ಮಳವಳ್ಳಿ: ತಾಲೂಕಿನ ವಿವಿಧೆಡೆ ಹಿಂದುಳಿದ ಪ್ರದೇಶಗಳಿಗೆ ನಮ್ಮ ತಂಡ ತೆರಳಿ ಅಲ್ಲಿನ ಸಮಸ್ಯೆಗಳನ್ನು ಅವಲೋಕನ ಮಾಡಿ ನೈಜ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ.ಎಂ ಗೋವಿಂದರಾವ್ ತಿಳಿಸಿದರು.
ಮಳವಳ್ಳಿ ಪಟ್ಟಣ ಸೇರಿದಂತೆ ಬಿ.ಜಿ.ಮೋಳೆ, ಜವನಗಹಳ್ಳಿ, ಕೋಡಿಪುರ, ಚನ್ನಿಪುರ, ಬಾಣಸಮುದ್ರ ಗ್ರಾಮಗಳಿಗೆ ಮಂಗಳವಾರ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷರ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ತಾಲೂಕಿನ ಟಿ.ಕೆ.ಹಳ್ಳಿ ಯಲ್ಲಿರುವ ಬೆಂಗಳೂರು ಜಲ ಮಂಡಲಿ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಡನೆ ಚರ್ಚಿಸಿದರು.
ರಾಜ್ಯ ಸರ್ಕಾರ ಈಗಷ್ಟೇ ಅಸಮತೋಲನ ನಿವಾರಣಾ ಸಮಿತಿ ತಂಡ ರಚಿಸಿದ್ದು, ಎಲ್ಲಲ್ಲಿ ಅಸಮತೋಲನವಿದೆ ಎಂದು ಪತ್ತೆ ಹಚ್ಚಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ನಿನ್ನೆಯಷ್ಟೆ ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಂಡಿದ್ದು, ಮಳವಳ್ಳಿ ತಾಲೂಕಿನ ವ್ಯಾಪ್ತಿಯ ಹತ್ತು ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ. ಅಲ್ಲಿನ ಸಮಸ್ಯೆಗಳ ಸಮತೋಲನ ಕಾಪಾಡಿಕೊಳ್ಳಲು ಯಾವ ಕ್ರಮ ಕೈ ಗೊಳ್ಳಬೇಕು ಎಂಬ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಯೋಜನಾ ಇಲಾಖೆ ಸದಸ್ಯ ಕಾರ್ಯದರ್ಶಿ ಡಾ.ವಿಶಾಲ್, ಅಸಮತೋಲನ ಸಮಿತಿಯ ಸದಸ್ಯರಾದ ಡಾ.ಸೂರ್ಯನಾರಾಯಣ ಮುಂಗಿಲ ಹಿಲ್ಲೆಮನೆ, ಡಾ.ಎಸ್.ಟಿ. ಬಾಗಲಕೋಟಿ, ನಿರ್ದೇಶಕ ಡಿ.ಚಂದ್ರಶೇಖರಯ್ಯ, ಉಪನಿರ್ದೇಶಕಿ ಆರ್.ಕವಿತಾ, ಸಹಾಯಕ ನಿರ್ದೇಶಕ ಎಚ್.ಕೆ.ದೀಪಕ್, ಆಪ್ತ ಸಹಾಯಕ ಬಸವರಾಜು, ದತ್ತ ನಮೂದಕಿ ಎನ್.ತೇಜಶ್ವಿನಿ, ಜಿಲ್ಲಾಧಿಕಾರಿ ಡಾ.ಕುಮಾರ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ.ಲೋಕೇಶ್ ಸೇರಿದಂತೆ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಇದ್ದರು.