ಜಿಲ್ಲೆ

ಮುಗಿಯದ ಮೇಲು ಸೇತುವೆ ಕಾಮಗಾರಿ: ಜನರಿಗಿಲ್ಲ ಓಡಾಡಲು ಪರ್ಯಾಯ ವ್ಯವಸ್ಥೆ

Chikkaballapur

ಸಿ.ಎ. ಮುರಳೀಧರ್ ಗೌರಿಬಿದನೂರು
ಇಂದು ಮುಗಿಯುತ್ತೆ. ನಾಳೆ ಮುಗಿಯುತ್ತದೆ ಎಂದು ಜನ ದಿನಗಣನೆ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ನೀಡುವ ಭರವಸೆಗಳನ್ನು ನಂಬಿ ರೋಸಿ ಹೋಗಿದ್ದಾರೆ. ಹಲವು ಬಾರಿ ಪ್ರತಿಭಟನೆ ಮಾಡಿದ್ದಾರೆ. ಆದರೆ ವರ್ಷಗಳು ಉರುಳುತ್ತಿದ್ದರೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ನಗರದ ಮಧುಗಿರಿ ರಸ್ತೆಯ ರೈಲ್ವೆ ಮೇಲು ಸೇತುವೆಯ ವ್ಯಥೆ ಇದು. ಕಾಮಗಾರಿ ಪ್ರಾರಂಭವಾಗಿ 4 ವರ್ಷ ಕಳೆದಿವೆ. ಆದರೆ ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಜನರಿಗೆ ಓಡಾಡಲು ಪರ್ಯಾಯ ವ್ಯವಸ್ಥೆಯೂ ಇಲ್ಲ. ಕಾಮಗಾರಿ ನೆಪದಲ್ಲಿ ಇರುವ ರಸ್ತೆಯನ್ನು ರೈಲ್ವೆ ಇಲಾಖೆ ಬಂದ್ ಮಾಡಿದೆ.


ಮೇಲು ಸೇತುವೆಯ ಎರಡೂ ಬದಿಯಲ್ಲಿ ವಾಹನಗಳ ಓಡಾಟಕ್ಕೆ ಸೂಕ್ತ ಉಪ ರಸ್ತೆಗಳ ವ್ಯವಸ್ಥೆಯನ್ನೂ ಮಾಡಿಲ್ಲ. ಮಳೆಗಾಲದಲ್ಲಿ ಎರಡೂ ಬದಿ ಕೆಸರುಗದ್ದೆಯಂತಾಗುತ್ತದೆ. ಜನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರ ಪರದಾಟ ಹೇಳತೀರದು. ಹಲವು ಬಾರಿ ರೈಲ್ವೆ ಇಲಾಖೆ ವಿರುದ್ಧ ಪ್ರತಿಭಟಿಸಿದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ.

ಕವಡೆ ಕಾಸಿನ ಕಿಮ್ಮತ್ತಿಲ್ಲ: ಸಿಮೆಂಟ್, ಕಬ್ಬಿಣ ಸೇರಿ ಕಾಮಗಾರಿಯ ಸಾಮಗ್ರಿಗಳ ಬೆಲೆ ಹೆಚ್ಚಾಗಿರುವುದರಿಂದ ಈಗಾಗಲೆ ಇಬ್ಬರು ಗುತ್ತಿಗೇದಾರರು ಕಾಮಗಾರಿ ವೆಚ್ಚ ಅಧಿಕವಾಗುವುದರಿಂದ ನಾವು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಬಿಟ್ಟು ಹೋಗಿದ್ದಾರೆ. ಸಾರ್ವಜನಿಕರ ಪ್ರತಿಭಟನೆ ಹೆಚ್ಚಾದಾಗ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಮೇಲು ಸೇತುವೆ ಕಾಮಗಾರಿ ಮತ್ತೆ ಪ್ರಾರಂಭಿಸಿ ಶೀಘ್ರ ಪೂರ್ಣಗೊಳಿಸಿ ಆ.15ರಂದು ಲೋಕಾರ್ಪಣೆಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಆಗಷ್ಟ್ ಮಾಹೆ ಬಂದರೂ ಕಾಮಗಾರಿಯಲ್ಲಿ ಕಿಂಚಿತ್ತು ಪ್ರಗತಿ ಸಾಧಿಸಿಲ್ಲ. ಶಾಸಕರ ಸೂಚನೆಗೆ ರೈಲ್ವೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

ಜಾಲತಾಣಗಳಲ್ಲಿ ಗೇಲಿ: ಕಾಮಗಾರಿ ಆಮೆಗತಿಯ ವೇಗದಲ್ಲಿ ಸಾಗುತ್ತಿರುವುದು ಹಾಗೂ ಶಾಸಕರು ಆಗಸ್ಟ್ ಮಾಹೆಯಲ್ಲಿ ಲೋಕಾರ್ಪಣೆ ಮಾಡುವುದಾಗಿ ನೀಡಿದ್ದ ಭರವಸೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಗೇಲಿಯ ವಸ್ತುವಾಗಿಬಿಟ್ಟಿದೆ. ಮೇಲುಸೇತುವೆಯ ಎಡ-ಬಲದ ಜಾಗ ಫಲವತ್ತಾಗುತ್ತಿದೆ. ಈಗ ಒಳ್ಳೆಯ ಮಳೆಯಾಗುತ್ತಿದೆ. ಕೃಷಿ ಮಾಡಿದರೆ ಒಳ್ಳೆ ಫಲ ಸಿಗುತ್ತೆ. ಎಲ್ಲರೂ ಬನ್ನಿ ಕೃಷಿ ಮಾಡೋಣ ಎಂದು ಸಂಬಂಧಿತ ಶಾಸಕರು, ಸಂಸದರು, ಸಚಿವರು ಹಾಗೂ ಅಧಿಕಾರಿಗಳನ್ನು ಆಹ್ವಾನಿಸುತ್ತಿರುವ ಪೋಸ್ಟ್ ಈಗ ತಾಲೂಕಿನಲ್ಲಿ ವೈರಲ್ ಆಗುತ್ತಿದೆ.

ರೈಲ್ವೆ ಅಧಿಕಾರಿಗಳು ಹಾಗೂ ಗುತ್ತಿಗೇದಾರರು ಸಾರ್ವಜನಿಕರ ಕೆಲಸಗಳ ವಿಚಾರದಲ್ಲಿ ಬೇಜವಾಬ್ದಾರಿ ತೋರುತ್ತಿರುವುದು ಇದು ಮೊದಲಲ್ಲ. ರೈಲ್ವೇ ಅಂಡರ್ ಪಾಸ್ ನಿರ್ಮಾಣದಲ್ಲೂ ಇದೇ ರೀತಿ ನಿರ್ಲಕ್ಷ್ಯ ತೋರುವುದರಿಂದ ನೀರು ನಿಂತು ಮಳೆಗಾಲದಲ್ಲಿ ಸಾರ್ವಜನಿಕರು ಪರದಾಡುವುದು ಸಾಮಾನ್ಯವಾಗಿದೆ. ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು. ನಾಲ್ಕು ವರ್ಷಗಳಿಂದ ತೆವಳುತ್ತಿರುವ ರೈಲ್ವೇ ಮೇಲುಸೇತುವೆ ಶೀಘ್ರ ಪೂರ್ಣಗೊಳಿಸಲು ಅಗತ್ಯ ನಿರ್ಧಾರ ತೆಗೆದುಕೊಳ್ಳಬೇಕು.ಡಿ.ಜೆ.ಚಂದ್ರಮೋಹನ್, ನಗರಸಭೆ ಸದಸ್ಯ, ಗೌರಿಬಿದನೂರು
ರೈಲ್ವೆ ಮುಖ್ಯ ಅಭಿಯಂತರ ಪ್ರಭು ಅವರೊಂದಿಗೆ ಮಾತನಾಡಿದ್ದೇನೆ. ಗುತ್ತಿಗೆದಾರರು ಕೈಗೆ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದೇನೆ.ಶಾಸಕ ಎನ್.ಎಚ್.ಶಿವಶಂಕರರೆಡ್ಡಿ,ಶಾಸಕ
ಸಾರ್ವಜನಿಕರು ಓಡಾಡಲು ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ. ಆದ್ದರಿಂದ ಮೇಲ್ಸೇತುವೆ ಕಾಮಗಾರಿ ಮುಕ್ತಾಯವಾಗುವವರೆಗೆ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು .ಶಶಿಕುಮಾರ್, ಸ್ಥಳೀಯ, ಗೌರಿಬಿದನೂರು