ಗುತ್ತಲ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್ನಿಂದ ಚಾಮರಾಜನಗರದವರಗೆ ಹಮ್ಮಿಕೊಂಡಿದ್ದ 2500 ಕಿ.ಮೀ. ಉದ್ದದ ಮಾನವ ಸರಪಳಿ ಕಾರ್ಯಕ್ರಮಕ್ಕೆ ಪಟ್ಟಣದಲ್ಲಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು ಪಾಲ್ಗೊಂಡು ಮಾನವ ಸರಪಳಿ ನಿರ್ವಿುಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.
ಬೆಳಗ್ಗೆಯಿಂದಲೇ ಎಂ.ಜಿ. ತಿಮ್ಮಾಪುರ ಗ್ರಾಮದ ಬಳಿ ಹಾವೇರಿ ತಾಲೂಕಿನ ಗಡಿಯಿಂದ ಗುತ್ತಲ ಸೇರಿದಂತೆ ವಿವಿಧ ಗ್ರಾಮಗಳ ಅನೇಕ ಶಾಲೆಯ ಸಾವಿರಾರು ಮಕ್ಕಳು ರಸ್ತೆಯುದ್ದಕ್ಕೂ ನಿಂತು ಪರಸ್ಪರ ಕೈಜೋಡಿಸಿ ಮಾನವ ಸರಪಳಿ ನಿರ್ವಿುಸಿದರು. ಸಂವಿಧಾನದ ಪೀಠಿಕೆ ಓದಿ ಜಯಘೊಷ ಕೂಗಿದರು. ಸುಮಾರು 5 ಕಿ.ಮೀ.ಗೂ ಅಧಿಕ ದೂರದವರೆಗೂ ಸಾವಿರಾರು ಮಕ್ಕಳು ಸರದಿಯಲ್ಲಿ ನಿಂತರೆ ಅನೇಕ ಜನರು ಗ್ರಾಮ ಹಾಗೂ ಪಟ್ಟಣ ಪ್ರದೇಶದಲ್ಲಿ ನಿಂತುಕೊಂಡು ಮಾನವ ಸರಪಳಿ ನಿರ್ವಿುಸಿದರು.
ಪಟ್ಟಣದಲ್ಲಿ ಪಂಚಾಯಿತಿ ಹತ್ತಿರ ಸಂವಿಧಾನದ ಪೀಠಿಕೆಯನ್ನು ಪಪಂ ಅಧ್ಯಕ್ಷೆ ಮಾಳವ್ವ ಗೊರವರ, ಹೆಚ್ಚುವರಿ ಎಸ್ಪಿ ಎಲ್.ವೈ. ಶಿರಕೋಳ, ಡಿವೈಎಸ್ಪಿ ಎಂ.ಎಸ್. ಪಾಟೀಲ, ಸಿಪಿಐ ಸಂತೋಷ ಪವಾರ, ಪಿಎಸ್ಐ ಬಸನಗೌಡ ಬಿರಾದಾರ, ಪಪಂ ಸದಸ್ಯ ಪ್ರದೀಪ ಸಾಲಗೇರಿ, ಅಜಯ ಬಂಡಿವಡ್ಡರ, ಎಸ್.ಜಿ. ಹೊನ್ನಪ್ಪನವರ, ಬಸಣ್ಣ ನೆಗಳೂರ, ಖಲೀಲಹ್ಮದ ಖಾಜಿ, ಮಹ್ಮದಹನೀಫ ರಿತ್ತಿ, ಗಣೇಶ ಅರೇಮಲ್ಲಾಪುರ, ಮಾಲತೇಶ ಶೀತಾಳ, ಪಪಂ ಮುಖ್ಯಾಧಿಕಾರಿ ಡಾ.ದೇವಾನಂದ ದೊಡ್ಡಮನಿ, ಇಂಜಿನಿಯರ್ ಸುರೇಶ ಚಲವಾದಿ, ಪುಂಡಲೀಕ ಘಂಟಿ, ಗುಡ್ಡಪ್ಪ ಗೊರವರ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ ಚಿಂದಿ, ರವಿ ಆರಿಕಟ್ಟಿ, ಮಂಜುನಾಥ ಶಿದ್ದಣ್ಣನವರ, ಕುಮಾರ ಸಿದ್ದಣ್ಣನವರ, ಶ್ರೀನಿವಾಸ ತೇಲ್ಕರ, ಸೇರಿದಂತೆ ಪಟ್ಟಣದ ನೂರಾರು ಜನತೆ, ಪಪಂ ಸಿಬ್ಬಂದಿ ಹಾಗೂ ಪೌರಕಾಮಿರ್ಕರು ಓದಿದರು.
ವಿವಿಧ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ-ಆಶಾ ಕಾರ್ಯಕರ್ತೆಯರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ವಿವಿಧ ಇಲಾಖೆಗಳ ಸಿಬ್ಬಂದಿಗಳು ಹಾಗೂ ಜಾನಪದ ಕಲಾ ತಂಡದ ಸದಸ್ಯರು ಪಾಲ್ಗೊಂಡಿದ್ದರು.
ಬಿಸಿಲಿಗೆ ಹಾವನೂರ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಪ್ರೀತಂ ಪಕ್ಕೇದ ಹಾಗೂ ಜಯಲಕ್ಷ್ತ್ರಿ್ಮ ಗುಡಿಹಾಳ ಮಾನವ ಸರಪಳಿ ಕಾರ್ಯಕ್ರಮ ಮುಗಿದ ತಕ್ಷಣ ಅಸ್ವಸ್ಥರಾಗಿ ನೆಲಕ್ಕೆ ಕುಳಿತರು. ಆಗ ಸ್ಥಳದಲ್ಲಿ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆಯರು ಅಲ್ಲಿಯೇ ಇದ್ದ ಆಂಬುಲೆನ್ಸ್ನಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಅಲ್ಲಿ ಚಿಕಿತ್ಸೆ ಬಳಿಕ ಚೇತರಿಸಿದ ವಿದ್ಯಾರ್ಥಿಗಳನ್ನು ಹಾವನೂರಿಗೆ ಕಳುಹಿಸಲಾಯಿತು.
ಸಮುದಾಯ ಆರೋಗ್ಯ ಕೇಂದ್ರಕ್ಕೆ ತಹಸೀಲ್ದಾರ್ ಶರಣ ಕಾರಿ, ಬಿಇಒ ಮೌನೇಶ ಬಡಿಗೇರ ಹಾಗೂ ಮುಖ್ಯ ಶಿಕ್ಷಕ ಆರ್.ಎಸ್. ಭಜಂತ್ರಿ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು.
ಚಿಕಿತ್ಸೆ ನೀಡಿದ ವೈದ್ಯಾಧಿಕಾರಿ ಡಾ. ಶ್ರೀವಿದ್ಯಾ, ಪ್ರೀತಂ ಎಂಬ ವಿದ್ಯಾರ್ಥಿ ಜ್ವರದಿಂದ ಬಳಲುತ್ತಿದ್ದ. ಬೆಳಗ್ಗೆ ಉಪಹಾರ ಸೇವಿಸದೇ ಬಂದಿದ್ದರಿಂದ ಅಸ್ವಸ್ಥನಾಗಿದ್ದ. ಚಿಕಿತ್ಸೆ ಬಳಿಕ ಇಬ್ಬರು ಗುಣವಾಗಿದ್ದಾರೆ. ಭಾನುವಾರ ಇನ್ನೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಲು ಪ್ರೀತಂಗೆ ಬರುವಂತೆ ತಿಳಿಸಿದ್ದೇನೆ ಎಂದು ತಿಳಿಸಿದರು.