ಕುಣಿಗಲ್: ಪ್ರಯತ್ನದಿಂದ ಮಾತ್ರ ಕಠಿಣ ಸವಾಲು ಗೆಲ್ಲಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಪ್ರಾಯೋಗಿಕ ಚಿಂತನೆಗಳು ಅಗತ್ಯ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ತಿಳಿಸಿದರು.
ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಶಾಖೆ ಹಾಗೂ ಐ.ಕ್ಯೂ.ಎ.ಸಿ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ರೋವರ್ಸ್, ರೇಂರ್ಜಸ್ಗಳ ನಿಪುಣ್ ಪರೀಕ್ಷಾ ಶಿಬಿರ ಮತ್ತು ರಾಜ್ಯ ಪುರಸ್ಕಾರ್ ಪೂರ್ವ ಸಿದ್ಧತೆಯ 2 ದಿನಗಳ ಪರೀಕ್ಷಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಬಿರಗಳಲ್ಲಿ ಭಾಗವಹಿಸುವುದರಿಂದ ನಾಯಕತ್ವ ಗುಣ, ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಪರಿಹರಿಸಿಕೊಳ್ಳುವ ಕೌಶಲ, ಸಂಕಷ್ಟಕ್ಕೆ ಸ್ಪಂದಿಸುವ ಮನಸ್ಥಿತಿ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಸಮುದಾಯ ಸೇವೆಗೆ ಪ್ರತಿಫಲಾಪೇಕ್ಷೆ ಇಲ್ಲದೇ ದುಡಿಯಿರಿ. ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಅಂತಹ ಮೇರು ಸಾಧಕರು, ಸವಾಲುಗಳನ್ನು ಮೆಟ್ಟಿ ಸಾಧಕರಾಗಿದ್ದಾರೆ. ಇಂತಹ ಸಾಧಕರ ಜೀವನ ಚರಿತ್ರೆ ಅಧ್ಯಯನ ಮಾಡಿ ಎಂದು ತಿಳಿಸಿದರು.
ನಿವೃತ್ತ ಡಿಡಿಪಿಐ ಟಿ.ಎಸ್.ಅಂಜನಪ್ಪ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಪುಸ್ತಕದ ಜ್ಞಾನ ಕರಗತ ಮಾಡಿಕೊಳ್ಳುವ ಜತೆ ಹೊರಜಗತ್ತಿನ ವಿದ್ಯಮಾನಗಳ ಅರಿವು ಗಳಿಸಬೇಕು. ಅಂಕಗಳಿಕೆ ಜತೆ ಜೀವನ ಗೆಲ್ಲುವ ಕೌಶಲ ಕಲಿಯಬೇಕು. ದೇಶಭಕ್ತಿ, ದೇಶಪ್ರೇಮ ಮೈಗೂಡಿಸಿಕಂಡು ದೇಶಸೇವೆಗೆ ಸಿದ್ಧರಾಗಿರಬೇಕು ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಆಯುಕ್ತ ಗಂಗಾಧರ ಮಾತನಾಡಿ, ದೇಶದ ಪ್ರಗತಿಗೆ ಮೌಲ್ಯಯುತ ಶಿಕ್ಷಣ ಅಡಿಪಾಯ ಹಾಕಿದೆ. 1907ರಲ್ಲಿ ಬೆಡೆನ್ ಪೋವೆಲ್ ಸ್ಥಾಪಿಸಿದ ಸ್ಕೌಟ್ಸ್ ಮತ್ತು ಗೈಡ್ಸ್ ವಿಶ್ವದ 216 ದೇಶಗಳಲ್ಲಿ ಲಕ್ಷಾಂತರ ಯುವ ಜನರನ್ನು ಶಿಸ್ತುಬದ್ಧ, ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುತ್ತಿದೆ ಎಂದರು.
ಕಾಲೇಜಿನ ರೋವರ್ಸ್ ಲೀಡರ್ ಡಾ.ಎನ್.ಟಿ.ಶ್ರೀನಿವಾಸ ಮಾತನಾಡಿ, ಕಾಲೇಜು ಹಂತದಲ್ಲಿ ಪುರುಷ ವಿದ್ಯಾರ್ಥಿಗಳಿಗೆ ರೋವರ್ಸ್ ಮತ್ತು ಮಹಿಳೆಯರಿಗೆ ರೇಂರ್ಜಸ್ ತಂಡಗಳನ್ನು ರಚಿಸಿ ಅವರಲ್ಲಿ ಮೌಲ್ಯಶಿಕ್ಷಣ, ಶಿಬಿರಗಳು, ಚಾರಣ, ಪ್ರವಾಹ, ಭೂಕಂಪನದಂತ ಸಂದರ್ಭಗಳಲ್ಲಿ ಆಂತರಿಕ ಯೋಧರನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ನಿಪುಣ್, ರಾಜ್ಯಪುರಸ್ಕಾರ್ ಶಿಬಿರಗಳಲ್ಲಿ ಭಾಗವಹಿಸಿ ಎಂದರು.
ಪ್ರಾಂಶುಪಾಲ ರಾಮಾಂಜನಪ್ಪ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ಶಿಬಿರಗಳು ಪೂರಕ. ಹೊಸತನ್ನು ಅರಸಿ, ಪ್ರಕೃತಿ ಮಡಿಲಲ್ಲಿ ಶಿಕ್ಷಣ, ನಾಯಕತ್ವ ಗುಣ, ಸಮುದಾಯ ಸೇವೆ ಮಾಡಿ ನಿಸ್ವಾರ್ಥ ಮನೋಭಾವ ಬೆಳೆಸಿಕೊಳ್ಳಿ ಎಂದರು.
ಐ.ಕ್ಯೂ.ಎ.ಸಿ. ಸಂಚಾಲಕ ಡಾ.ಟಿ.ಎನ್.ನರಸಿಂಹಮೂರ್ತಿ, ಡಾ.ಶಿವಕುಮಾರ್, ರವಿಕುಮಾರ್, ಜಿಲ್ಲಾ ಸಂಘಟಕ ನವೀನಕುಮಾರ್, ಶಿಬಿರ ನಾಯಕರಾದ ವಿನಯ್, ವಿದ್ಯಾ, ಬಸವರಾಜು, ವ್ಯವಸ್ಥಾಪಕ ಚಲುವಮೂರ್ತಿ, ಸಾಂಸತಿಕ ಸಮಿತಿ ಸಂಚಾಲಕ ಈಶ್ವರಪ್ಪ, ಡಾ.ಮಂಜುಳಾ ಮತ್ತಿತರರು ಇದ್ದರು.