ಹಾಸನ: ಬೆಂಬಲ ಬೆಲೆಯಡಿ ಕೊಬ್ಬರಿ ಖರೀದಿಗಾಗಿ ತಾಲೂಕಿನಲ್ಲಿ ನಡೆಯುತ್ತಿದ್ದ ನೋಂದಣಿ ಪ್ರಕ್ರಿಯೆ ಏಕಾಏಕಿ ಸ್ಥಗಿತವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಎಪಿಎಂಸಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿ, ನೋಂದಣಿ ಪ್ರಕ್ರಿಯೆ ಮುಂದುವರಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಚನ್ನರಾಯಪಟ್ಟಣ ತಾಲೂಕಿನ ಪ್ರಮುಖ ಬೆಳೆ ತೆಂಗು, ದರ ಕುಸಿತದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಫೆಡ್ ಮೂಲಕ ಕೊಬ್ಬರಿ ಖರೀದಿಗೆ ಮುಂದಾಗಿ ಫೆ.5ರಿಂದ ನೋಂದಣಿ ಆರಂಭಿಸಿತ್ತು. ಖರೀದಿಗಾಗಿ 62 ಸಾವಿರ ಮೆಟ್ರಿಕ್ ಟನ್ ಗುರಿ ನಿಗದಿಗೊಳಿಸಲಾಗಿತ್ತು. ಗುರಿ ತಲುಪಿದ ಹಿನ್ನೆಲೆಯಲ್ಲಿ ಶುಕ್ರವಾರದಂದು ಮಧ್ಯಾಹ್ನದ ವೇಳೆಗೆ ನೋಂದಣಿ ಸ್ಥಗಿತಗೊಂಡಿತು. ಇನ್ನೂ ತಾಲೂಕಿನಲ್ಲಿ ಶೇ.50ರಷ್ಟು ರೈತರು ನೋಂದಣಿ ಮಾಡಿಸಿಲ್ಲ. ವರ್ತಕರೇ ನೋಂದಣಿ ಲಾಭ ಮಾಡಿಕೊಂಡಿದ್ದಾರೆ. ಜೆಡಿಎಸ್ ಮುಖಂಡರ ಮನೆಗಳಲ್ಲಿ ನೋಂದಣಿ ನಡೆಸಲಾಗಿದೆ ಎಂದು ಆರೋಪಿಸಿ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮತ್ತು ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ ನೇತೃತ್ವದಲ್ಲಿ ಧರಣಿ ನೆಡಸಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ನೋಂದಣಿ ಕಾರ್ಯ ಹಳಿ ತಪ್ಪಲು ಶಾಸಕರು ಮತ್ತು ಅವರಣ್ಣ ಫೆಡರೇಷನ್ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ ಕಾರಣರಾಗಿದ್ದಾರೆ. 45 ದಿನಗಳು ನೋಂದಣಿಗೆ ಕಾಲಾವಕಾಶವಿದ್ದರೂ, ಕೇವಲ 4 ದಿನಕ್ಕೆ ನೋಂದಣಿ ಮುಗಿಯುತ್ತದೆ ಎಂದರೆ ಇದರಲ್ಲಿ ಯಾರ ಕೈವಾಡವಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದರು.
ಹಿರಿಸಾವೆ, ನುಗ್ಗೇಹಳ್ಳಿ, ಬಾಗೂರು ಸೇರಿ ಪಟ್ಟಣದಲ್ಲಿನ ಜೆಡಿಎಸ್ ಮುಖಂಡರ ಮನೆಗಳಲ್ಲಿ ತಮ್ಮ ಹಿಂಬಾಲಕರ ಮತ್ತು ಕೊಬ್ಬರಿ ವರ್ತಕರು ನೀಡಿದ ರೈತರ ಪಟ್ಟಿಯನ್ನು ನೋಂದಣಿ ಮಾಡಲಾಗಿದೆ. ಸರ್ಕಾರ ಸೂಕ್ತ ತನಿಖೆಗೊಳಪಡಿಸಬೇಕು. ಜಿಲ್ಲಾ ಮಂತ್ರಿಗಳ ಗಮನಕ್ಕೆ ತರಲಾಗುವುದು, ಜಿಲ್ಲಾಧಿಕಾರಿಗಳು ಎಸಿ ಕೊಠಡಿ ಬಿಟ್ಟು ಇಂತಹ ಹೀನಸ್ಥಿತಿ ನೋಡಬೇಕು ಎಂದು ಆಗ್ರಹಿಸಿದರು.
ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ನೋಂದಣಿ ವೇಳೆ ಸಿಸಿ ಕ್ಯಾಮರಾ ಅಳವಡಿಸುವಂತೆ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದ ಮಾತನ್ನು ಗಂಭೀರವಾಗಿ ಪರಿಗಣಿಸಿಲ್ಲ. ರೈತರಿಗೆ ದುರುಪಯೋಗ ಮಾಡುವವರಿಗೆ ಕ್ರಮ ಕೈಗೊಳ್ಳುತ್ತಿವೆ ಎಂದು ಶಾಸಕರೇ ದುರುಪಯೋಗಕ್ಕೆ ಕೈಜೋಡಿಸಿದ್ದಾರೆ. ಪ್ರತಿದಿನ 2 ಸಾವಿರ ರೈತರು ನೋಂದಣಿ ಆಗಲು ಹೇಗೆ ಸಾಧ್ಯ, ನೋಂದಣಿ ಆಗಿರುವ ಲಾಗಿನ್ ಪಡೆದು ಆಕ್ರಮ ಸಾಬೀತುಪಡಿಸುತ್ತೇವೆ.
ಸೋಮವಾರದಂದು ಡಿಸಿ ಭೇಟಿ ಮಾಡಿ, ಈಗ ಆಗಿರುವ ನೋಂದಣಿ ರದ್ದು ಮಾಡಿ, ನಿಜವಾದ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಆಗ್ರಹಿಸುತ್ತೇವೆ ಎಂದರು.
ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಮೋದಿ ಭೇಟಿ ಅರ್ಧ ಗಂಟೆಯಲ್ಲಿ ಸಿಗುತ್ತದೆ. ದಯಮಾಡಿ ಮೋದಿಗೆ ಮನವಿ ಮಾಡಿ ಹೆಚ್ಚುವರಿ ಖರೀದಿಗೆ ಆಗ್ರಹಿಸಿ, ಪ್ರತಿ ರೈತನಿಗೆ 10 ಕ್ವಿಂಟಾಲ್ ನಿಗದಿಗೊಳಿಸಿ ಖರೀದಿ ಪ್ರಮಾಣ ಹೆಚ್ಚಿಸಬೇಕು. ನೋಂದಣಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಜಿ.ಪ. ಮಾಜಿ ಸದಸ್ಯ ಶ್ರೇಯಸ್ಸು ಮಾತನಾಡಿ, ನಫೆಡ್ ಅನ್ನು ತಮ್ಮ ಲಾಭಕ್ಕಾಗಿ ಉಪಯೋಗಿಸಿಕೊಂಡಿದ್ದಾರೆ. ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ನೋಂದಣಿ ಮುಂದುವರಿಸಬೇಕು. ಈ ಕುರಿತಾಗಿ ಸಿಎಂ ಭೇಟಿ ಮಾಡಿ ಮನವಿ ಮಾಡುವುದಾಗಿ ಹೇಳಿದರು.
ಎಪಿಎಂಸಿ ಅಡಳಿತಾಧಿಕಾರಿ ವಿಜಯಲಕ್ಷ್ಮೀ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ಬಾಗೂರು ಮಂಜೇಗೌಡ, ಎಂ.ಶಂಕರ್, ಎ.ಕೆ.ಮಂಜೇಗೌಡ, ಎನ್.ಡಿ.ಕಿಶೋರ್, ಕಲ್ಕೆರೆ ಮೋಹನ್, ಕಲಸಿಂದ ಶಿವರಾಜ್, ಮೋಹನ್, ಸೇರಿ ಇತರರು ಇದ್ದರು.