೆ ನಿಯಂತ್ರಣ.
* ಭಾರತದ ಅತಿದೊಡ್ಡ ಕೀಟ ನಿಯಂತ್ರಣ ಕಂಪನಿ ರೆಂಟೊಕಿಲ್ ಪಿಸಿಐ, ದೇಶದ 22 ರಾಜ್ಯಗಳಲ್ಲಿ ಬಯೋಟ್ರ್ಯಾಪ್ ಸಾಧನ ವಿತರಣೆ.
* ಮಲೇರಿಯಾ, ಚಿಕೂನ್ಗುನ್ಯಾ, ಜೀಕಾ ಸೇರಿ ಇತರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ.
ಹೊಸ ಪ್ರಯೋಗ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಗಾಂಧಿನಗರ ಕ್ಷೇತ್ರದ ಗೋಪಾಲಪುರ ವ್ಯಾಪ್ತಿಯ 20 ಮನೆಗಳಿಗೆ 120 ಓವಿಟ್ರ್ಯಾಪ್ ಸಾಧನ ಅಳವಡಿಕೆಗೆ ಚಾಲನೆ ನೀಡಿದರು. ಈಡಿಸ್ ಸೊಳ್ಳೆಗಳನ್ನು ನಾಶಪಡಿಸುವ ಬಯೋ ಸಾಧನಗಳನ್ನು ಪ್ರಾಯೋಗಿಕವಾಗಿ ಬಳಕೆ ಮಾಡುತ್ತಿದ್ದೇವೆ. ಉತ್ತಮ ಫಲಿತಾಂಶ ಕಂಡುಬಂದರೆ ರಾಜ್ಯಾದ್ಯಂತ ಓವಿಟ್ರ್ಯಾಪ್ ಸಾಧನ ಅಳವಡಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದರು.