ಮಡಿಕೇರಿ: ಮಡಿಕೇರಿಯಲ್ಲಿ ಆಯೋಜಿಸಿದ್ದ ಹರ್ ಘರ್ ತಿರಂಗಾ ಅಭಿಯಾನಕ್ಕೆ ೧ ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿ ದೇಶಪ್ರೇಮ ಮೆರೆದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘ, ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಹೀಗೆ ಹಲವು ಸಂಘ ಸಂಸ್ಥೆಗಳ ಸಹಕಾರದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಪ್ರಯುಕ್ತ ಶುಕ್ರವಾರ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನಗರದ ಕೋಟೆ ಆವರಣದಲ್ಲಿ ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಎಂ.ಭೃಂಗೇಶ್, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ತಹಶೀಲ್ದಾರ್ ಮಹೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಪೊನ್ನಚ್ಚನ ಶ್ರೀನಿವಾಸ್ ಇತರರು ಚಾಲನೆ ನೀಡಿದರು.
ಜಾಥಾ ಸ್ಕ್ವಾರ್ಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ ಮೂಲಕ ಇಂದಿರಾ ಗಾಂಧಿ ವೃತ್ತ ತಲುಪಿ ನಂತರ ಸ್ಕ್ವಾರ್ಡ್ರನ್ ಲೀಡರ್ ದೇವಯ್ಯ ವೃತ್ತ-ಮಂಗೆರೀರ ಮುತ್ತಣ್ಣ ವೃತ್ತ-ಜನರಲ್ ತಿಮ್ಮಯ್ಯ ವೃತ್ತದ ಮುಖಾಂತರ ಕೋಟೆ ಆವರಣಕ್ಕೆ ತಲುಪಿತು. ಜಾಥಾದಲ್ಲಿ ಪೊಲೀಸ್ ಮತ್ತು ಭಾರತೀಯ ವಿದ್ಯಾಭವನದ ವಿದ್ಯಾರ್ಥಿಗಳು ವಾದ್ಯ ತಂಡದೊಂದಿಗೆ ಪಾಲ್ಗೊಂಡು ಜಾಥಾಗೆ ಮೆರಗು ನೀಡಿದರು.
ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳು, ಭಾರತೀಯ ವಿದ್ಯಾಭವನ, ಸಂತ ಜೋಸೆಫರ, ಸಂತ ಮೈಕಲರ ಶಾಲೆಯ ವಿದ್ಯಾರ್ಥಿಗಳು, ರಾಜರಾಜೇಶ್ವರಿ ಶಾಲೆ, ಜನರಲ್ ತಿಮ್ಮಯ್ಯ ಶಾಲೆ, ಬ್ಲಾಸಂ ಶಾಲೆ, ಲಿಟ್ಲ್ ಪ್ಲವರ್ ಶಾಲೆ ವಿದ್ಯಾರ್ಥಿಗಳು, ಎನ್‌ಡಿಆರ್‌ಎಫ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಅಧಿಕಾರಿಗಳು, ಸಿಬ್ಬಂಧಿಗಳು, ಹೊರಗುತ್ತಿಗೆ ಸಿಬ್ಬಂದಿಗಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಜನ ರಾಷ್ಟ್ರಧ್ವಜ ಸಹಿತ ಜಾಥಾದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಈ ಸಂದರ್ಭ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಪ್ರಧಾನಮಂತ್ರಿ ಅವರ ಕರೆ ಮೇರೆಗೆ ಸ್ವಯಂ ಪ್ರೇರಣೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು ಹೀಗೆ ಎಲ್ಲರೂ ಹರ್ ಘರ್ ತಿರಂಗಾ ಅಭಿಯಾನದ ಜಾಥದಲ್ಲಿ ಪಾಲ್ಗೊಂಡಿದ್ದಾರೆ. ಆ ನಿಟ್ಟಿನಲ್ಲಿ ಆ೧೩, ೧೪ ಮತ್ತು ೧೫ ರಂದು ಮೂರು ದಿನಗಳ ಕಾಲ ಸರ್ಕಾರಿ ಕಚೇರಿಗಳು, ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕಿದ್ದು, ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
’ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜು, ಅಂಗನವಾಡಿ ಸೇರಿದಂತೆ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಆ೧೩ ರಿಂದ ೧೫ ರವರೆಗೆ ಪ್ರತೀ ದಿನ ಬೆಳಗ್ಗೆ ೮ ರಿಂದ ಧ್ಜಜಾರೋಹಣ ಮಾಡಿ ಸೂರ್ಯಾಸ್ತದ ವೇಳೆಗೆ ಇಳಿಸಬೇಕಿದೆ. ಜಿಲ್ಲೆಯಾದ್ಯಂತ ಮನೆಗಳಲ್ಲಿ ಮಾತ್ರ ಆ೧೩ ರಂದು ಬೆಳಗ್ಗೆ ೮ ಗಂಟೆಗೆ ಧ್ವಜಾರೋಹಣ ಮಾಡಿ ಹಗಲು ರಾತ್ರಿ ನಿರಂತರವಾಗಿ ಧ್ವಜ ಹಾರಿಸಿ ಆ೧೫ ರ ಸಂಜೆ ಸೂರ್ಯಾಸ್ತದ ವೇಳೆಗೆ ಇಳಿಸಿ, ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕರಿಸುವಂತೆ ಡಾ.ಬಿ.ಸಿ.ಸತೀಶ ಕೋರಿದರು.
ಮಳೆಯ ಸಿಂಚನ ನಡುವೆ ಆರಂಭವಾದ ಜಾಥವು ನಂತರ ಬಿಡುವು ನೀಡಿತು. ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ರಾಷ್ಟ್ರಭಕ್ತಿಯ ಘೋಷವಾಕ್ಯ ಸಾರುವುದರ ಜತೆಗೆ ಹುರುಪಿನಿಂದ ಜಾಥಾದಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ಸೌಟ್ಸ್ ಮತ್ತು ಗೈಡ್ಸ್‌ನ ಪ್ರಧಾನ ಆಯುಕ್ತರಾದ ಬೇಬಿ ಮ್ಯಾಥ್ಯೂ, ನಾನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇತರರು ಇದ್ದರು. ಅಭಿಯಾನದ ಜಾಥ ನಂತರ ನಗರದ ಕೋಟೆ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಸ್ವಚ್ಛತಾ ಅಭಿಯಾನದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.