ಬಿಡದಿ: ಗಣಿಗಾರಿಕೆಯ ಟಿಪ್ಪರ್ ಲಾರಿಗಳ ಅಬ್ಬರ, ಧೂಳಿನಿಂದ ನಲುಗಿ ಹೋದ ಮುತ್ತರಾಯನಪುರ ಗ್ರಾಮಸ್ಥರು ಹಾಗೂ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಲಾರಿಗಳನ್ನ ತಡೆದು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಟಿಪ್ಪರ್ ಲಾರಿಗಳ ಓಡಾಟದ ಧೂಳಿನಿಂದ ನಲುಗಿ ಹೋಗಿದ್ದೇವೆ ಮನೆಗಳಲ್ಲಿ ಇರಲು ಆಗುತ್ತಿಲ್ಲ ನೀರು, ಊಟದ ಮೇಲೆಲ್ಲಾ ಧೂಳು ತುಂಬಿ ಅನಾರೋಗ್ಯ ತಾಂಡವಾಡುತ್ತಿದೆ, ಅಸ್ತಮಾದಂತ ಉಸಿರು ಹಿಡಿದುಕೊಳ್ಳುವಂಥ ರೋಗ ಬಾದೆ ಹೆಚ್ಚಾಗುತ್ತಿದೆ, ಹಲವು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡೇರಿ ಗ್ರಾಮದ ಅಕ್ಕಪಕ್ಕದಲ್ಲಿ ಹತ್ತು ಹಲವು ಕ್ರಷರ್ ಗಳಿದ್ದು ಪ್ರತಿನಿತ್ಯ ನೂರಾರು ಲಾರಿಗಳು ಸಂಚಾರ ಮಾಡುತ್ತವೆ. ಯಾವ ಲಾರಿ ಚಾಲಕರು ನಿಯಮಗಳನ್ನ ಪಾಲಿಸುತ್ತಿಲ್ಲ ಬೇಕಾಬಿಟ್ಟಿ ಲಾರಿಗಳನ್ನ ಚಾಲನೆ ಮಾಡಿಕೊಂಡು ಬರುತ್ತಾರೆ. ನಮ್ಮ ಗ್ರಾಮದ ಮೂಲಕ ಹೆಜ್ಜಾಲಕ್ಕೆ ಬಂದು ಬೆಂಗಳೂರು- ಮೈಸೂರು ಹೆದ್ದಾರಿ ಸೇರಿಕೊಳ್ಳುತ್ತವೆ. ಪ್ರತಿನಿತ್ಯ ಲಾರಿಗಳು ಸಂಚಾರ ಮಾಡುತ್ತಿರುವುದರಿಂದ ರಸ್ತೆಗಳು ಸಹ ಗುಂಡಿ ಬಿದ್ದಿವೆ ಎಂದು ಕಿಡಿಕಾರಿದರು.
ಕ್ರಷರ್ ಲಾರಿಗಳ ಹಾವಳಿಯಿಂದಾಗಿ ವಿಪರೀತ ಧೂಳು ಹಾಗೂ ಶಬ್ದ ಮಾಲಿನ್ಯ ಹೆಚ್ಚಾಗಿ ಕಣ್ಣು, ಹಾಗೂ ಕಿವಿಗಳು ಕೇಳಿಸಿದಂತೆ ಆಗಿವೆ. ಇಲ್ಲಿಗೆ ವಾಯು ಮಾಲಿನ್ಯ ಅಧಿಕಾರಿಗಳು, ಆರ್‌ಟಿಒ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಯಾರು ಕೂಡ ಬರುವುದಿಲ್ಲ ಎಂದು ಆರೋಪಿಸಿದರು.
ಲಾರಿಗಳನ್ನ ತಡೆದು ರಸ್ತೆ ಬಂದ್ ಆಗಿರುವ ವಿಷಯ ತಿಳಿದ ಬಿಡದಿ ಠಾಣೆ ಪಿಎಸ್ಐ ಕೇಶವಮೂರ್ತಿ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ಸ್ಥಳಕ್ಕೆ ಬಂದು ಗ್ರಾಮಸ್ಥರ ಅಳಲನ್ನ ಆಲಿಸಿ ಸೂಕ್ತ ಪರಿಹಾರ ಕೈಗೊಳ್ಳುವ ಭರವಸೆ ನೀಡಿದರು. ಭಾನುವಾರ ಪೊಲೀಸ್ ಠಾಣೆಗೆ ಎಲ್ಲಾ ಕ್ರಷರ್ ಮಾಲೀಕರನ್ನ ಕರೆದು ಸಭೆ ಮಾಡಿ ನಿಯಮಗಳ ಪಾಲನೆಗೆ ತಾಕೀತು ಮಾಡಲಾಗುವುದೆಂದು ಭರವಸೆ ನೀಡಿದ ಮೇಲೆ ಗ್ರಾಮಸ್ಥರು ತಡೆದ ಲಾರಿಗಳನ್ನ ಬಿಟ್ಟರು.
ಈ ವೇಳೆ ರಾಜ್ಯ ರೈತ ಸಂಘದ ಅಧ್ಯಕ್ಷ ತುಂಬೆನಹಳ್ಳಿ ಶಿವಕುಮಾರ್, ಗ್ರಾ.ಪಂ ಸದಸ್ಯ ಉದಯ್ ಕುಮಾರ್ ಗ್ರಾಮದ ಮುಖಂಡರಾದ ಜನಾರ್ದನ್, ಶಿವಣ್ಣ, ರುದ್ರಯ್ಯ, ಶಂಕರ್, ರಾಮಕೃಷ್ಣ, ಮಲ್ಲೇಶ್ ಸೇರಿದಂತೆ ಗ್ರಾಮದ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
“””””””
ಪ್ರತಿನಿತ್ಯ ದಿನದ 24 ಗಂಟೆಗಳು ಸಹ ಲಾರಿಗಳು ಸಂಚಾರ ಮಾಡುತ್ತವೆ. ಅದರಲ್ಲೂ ನಮ್ಮನ್ನ ಯಾರು ಕೇಳಲ್ಲ ಎಂದು ರಾತ್ರಿ ವೇಳೆ ಹೆಚ್ಚಾಗಿ ಲಾರಿಗಳು ಓಡಾಟ ಮಾಡುತ್ತವೆ. ಜೆಲ್ಲಿ, ಎಂಸ್ಯಾಂಡ್ ತುಂಬಿದ ಲಾರಿಗಳು ಟಾರ್ಪಲ್ ಹಾಕಿಕೊಳ್ಳದೆ ಹಾಗೆ ಬರುವುದರಿದ ಧೂಳು ಹೆಚ್ಚಾಗಿ ಬರುತ್ತದೆ. ರಾತ್ರಿ ವೇಳೆ ಮದ್ಯಪಾನ ಮಾಡಿ ಲಾರಿಗಳನ್ನ ಚಾಲಕರು ಚಾಲನೆ ಮಾಡುತ್ತಾರೆ.
ರಂಗಸ್ವಾಮಿ, ಗ್ರಾಮದ ರೈತ ಮುಖಂಡ