ಧೂಳು-ಮಣ್ಣು ಮಿಶ್ರಿತ ರಾಗಿ ನೀಡಿದ್ದಕ್ಕೆ ಪಡಿತರ ಚೀಟಿದಾರರು ಕರಡಕೆರೆ ಗ್ರಾಮದ ನ್ಯಾಯಬೆಲೆ ಅಂಗಡಿ ಎದುರು ಆಕ್ರೋಶ ವ್ಯಕ್ತಪಡಿಸಿದರು. 
ಜಿಲ್ಲೆ

ಮಣ್ಣು ಮಿಶ್ರಿತ ರಾಗಿ ನೀಡಿದ್ದಕ್ಕೆ ಆಕ್ರೋಶ

ಅಭಿನಯ್ ಎಚ್.ಎಂ

ಕೆ.ಎಂ.ದೊಡ್ಡಿ: ಪಡಿತರದಲ್ಲಿ ಧೂಳು, ಮಣ್ಣು ಮಿಶ್ರಿತ ರಾಗಿ ನೀಡಿದ್ದಕ್ಕೆ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮೀಪದ ಕರಡಕೆರೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಲಾದ ರಾಗಿಯಲ್ಲಿ ಒಂದು ಕೆಜಿಗೆ 400 ಗ್ರಾಂನಷ್ಟು ಧೂಳು, ಮಣ್ಣು ಇದೆ ಎಂದು ಕಿಡಿಕಾರಿದರು.

ನ್ಯಾಯಬೆಲೆ ಅಂಗಡಿ ಮುಂದೆಯೇ ಧೂಳು, ಮಣ್ಣು ಮಿಶ್ರಿತ ರಾಗಿಯನ್ನು ಸೋಮವಾರ ಪ್ರದರ್ಶನ ಮಾಡಿದ ಗ್ರಾಮಸ್ಥರು, ಈ ರಾಗಿಯನ್ನು ಶಾಸಕರು, ಸಚಿವರು, ಮುಖ್ಯಮಂತ್ರಿಗಳ ಮನೆಗೆ ಕಳುಹಿಸಿ. ಅವರೇ ತಿನ್ನಲಿ ಎಂದು ಕಿಡಿಕಾರಿದರಲ್ಲದೆ, ಈ ಸಂಬಂಧ ನ್ಯಾಯಬೆಲೆ ಅಂಗಡಿ ಮಾಲೀಕರು, ಆಹಾರ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಉಢಾಪೆ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಈ ರಾಗಿಯನ್ನು ವಾಪಸ್ ಪಡೆದು ಗುಣಮಟ್ಟದ ರಾಗಿ ನೀಡಬೇಕು. ತಪ್ಪಿದಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆ ಅಧಿಕಾರಿ ಸಂಜಯ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ರಾಗಿಯಲ್ಲಿ ಮಣ್ಣು, ಧೂಳು ಇದ್ದರೂ ಸಹ ಈ ಬಗ್ಗೆ ಯಾವುದೇ ಕ್ರಮ ವಹಿಸದೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಗ್ರಾಮದ ಮಾದೇಗೌಡ ಕಿಡಿಕಾರಿದರು.

ಸ್ಥಳೀಯಾರದ ಟಿ.ಸಿ.ವಸಂತಾ, ನಾಗರತ್ನಮ್ಮ, ಜಯಲಕ್ಷ್ಮೀ, ಲೀಲಮ್ಮ, ಸಾಗರ್ ಕೆ.ಎನ್.ನಾಗರಾಜ್, ಮಾದೇಗೌಡ, ಮಂಗಳಮ್ಮ, ಪಾಪಣ್ಣಿ, ಅನಿಲ್ ಕುಮಾರ್ ಮತ್ತಿತರರಿದ್ದರು.