ಜಿಲ್ಲೆ

ಕಲಿಕೆಯೊಂದಿಗೆ ಸೇವಾ ಮನೋಭಾವವೂ ಅತ್ಯಗತ್ಯ...

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

ಸಾಧಕ ಸ್ಕೌಟ್ಸ್​ ಮತ್ತು ಗೈಡ್ಸ್​ ವಿದ್ಯಾರ್ಥಿಗಳಿಗೆ ಸನ್ಮಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕ ಗಳಿಸುವುದೇ ಪ್ರಧಾನ ವಿಷಯವಾಗಿದೆ. ಅದರೊಂದಿಗೆ ಸಮಾಜ, ದೇವರು, ಹಾಗೂ ನಿಸ್ವಾರ್ಥ ಸೇವಾಬುದ್ಧಿ ಅತ್ಯಂತ ಮುಖ್ಯವಾಗಿದೆ. ಸ್ಮರಣ ಶಕ್ತಿ ವೃದ್ಧಿಸಿಕೊಂಡು ಹೆಚ್ಚು ಅಂಕ ಗಳಿಸಿದರೆ ಅದು ಒಂದು ವಿಧದ ಸಾಧನೆ ಮಾತ್ರ. ಸೇವಾಮತಿಗಳಾದಾಗ ಮಾತ್ರ ಅದು ಪರಿಪೂರ್ಣ ಸಾಧನೆಯಾಗುತ್ತದೆ. ಈ ನಿಟ್ಟಿನಲ್ಲಿ ಸ್ಕೌಟ್ಸ್​ ಮತ್ತು ಗೈಡ್ಸ್​ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಭಾರತ ಸ್ಕೌಟ್​ ಮತ್ತು ಗೈಡ್ಸ್​ ಕರ್ನಾಟಕದ ಜಿಲ್ಲಾ ಸಂಸ್ಥೆ ಉಡುಪಿ ಸಹಯೋಗದಲ್ಲಿ 2025ನೇ ಸಾಲಿನ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ಪ್ರತಿಭಾನ್ವಿತ ಸ್ಕೌಟ್ಸ್​ ಮತ್ತು ಗೈಡ್ಸ್​, ರೋವರ್​ ರೇಂಜರ್​ನ ಸಾವಿರಾರು ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮವನ್ನು ಮೇ 30ರಂದು ಬೆಳಗ್ಗೆ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕು

ಅಪರ ಜಿಲ್ಲಾಧಿಕಾರಿ ಅಬೀದ ಗದ್ಯಾಳ ಮಾತನಾಡಿ, ಹೆಣ್ಣಿಗೆ ಅವಕಾಶ ಕೊಟ್ಟರೆ ಎಂತಹ ಸಾಧನೆ ಸಾಧ್ಯ ಎನ್ನುವುದಕ್ಕೆ ಈ ಸಮಾರಂಭ ಸಾಕ್ಷಿಯಾಗಿದೆ. ಇಲ್ಲಿರುವ ಎಲ್ಲ ವಿದ್ಯಾರ್ಥಿಗಳೂ ಪ್ರತಿಭಾನ್ವಿತರಿದ್ದೀರಿ. ತಾವುಗಳು ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕು. ಅನ್ಯರ ಕಷ್ಟ ನಿವಾರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ಸೈನಿಕರು

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್​ ಸಿಂಧ್ಯಾ ಮಾತನಾಡಿ, ಭಗವಾನ್​ ಶ್ರೀಕೃಷ್ಣ ತಮಗೆಲ್ಲರಿಗೂ ಉತ್ತಮ ಅವಕಾಶ ನೀಡಿದ್ದಾನೆ. ಆತನ ಸನ್ನಿಧಿಯಲ್ಲಿ ಸನ್ಮಾನಗೊಳ್ಳುತ್ತಿರುವುದು ನಿಮ್ಮೆಲ್ಲರ ಪುಣ್ಯ. ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆ ಎಂದರೆ ಕೇವಲ ವ್ಯಾಯಾಮ ಮಾಡುವ ಸಂಘಟನೆ ಎಂದು ಆಡಿಕೊಳ್ಳುವವರಿದ್ದಾರೆ. ಆದರೆ, ಯಾವುದೇ ಮತ, ಜಾತಿ, ಧರ್ಮ ಎನ್ನದೆ ಎಲ್ಲರನ್ನೂ ಪ್ರೀತಿಸಿ-ಗೌರವಿಸುವ ಧ್ಯೇಯ ನಮ್ಮದಾಗಿದೆ. ಪರಿಸರ ಮತ್ತು ದೇಶಕ್ಕಾಗಿ ಸೇವೆ ಮಾಡುವ ಸಾಮಾಜಿಕ ಸೈನಿಕರಾಗಿದ್ದೇವೆ. ರಾಜ್ಯದಲ್ಲಿ 8 ಲಕ್ಷ ಮಕ್ಕಳು ಈ ಸಂಘಟನೆಯಲ್ಲಿದ್ದು, ಅದನ್ನು ಈ ವರ್ಷ 10 ಲಕ್ಷಕ್ಕೆ ಹೆಚ್ಚಿಸುವ ಗುರಿ ಇದೆ ಎಂದರು.

ವಿದ್ಯಾರ್ಥಿಗಳಿಗೆ ಸನ್ಮಾನ

ಎಸ್​ಎಸ್​ಎಲ್​ಸಿಯಲ್ಲಿ 625ಕ್ಕೆ 625 ಅಂಕ ಗಳಿಸಿದ ಮಂಗಳೂರಿನ ವಿದ್ಯಾರ್ಥಿನಿ ಸಾನಿಧ್ಯಾ ರಾವ್​ ಸೇರಿದಂತೆ ಸಾವಿರಕ್ಕೂ ಅಧಿಕ ಮಕ್ಕಳನ್ನು ಅಭಿನಂದಿಸಿ, ಗೌರವಿಸಲಾಯಿತು. ಸ್ಕೌಟ್ಸ್​ ತರಬೇತದಾರೆ ಶುಭಾ ರಾವ್​ ಸನ್ಮಾನಿತರ ಪಟ್ಟಿ ವಾಚಿಸಿದರು.

ಸುಶ್ರೀಂದ್ರ ಶ್ರೀಗಳು ಮಕ್ಕಳಿಗೆ ಹಿತವಚನ ನುಡಿದರು. ಡಿಡಿಪಿಐ ಗಣಪತಿ ಕೆ., ಡಿಡಿಪಿಯು ಮಾರುತಿ, ಜಿಲ್ಲಾ ಗೈಡ್ಸ್​ ಆಯುಕ್ತೆ ಜ್ಯೋತಿ ಜೆ. ಪೈ, ಸ್ಕೌಟ್ಸ್​ ಮತ್ತು ಗೈಡ್ಸ್​ನ ಜಿಲ್ಲಾ ಖಜಾಂಚಿ ಹರಿಪ್ರಸಾದ ರೈ, ಜಿಲ್ಲಾ ಕಾರ್ಯದರ್ಶಿ ಆನಂದ ಬಿ. ಅಡಿಗ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನಾ ಶೇಖರ, ಡಯಟ್​ ಪ್ರಾಂಶುಪಾಲ ಡಾ. ಅಶೋಕ ಕಾಮತ, ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್​ ಉಪಸ್ಥಿತರಿದ್ದರು.

ಡಿಡಿಪಿಐಗೆ ಸನ್ಮಾನ

ಮೇ 31ರಂದು ನಿವೃತ್ತರಾಗಲಿರುವ ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ. ಅವರನ್ನು ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸ್ಕೌಟ್ಸ್​ಮತ್ತು ಗೈಡ್ಸ್​ನ ತರಬೇತುದಾರರು ಧ್ಯೇಯ ಗೀತೆ ಹಾಡಿದರು. ಉಡುಪಿ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಗೈಡ್ಸ್​ ನ ರಾಜ್ಯ ಸಂಘಟನಾ ಆಯುಕ್ತೆ ಮಂಜುಳಾ ಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಕೌಟ್ಸ್​ ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ ಭಟ್​ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸ್ಕೌಟ್ಸ್​​ ಆಯುಕ್ತ ಜನಾರ್ದನ ಕೊಡವೂರು ವಂದಿಸಿದರು.

ಸನ್ನಡತೆಗೆ 100 ಅಂಕ ಮೀಸಲಿಡಿ

ಸಮಾಜ, ಗುರುಹಿರಿಯರ ಸೇವೆ ಹಾಗೂ ಪರೋಪಕಾರದ ಕಾರ್ಯದ ಮೇಲೆ ವಿದ್ಯಾರ್ಥಿಗಳಿಗೆ ಅಂಕ ಲಭಿಸುವಂತಾಗಬೇಕು. ಇಲ್ಲದಿದ್ದಲ್ಲಿ ಎಲ್ಲ ಬಹುಮಾನ, ಪ್ರಶಸ್ತಿಗಳೂ ಸಹ ಎಐ (ಕೃತಕ ಬುದ್ಧಿಮತ್ತೆ)ಗೆ ಸಿಗುತ್ತದೆ. ಆದರೆ, ಅದಕ್ಕೆ ನಮ್ಮ ಪ್ರೋತ್ಸಾಹವಿಲ್ಲ. ಏಕೆಂದರೆ ನಿಷ್ಕಾಮ, ನಿಸ್ವಾರ್ಥ ಸೇವೆ ಮಾಡಲು ಎಐಗೆ ಬರುವುದಿಲ್ಲ. ಹೀಗಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯ ವಿಷಯದ ರೀತಿಯಲ್ಲೇ ಮಕ್ಕಳಲ್ಲಿ ಸೇವಾಭಾವ ಮೂಡಿಸಲು, ಅವರ ಗುಣ-ನಡತೆ ಸರಿಯಾಗಿಡಲು 100 ಅಂಕದ ಚಟುವಟಿಕೆ ಅಳವಡಿಸಬೇಕಿದೆ. ಅಮೆರಿಕದ ಶಾಲೆಗಳಲ್ಲಿ ಇಂತಹ ವ್ಯವಸ್ಥೆ ಇದೆ. ಅಲ್ಲಿನ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ, ಪ್ರಮಾಣ ಪತ್ರ ಪಡೆದು ಅದನ್ನು ಶಾಲೆಗೆ ನೀಡಿ ಅಂಕ ಪಡೆಯುತ್ತಾರೆ. ಅಂತಹ ಪದ್ಧತಿ ಭಾರತದಲ್ಲಿಯೂ ಜಾರಿಯಾಗಬೇಕು ಎಂದು ಸುಗುಣೇಂದ್ರ ಶ್ರೀ ಆಶಿಸಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರತಿವರ್ಷವೂ ಸಾಧನೆಯ ಮೂಲಕ ಉಡುಪಿ ಜಿಲ್ಲೆ ದೇಶದ ಗಮನ ಸೆಳೆಯುತ್ತದೆ. ಇಂತಹ ಜಿಲ್ಲೆಯಲ್ಲಿ, ಶ್ರೀಕೃಷ್ಣನ ಸನ್ನಿಧಿಯಲ್ಲಿ ಅಭಿನಂದಿಸುತ್ತಿರುವುದು ಎಲ್ಲ ಮಕ್ಕಳ ಭಾಗ್ಯವಾಗಿದೆ. ಭಾರತದ ಉಜ್ವಲ ಭವಿಷ್ಯದ ರೂವಾರಿಗಳಾದ ತಾವು ದೇಶದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಬೇಕು. | ಯಶ್​ಪಾಲ್​ ಸುವರ್ಣ. ಶಾಸಕ ಬಿಜೆಪಿ ಮಾಜಿ ಸಚಿವ, ಉಡುಪಿಯವರೇ ಆದ ದಿ.ವಿ.ಎಸ್​. ಆಚಾರ್ಯ ಅವರನ್ನು ಸ್ಮರಿಸಿಕೊಳ್ಳಬೇಕು. ಉಡುಪಿಯಲ್ಲಿ ಸ್ಕೌಟ್ಸ್​ ಮತ್ತು ಗೈಡ್ಸ್​ನ ತರಬೇತಿ ಕೇಂದ್ರ ಸ್ಥಾಪಿಸಿಕೊಟ್ಟ ಮಹನೀಯರಾಗಿದ್ದಾರೆ. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಸಹ ಅವರು ನಿರ್ಮಿಸಿಕೊಟ್ಟ ತರಬೇತಿ ಕೇಂದ್ರದ ಮೂಲಕವಾಗಿ ಸದಾ ನಮ್ಮೊಂದಿಗೆ ಇದ್ದಾರೆ. | ಪಿಜಿಆರ್​ ಸಿಂಧ್ಯಾ. ರಾಜ್ಯ ಮುಖ್ಯ ಆಯುಕ್ತ, ಸ್ಕೌಟ್ಸ್​ ಮತ್ತು ಗೈಡ್ಸ್.