ಜಿಲ್ಲೆ

ಸಾರಿಗೆ ನೌಕರರ ಮುಷ್ಕರಕ್ಕೆ ಬಾಹ್ಯ ಬೆಂಬಲ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸಾರಿಗೆ ನೌಕರರ ಒಕ್ಕೂಟದ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ (ಆಗಸ್ಟ್ 5ರಿಂದ)ಕ್ಕೆ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟ ಬಾಹ್ಯ ಬೆಂಬಲ ನೀಡಲಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಸುರೇಶ ನಾಡಗೇರ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಷ್ಕರ ನಡೆಸುವ ಬಗ್ಗೆ ಜಂಟಿ ಕ್ರಿಯಾ ಸಮಿತಿಯು ನಮ್ಮೊಂದಿಗೆ ಮಾತುಕತೆ ನಡೆಸಿಲ್ಲ. ಸಾರಿಗೆ ನೌಕರರ ಹಿತದೃಷ್ಟಿಯಿಂದ ಬಾಹ್ಯ ಬೆಂಬಲ ಕೊಡುತ್ತಿದ್ದೇವೆ. ನಾವು ಸಹ ಕೆಲಸದಿಂದ ದೂರವುಳಿಯುತ್ತೇವೆ ಎಂದರು.

ಮುಷ್ಕರವನ್ನು ಹತ್ತಿಕ್ಕಲು ಸಾರಿಗೆ ಸಂಸ್ಥೆ, ಅಧಿಕಾರಿಗಳು ಎಸ್ಮಾ ಜಾರಿಗೆ ತರುತ್ತಾರೆ. ಎಸ್ಮಾ ರದ್ದು ಮಾಡುವಂತೆ ಕೋರಿ ಧಾರವಾಡ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ನ್ಯಾಯಾಲಯದಲ್ಲಿ ಅರ್ಜಿ ಸ್ವೀಕೃತವಾಗಿದ್ದು, ಶೀಘ್ರ ವಿಚಾರಣೆಗೆ ಬರಲಿದೆ ಎಂದು ತಿಳಿಸಿದರು.

ಶಕ್ತಿ ಯೋಜನೆಯಡಿ 2 ವರ್ಷಗಳಲ್ಲಿ 4 ಸಾರಿಗೆ ನಿಗಮಗಳಿಗೆ 12,669 ಕೋಟಿ ರೂ. ಪಾವತಿಸಿದ್ದೇವೆ ಎಂದು ಹೇಳುವ ರಾಜ್ಯ ಸರ್ಕಾರದ ಮುಂದೆ ನೌಕರರಿಗೆ ದುಡಿಮೆಗೆ ತಕ್ಕ ಸಂಬಳ ಕೊಡಿ ಎಂದು ಕೇಳುತ್ತಿದ್ದೇವೆ. 2020ರ ಜನೆವರಿ 1ರ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. 2024ರ ಜನೆವರಿ 1ರಿಂದ ಜಾರಿಯಾಗುವಂತೆ ವೇತನ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು.

ನಿವೃತ್ತರಿಗೆ ವೇತನ ಪರಿಷ್ಕರಣೆಯ ಹಾಗೂ ಇತರ ಬಾಕಿ ಹಣವನ್ನು ನೀಡಬೇಕು. ನಾಲ್ಕು ನಿಗಮದಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುತ್ತಿರುವ ಚಾಲಕ, ತಾಂತ್ರಿಕ ಸಿಬ್ಬಂದಿ ನೇಮಕಾತಿಯನ್ನು ರದ್ದುಪಡಿಸಬೇಕು. ಸಂಸ್ಥೆಯಲ್ಲಿನ ಭ್ರಷ್ಟ ಅಧಿಕಾರಿ ಮೇಲೆ ಕ್ರಮವಾಗಬೇಕೆಂದು ಆಗ್ರಹಿಸುತ್ತಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜೀವ ದೊಡ್ಡಗೌಡನ್ನವರ, ಗಂಗಾಧರ ನಾಡಗೇರ, ಬಾಬುರಾಮ್ ಮಣಪಾಡಿ ಇದ್ದರು.