ಕಲಾದಗಿಯಲ್ಲಿ ನಾಡಕಚೇರಿಯ ಮುಂದೆ ಗೋವಿಗೆ ಪೂಜೆ ಸಲ್ಲಿಸಿದ ಪ್ರತಿಭಟನಾಕಾರರು. 
ಜಿಲ್ಲೆ

ಕಲಾದಗಿಯಲ್ಲಿ ಆಕ್ರೋಶದ ಪ್ರತಿಭಟನೆ

ಕಲಾದಗಿ: ಗ್ರಾಮದ ಬಾಲಾಜಿ ಮಂದಿರದ ಮುಂದೆ ಗೋವಿನ ತಲೆ ಮತ್ತು ಇನ್ನಿತರ ದೇಹದ ಅವಶೇಷ ಇಟ್ಟು ಹೋಗಿರುವುದರನ್ನು ಖಂಡಿಸಿ ಹಾಗೂ ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿರುವವರಿಗೆ ತಕ್ಕ ಶಾಸ್ತಿ ಆಗಬೇಕೆಂದು ಆಗ್ರಹಿಸಿ ಶುಕ್ರವಾರ ಗ್ರಾಮದಲ್ಲಿ ಸಕಲ ಹಿಂದು ಸಮಾಜದ ವತಿಯಿಂದ ಕರೆ ನೀಡಲಾಗಿದ್ದ ‘ಆಕ್ರೋಶದ ಪ್ರತಿಭಟನೆ’ ಯಶಸ್ವಿಯಾಯಿತು.

ಘಟನೆ ನಡೆದ ಸ್ಥಳವಾದ ಬಾಲಾಜಿ ಮಂದಿರದಿಂದ ಬೆಳಗ್ಗೆ 10.30ಕ್ಕೆ ಗೋವಿನೊಂದಿಗೆ ಹೊರಟ ಪ್ರತಿಭಟನಾ ಮೆರವಣಿಗೆಕಾರರು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆತಂದವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ, ಹಲಗೆ ಬಾರಿಸುತ್ತಾ ಅಡತ ಬಜಾರ, ದೊಡ್ಡಮಸೀದಿ, ಬಸವೇಶ್ವರ ವೃತ್ತ, ಹೆಣ್ಣುಮಕ್ಕಳ ಶಾಲೆ, ಗಡ್ಡಿ ಓಣಿ, ಹೊಸೂರ ಚೌಕ, ಬಸಬಣ್ಣದೇವರ ಗುಡಿ, ಕೊಬ್ಬರಿ ವೃತ್ತ ಮೂಲಕ ಅಂಬೇಡ್ಕರ್ ವೃತ್ತ್ತದಲ್ಲಿ ಸಭೆಯಾಗಿ ಮಾರ್ಪಾಡಾದರು.

ಹಿಂದುಪರ ಮುಖಂಡ ಬಸವರಾಜ ಯಂಕಂಚಿ ಮಾತನಾಡಿ, ಕಲಾದಗಿಯಲ್ಲಿ ಸೌಹಾರ್ದದ ಸೋಗಿನಲ್ಲಿ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯ ಮೇಲಿಂದ ಮೇಲೆ ನಡೆಯುತ್ತಿರುವುದನ್ನು ಇನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಇದು ಇಲ್ಲಿಗೆ ಕೊನೆಯಾಗಬೇಕು. ಇಲ್ಲವಾದರೆ ಜಾಗೃತ ಹಿಂದು ಸಮಾಜ ಅಂಥ ಮತಾಂಧರಿಗೆ ತಕ್ಕ ಶಾಸ್ತಿ ಕಲಿಸುತ್ತದೆ ಎಂದು ಎಚ್ಚರಿಸಿದರು.

ನಾಡಕಚೇರಿಯ ಬಳಿ ಮಾತನಾಡಿದ ಮುಧೋಳದ ಹಿಂದುಪರ ಮುಖಂಡ ಶಂಕರಗೌಡ ಪಾಟೀಲ, ಈ ಘಟನೆಗೆ ಕಾರಣರಾದವರನ್ನು ಇನ್ನು ಎರಡ್ಮೂರು ದಿನದಲ್ಲಿ ಬಂಧಿಸದಿದ್ದರೆ ಹೋರಾಟ ಬೇರೆಯದೆ ಹಾದಿ ಹಿಡಿಯುತ್ತದೆ. ಈ ಪ್ರಕರಣ ತಾರ್ಕಿಕ ಅಂತ್ಯ ಕಾಣಬೇಕು ಎಂದರು.

ಗೋಮಾತೆಗೆ ಪೂಜೆ

ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಮುಂಚೂಣಿಯಲ್ಲಿ ಗೋವು ಕರೆದೊಯ್ಯದಿದ್ದು ಮತ್ತು ನಾಡಕಚೇರಿ ಬಳಿ ಉಪತಹಸೀಲ್ದಾರ್ ಆರ್.ಆರ್. ಕುಲಕರ್ಣಿ ಅವರಿಗೆ ಮನವಿ ಸಲ್ಲಿಸುವುದಕ್ಕೂ ಮೊದಲು ಮಾತೆಯರಿಂದ ಗೋಮಾತೆಗೆ ಪೂಜೆ ಸಲ್ಲಿಸಿದ್ದು ಪ್ರತಿಭಟನೆಯ ವಿಶೇಷವಾಗಿತ್ತು.

ಬಾಗಲಕೋಟೆ ಜಿಲ್ಲಾ ಶ್ರೀ ರಾಮಸೇನೆಯ ಗೌರವಾಧ್ಯಕ್ಷ ವೀರಾಪುರದ ವಿಶ್ವಕರ್ಮ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ದುರ್ಗಾ ವಾಹಿನಿಯ ಜಿಲ್ಲಾ ಅಧ್ಯಕ್ಷೆ ಮಂಜುಳಾ ಆರ್. ಮೇರಾಕರ, ಬಶೆಟ್ಟೆಪ್ಪ ಅಂಗಡಿ, ಕೆ.ಆರ್. ಶಿಲ್ಪಿ, ವಾಸುದೇವ ಮಮದಾಪುರ,ನಿಂಗಪ್ಪ ಅಗಸರ, ಶಿವಾಜಿ ಚವಾಣ, ಬಸವರಾಜ ಬಡಿಗೇರ, ತಿಮ್ಮಣ್ಣ ಬಟಕುರ್ಕಿ, ಪಿ.ಜಿ. ಅರಕೇರಿ, ಭೀಮಣ್ಣಾ ಹೂಗಾರ ಇದ್ದರು.

ಸೂಕ್ತ ರಕ್ಷಣಾ ವ್ಯವಸ್ಥೆ

ಹೆಚ್ಚುವರಿ ಎಸ್‌ಪಿ ಮಹಾಂತೇಶ ಜಿದ್ದಿ, ಡಿವೈಎಸ್‌ಪಿ ಎಂ.ಕೆ. ಗಂಗಲ, ಸಿಪಿಐ ಎಚ್.ಆರ್. ಪಾಟೀಲ, ಪಿಎಸ್‌ಐ ಚಂದ್ರಶೇಖರ ಹೆರಕಲ್ ಮತ್ತವರ ಸಿಬ್ಬಂದಿ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಿದ್ದರು.