ಬಳ್ಳಾರಿ: ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಮಾರ್ಗದರ್ಶನ, ಆದರ್ಶಗಳು ಸಾರ್ವಕಾಲಿಕ. ಮನುಜ ಮತ ವಿಶ್ವಪಥ ಸಂದೇಶ ಸಾರಿದ ಶ್ರೇಷ್ಠ ವಿಶ್ವಮಾನವ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್ ಹೇಳಿದರು.
ನಗರದ ಡಾ.ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯ ಆವರಣದ ಹೊಂಗಿರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ. ವಿಶ್ವಮಾನವ ಧರ್ಮವನ್ನು ರೂಪಿಸಿಕೊಟ್ಟ ರಾಷ್ಟ್ರಕವಿ ಕುವೆಂಪು ಅವರ ವಿಚಾರಗಳನ್ನು ಪ್ರತಿಯೊಬ್ಬರೂ ಅಳವಡಿಕೊಳ್ಳುವ ಅಗತ್ಯವಿದೆ. ಕುವೆಂಪು ಅವರ ವೈಚಾರಿಕತೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಅನನ್ಯವಾದುದು ಎಂದರು.
ರಾಷ್ಟ್ರಕವಿ ಕುವೆಂಪು ಅವರ ಪುಸ್ತಕಗಳನ್ನು ಯುವ ಪೀಳಿಗೆ ಅಧ್ಯಯನ ಮಾಡಬೇಕು. ಅವರ ಕಾವ್ಯಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಹಾಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶೇಷ ಉಪನ್ಯಾಸದಲ್ಲಿ ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಖ್ಯಸ್ಥೆ ಡಾ.ಕಲಾವತಿ.ಬಿ.ಜಿ ಅವರು ಮಾತನಾಡಿ, ಮಾನವ ತನ್ನ ಮನಸನ್ನು ವಿಶ್ವದಷ್ಟು ವಿಶಾಲವಾಗಿ ಇಟ್ಟುಕೊಳ್ಳಬೇಕು. ಹೃದಯವಂತಿಕೆ ಸಜ್ಜನಿಕೆ, ಅಭಿಮಾನ, ಪ್ರೀತಿ, ಸಹನೆ ಹಾಗೂ ಕರುಣೆ ಎಲ್ಲವೂ ಮುಖ್ಯ ಎನ್ನುವುದನ್ನು ತಮ್ಮ ಕಾವ್ಯಗಳ ಮೂಲಕ ಕುವೆಂಪು ಅವರು ಜಗತ್ತಿಗೆ ಪರಿಚಯಿಸಿದವರು ಎಂದು ಸ್ಮರಿಸಿದರು.
ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯನ್ನು ಅವರು ಪರಿಚಯಿಸಿದ್ದರು. ಈ ಪಂಚಮಂತ್ರಗಳು ಮುಂದಿನ ಪೀಳಿಗೆಗೆ ದೃಷ್ಟಿಕೋನವಾಗಬೇಕು ಎಂಬುದು ಅವರ ಆಶಯವಾಗಿತ್ತು ಎಂದು ಹೇಳಿದರು.
ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೊನ್ನೂರಪ್ಪ.ಟಿ., ಕಲಾವಿದರಾದ ಯಲ್ಲನಗೌಡ, ಮಂಜುನಾಥ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.