ಶಿರಸಿ: ನಗರದ ಬಿಡ್ಕಿಬಯಲಿನಲ್ಲಿ ನಗರಸಭೆ ಜಾಗ ಅತಿಕ್ರಮಿಸಿದ ಅಂಗಡಿಕಾರರು ತೆರವುಗೊಳಿಸದಿದ್ದರೆ ನಗರಾಡಳಿತದಿಂದಲೇ ತೆರವು ಮಾಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಎಚ್ಚರಿಸಿದರು.
ಬಿಡ್ಕಿಬಯಲಿನ ವ್ಯಾಪಾರಸ್ಥರ ಸಂಘದಿಂದ ಬಂದ ದೂರಿನನ್ವಯ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಅವರು ನೀಡಿದ ಜಾಗಕ್ಕಿಂತ ಹೆಚ್ಚಿನ ಜಾಗ ಬಳಸುತ್ತಿರುವ ಅಂಗಡಿಕಾರರಿಗೆ ಸೂಕ್ತ ಕ್ರಮದ ಎಚ್ಚರಿಕೆ ನೀಡಿದರು.
ಈ ವೇಳೆ ಮಾಹಿತಿ ನೀಡಿದ ಅವರು, ‘ನಗರದಲ್ಲಿ ಬೇಕಾಬಿಟ್ಟಿಯಾಗಿ ಚರಂಡಿ, ರಸ್ತೆ ಮೇಲೆ ಅಂಗಡಿ ನಿರ್ವಿುಸಲಾಗಿದ್ದು, ಜನಸಾಮಾನ್ಯರು, ವಾಹನ ಸವಾರರಿಗೆ ಸಮಸ್ಯೆ ಆಗುತ್ತಿದೆ. ನಗರಸಭೆ ಬಾಡಿಗೆ ನೀಡಿದ ಅಂಗಡಿಗಳ ಜತೆ ಖಾಲಿ ಜಾಗದಲ್ಲಿ ಬೀದಿಬದಿ ವ್ಯಾಪಾರ ಮಾಡುತ್ತಾರೆ. ಇದರಿಂದ ಸಮಸ್ಯೆ ಹೆಚ್ಚಿದ್ದು ಕ್ರಮಕೈಗೊಳ್ಳಲಾಗುತ್ತಿದೆ. ಬಿಡ್ಕಿ ಬಯಲಿನಲ್ಲಿ ಸದ್ಯ 64 ಕಾಯಂ ಮಳಿಗೆಗಳಿದ್ದು, 38ರಷ್ಟು ಬೀದಿಬದಿ ವ್ಯಾಪಾರಿಗಳಿದ್ದು ಅವರೆಲ್ಲರಿಗೂ ಸೂಚಿಸಲಾಗಿದೆ ಎಂದರು. ಬಯಲಿನೊಳಗೆ ಬಿಳಿ ಬೋರ್ಡ್ ವಾಹನಗಳ ನಿಲುಗಡೆಗೆ ಅವಕಾಶ ನೀಡುವುದಿಲ್ಲ. ನಗರಸಭೆಗೆ ಸಮರ್ಪಕ ಬಾಡಿಗೆ ನೀಡದ 30 ಅಂಗಡಿಗಳನ್ನು ಖಾಲಿ ಮಾಡಲಾಗಿದೆ. ಅದನ್ನು ಶೀಘ್ರದಲ್ಲಿ ಬಾಡಿಗೆಗೆ ನೀಡಲಾಗುವುದು. ಕೋಣನಬಿಡ್ಕಿ, ಬಿಡ್ಕಿಬಯಲಿನಲ್ಲಿ ಇನ್ನೂ 21 ಅಂಗಡಿಕಾರರು ಬಾಡಿಗೆ ನೀಡಬೇಕಿದೆ. ಅದನ್ನು ಪಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ವೀಣಾ ಶೆಟ್ಟಿ ಮಾತನಾಡಿ, ರಸ್ತೆ ಸಮರ್ಪಕವಾಗಿರಬೇಕು. ರಸ್ತೆಯ ಜಾಗ ಅತಿಕ್ರಮಿಸಬಾರದು. ಅದನ್ನು ಮೀರಿ ಮುಂದುವರಿದರೆ ನಗರಸಭೆಯಿಂದ ಕ್ರಮ ನಿಶ್ಚಿತ. ಗ್ರಾಹಕರಿಗೆ ಸಮಸ್ಯೆಯಾದರೆ ಕ್ರಮವಹಿಸುವುದು ಅಗತ್ಯ ಎಂದರು.
ಈ ವೇಳೆ ಬಿಡ್ಕಿಬಯಲಿನಲ್ಲಿ ವಾಹನ ನಿಲುಗಡೆ ವ್ಯವಸ್ಥೆಯು ಆಗಬೇಕು. ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು ಎಂದು ವ್ಯಾಪಾರಸ್ಥರ ಸಂಘದವರು ಒತ್ತಾಯಿಸಿದರು.
ಪೌರಾಯುಕ್ತ ರಮೇಶ ನಾಯಕ, ಆರೋಗ್ಯ ನಿರೀಕ್ಷಕ ಆರ್.ಎಂ. ವೆರ್ಣೆಕರ, ಸದಸ್ಯರಾದ ರಾಘು ಶೆಟ್ಟಿ, ರಮಾಕಾಂತ ಭಟ್ಟ, ಆನಂದ ಸಾಲೇರ, ವ್ಯಾಪಾರಸ್ಥರ ಸಂಘದ ವಾಮನ ಮಾಡಗೇರಿ ಇತರರಿದ್ದರು.