ಶಿರಸಿ: ನಗರದ ಬನವಾಸಿ ರಸ್ತೆ ಟಿಪ್ಪು ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ಕೆಲ ದಿನಗಳ ಹಿಂದೆ ನಿವೃತ್ತರಾಗಿರುವ ಪ್ರಾಂಶುಪಾಲೆ ಇಲ್ಲಿಯ ಕಪಾಟುಗಳನ್ನು ಸೀಲ್ ಮಾಡಿ ಹೋಗಿರುವುದಕ್ಕೆ ಶಾಸಕ ಭೀಮಣ್ಣ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು. ಮಂಗಳವಾರ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಈ ಕುರಿತಂತೆ ತನಿಖೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕೆಲ ದಿನಗಳ ಹಿಂದೆ ನಿವೃತ್ತರಾದ ಪ್ರಾಂಶುಪಾಲೆ ದಾಕ್ಷಾಯಿಣಿ ಹೆಗಡೆ ಅವರ ಆಡಳಿತ ವೈಖರಿ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ಕೇಳಿಬಂದಿದ್ದವು. ಹೊಸ ಪ್ರಾಂಶುಪಾಲೆ ಮಂಜುಳಾ ಪೂಜಾರ ಅಧಿಕಾರ ಸ್ವೀಕರಿಸಿದ್ದರೂ ಹಳೆಯ ದಾಖಲೆಗಳು, ಲೆಕ್ಕ ಪತ್ರಗಳಿದ್ದ ಕಪಾಟಿಗೆ ಟೇಪ್ ಹಚ್ಚಿ ಸೀಲ್ ಆಗಿದ್ದ ಕಾರಣ ಅವರು ಅಧಿಕಾರವನ್ನು ಸಂಪೂರ್ಣ ಪ್ರಮಾಣದಲ್ಲಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಜುಳಾ ಪೂಜಾರ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಭೀಮಣ್ಣ ನಾಯ್ಕ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕರು ಕಾಲೇಜಿಗೆ ಆಗಮಿಸಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಭೀಮಣ್ಣ ನಾಯ್ಕ, ಆಡಳಿತ ಮಂಡಳಿಯ ಇತರ ಸದಸ್ಯರಿಗೆ ತಿಂಗಳಲ್ಲಿ ಒಮ್ಮೆಯಾದರೂ ಆಗಮಿಸಿ ಕಾಲೇಜಿನ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಲು ಸೂಚಿಸಿದ್ದೆ. ಆದರೆ, ಹಿಂದಿನ ಪ್ರಾಂಶುಪಾಲೆಯಿಂದ ಕೆಲ ಅವ್ಯವಹಾರದ ಶಂಕೆಯನ್ನು ಸದಸ್ಯರು ವ್ಯಕ್ತಪಡಿಸಿದ್ದರು. ಕಾಲೇಜಿನಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ನನಗೂ ಲಭ್ಯವಿರಲಿಲ್ಲ. ಇತ್ತೀಚೆಗೆ ಹಳೆಯ ಪ್ರಾಚಾರ್ಯು ನಿವೃತ್ತರಾಗಿ ತೆರಳುವ ವೇಳೆ ಈ ರೀತಿ ಕಪಾಟುಗಳನ್ನು ಸೀಲ್ ಮಾಡಿ ಹೋಗಿರುವುದು ಸಂಶಯಕ್ಕೆ ಕಾರಣವಾಗಿದೆ. ಬೆಂಕಿ ಇರದೆ ಹೊಗೆ ಆಡುವುದಿಲ್ಲ. ಈ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಿಗೂ ತಿಳಿಸಲಾಗಿದೆ. ಅವರು ಕಾಲೇಜಿಗೆ ಆಗಮಿಸಿದ ಬಳಿಕ ಅವರ ಸಮ್ಮುಖದಲ್ಲಿಯೇ ಸೀಲ್ ಮಾಡಿರುವ ಕಪಾಟುಗಳನ್ನು ತೆಗೆಯಿಸಿ ಪರಿಶೀಲನೆ ನಡೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಹಿಂದಿನ ಆಡಳಿತ ಕಮಿಟಿ ಇದುವರೆಗೆ ಕಾಲೇಜಿನಲ್ಲಿ ಏನೆಲ್ಲ ಆಗಿದೆ ಎಂಬ ಮಾಹಿತಿ ನಮಗೆ ನೀಡಿಲ್ಲ. ನಿಯಮಾನುಸಾರ ಮಂಜುಳಾ ಪೂಜಾರ ಈಗ ಅಧಿಕಾರ ಹಸ್ತಾಂತರ ಮಾಡಿಕೊಂಡಿದ್ದಾರೆ. ಆದರೆ, ಹಣಕಾಸಿನ ಲೆಕ್ಕಾಚಾರ, ಖರ್ಚು-ವೆಚ್ಚ, ಸರ್ಕಾರದ ಅನುದಾನ ಎಷ್ಟು ಬಂದಿದೆ, ಎಷ್ಟು ಬಳಕೆ ಆಗಿದೆ, ಮಕ್ಕಳಿಂದ ಸಂಗ್ರಹಿಸಿದ ಶುಲ್ಕ ಸೇರಿ ಎಲ್ಲ ಮಾಹಿತಿ ಪಡೆದೇ ಅಧಿಕಾರ ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಕಾಲೇಜಿಗೆ ಸಂಬಂಧಿಸಿದ 16 ಅಕೌಂಟ್ ಮಾಹಿತಿಯನ್ನು ಹಿಂದಿನ ಪ್ರಾಚಾರ್ಯು ನೀಡಬೇಕು. ಆದರೆ, ಅದನ್ನು ನೀಡದೆ ಈ ರೀತಿ ಕಪಾಟುಗಳನ್ನು ಸೀಲ್ ಮಾಡಿ ಹೋಗಿರುವುದು ಅಚ್ಚರಿಗೆ ಕಾರಣವಾಗಿದೆ. ಮಕ್ಕಳು ಯಾವುದೇ ತೊಂದರೆ ಆಗದಂತೆ ಕಾಲೇಜಿನಲ್ಲಿ ಶಿಕ್ಷಣ ಪಡೆಯಬೇಕು. ಕಾಲೇಜಿನಲ್ಲಿ ಅವ್ಯವಹಾರ ಆಗಿದ್ದರೆ ಯಾವುದೇ ಕಾರಣಕ್ಕೆ ತನಿಖೆಗೆ ಹಿಂಜರಿಯುವುದಿಲ್ಲ. ಸಾಧ್ಯವಾದರೆ ಜಿಲ್ಲಾ ಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದ ಭೀಮಣ್ಣ, ಕಪಾಟುಗಳನ್ನು ಸೀಲ್ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಕಾಲೇಜಿನಲ್ಲಿ ಒಂದು ರೂ. ಸಹ ಅವ್ಯವಹಾರ ಆಗಲು ನಾನು ಬಿಡುವುದಿಲ್ಲ. ಮುಲಾಜಿಲ್ಲದೆ ಸರಿಯಾದ ರೀತಿ ತನಿಖೆ ನಡೆಸುತ್ತೇನೆ ಎಂದರು. ಕಾಲೇಜಿನ ಪ್ರಾಚಾರ್ಯು ಮಂಜುಳಾ ಪೂಜಾರ, ಪ್ರಮುಖರಾದ ಎಸ್.ಎಂ. ಕಮನಳ್ಳಿ, ಜಗದೀಶ ಗೌಡ ಇತರರಿದ್ದರು.