ಜಿಲ್ಲೆ

ಮಾಸೂರಿನ ಗ್ರಿಡ್‌ನಲ್ಲಿ ಕೆಲಸ ನಿರ್ವಹಿಸುವ ವೇಳೆ ಅವಘಡ, ಹೊರಗುತ್ತಿಗೆ ನೌಕರ ಕುಮಾರ ಸಾವು

ರಟ್ಟಿಹಳ್ಳಿ: ತಾಲೂಕಿನ ಮಾಸೂರಿನ ಉಪ ವಿದ್ಯುತ್ ಕೇಂದ್ರದ ಗ್ರಿಡ್‌ನಲ್ಲಿ ವ್ಯಾಕ್ಯುಂ ಇಂಟರ್‌ಪ್ಟರ್ ಪರೀಕ್ಷಿಸುವ ವೇಳೆ ಕಂಬದ ಮೇಲಿಂದ ಕೆಳಗೆ ಬಿದ್ದ ಇಬ್ಬರ ಪೈಕಿ ಒಬ್ಬ ಮೃತಪಟ್ಟಿದ್ದು, ಇನ್ನೊಬ್ಬ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.

ಕುಮಾರ ವೀರನಗೌಡ ಬಸನಗೌಡ ಕುರುವತ್ತಿಗೌಡ್ರ (28) ಮೃತ ವ್ಯಕ್ತಿ. ಇವರು ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ನಿವಾಸಿಯಾಗಿದ್ದು, ರಾಣೆಬೆನ್ನೂರು 33 ಕೆ.ವಿ. ಹೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದರು. ಮಂಗಳವಾರ ಮಾಸೂರಿನ ಗ್ರಿಡ್‌ನಲ್ಲಿ ವ್ಯಾಕ್ಯುಂ ಇಂಟರ್‌ಪ್ಟರ್ ಪರೀಕ್ಷಿಸಲು ಆಗಮಿಸಿದ್ದರು. ಮೆಕಾನಿಕ್ ಕಲ್ಲಪ್ಪ ತೋಶಿನಾಳ ಅವರೊಂದಿಗೆ ಕಂಬದ ಮೇಲೆ ನಿಂತು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಆಯತ್ಪಪಿ ಕೆಳಕ್ಕೆ ಬಿದ್ದಿದ್ದಾರೆ.

ಕೂಡಲೇ ಅವರನ್ನು ಮಾಸೂರಿನ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಶಿಕಾರಿಪುರ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕುಮಾರ ವೀರನಗೌಡ ಮೃತಪಟ್ಟಿದ್ದಾರೆ. ಕಲ್ಲಪ್ಪ ತೋಶಿನಾಳ ಅವರಿಗೆ ಗಾಯವಾಗಿದ್ದು, ಶಿಕಾರಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.