ಜಿಲ್ಲೆ

ಪಾಲಿಕೆ ಸಭೆಯಲ್ಲಿ ಹದಗೆಟ್ಟ ಸ್ವಚ್ಛತೆ ವ್ಯವಸ್ಥೆಗೆ ಆಕ್ರೋಶ

ಹುಬ್ಬಳ್ಳಿ: ಅವಳಿ ನಗರದ ಸ್ವಚ್ಛತೆ ವ್ಯವಸ್ಥೆ ಹದಗೆಟ್ಟು ಹೋಗಿದೆಯೆಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರು ಸಾಮಾನ್ಯ ಸಭೆಯಲ್ಲಿ ಗುರುವಾರ ಪಕ್ಷಾತೀತವಾಗಿ ಘನತ್ಯಾಜ್ಯ ವಿಲೇವಾರಿ (ಎಸ್​ಡಬ್ಲ್ಯುಎಂ) ವಿಭಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪಾಲಿಕೆ ಆಯುಕ್ತರು ಫೀಲ್ಡ್​ಗೆ ಇಳಿಯಬೇಕೆಂದು ಆಗ್ರಹಿಸಿದರು.

ಹಳೇ ಹುಬ್ಬಳ್ಳಿ, ನವನಗರ, ಗೋಕುಲ, ತಾರಿಹಾಳ, ಇತ್ಯಾದಿ ಕಡೆ ಮನೆ ಮನೆಯಿಂದ ಕಸ ಸಂಗ್ರಹಿಸಲು ಪೌರ ಕಾರ್ವಿುಕರು ನಿಯಮಿತವಾಗಿ ಬರುತ್ತಿಲ್ಲ. ರಸ್ತೆ ಬದಿ, ಖಾಲಿ ಜಾಗದಲ್ಲಿ ಕಸ ಎಸೆಯುವುದು ಸಾರ್ವಜನಿಕರಿಗೆ ಅನಿವಾರ್ಯವಾಗಿದೆ. ಬೆಳಗ್ಗೆ 10 ಗಂಟೆಯ ಬಳಿಕ ಪೌರ ಕಾರ್ವಿುಕರು ವಾರ್ಡ್​ನಲ್ಲಿ ಕಾಣಿಸುವುದಿಲ್ಲ. ಸಾರ್ವಜನಿಕರು ದೂರು ನೀಡಿದರೆ ಸ್ಪಂದಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಇದನ್ನೆಲ್ಲ ನೋಡಿಕೊಳ್ಳಬೇಕಾದ ಎಸ್​ಡಬ್ಲ್ಯುಎಂ ವಿಭಾಗದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಎಸ್​ಡಬ್ಲ್ಯುಎಂ ವಿಭಾಗ ಇಇ ಸಂತೋಷ ಯರಂಗಳಿ ಅವರನ್ನು ಬದಲಾಯಿಸಬೇಕೆಂದು ಆಗ್ರಹಿಸಿದರು.

ಬಿಜೆಪಿಯ ರಾಧಾಬಾಯಿ ಸಫಾರೆ ಮಾತನಾಡಿ, ವಲಯ ಕಚೇರಿ 10ರ ವ್ಯಾಪ್ತಿಯಲ್ಲಿ 11ವಾರ್ಡ್ ಗಳು ಬರುತ್ತಿದ್ದು, ಸ್ವಚ್ಛತೆ ಹದಗೆಟ್ಟು ಹೋಗಿದೆ. ಪರಿಸ್ಥಿತಿ ಸುಧಾರಿಸದಿದ್ದರೆ ಮುಂದಿನ ಸಾಮಾನ್ಯ ಸಭೆಗೆ ಜನರನ್ನು ಕರೆ ತರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿಯ ಮಲ್ಲಿಕಾರ್ಜುನ ಗುಂಡೂರ ಮಾತನಾಡಿ, ಎಸ್​ಡಬ್ಲ್ಯುಎಂ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ ಯರಂಗಳಿ ಅವರನ್ನು ತಕ್ಷಣ ಬದಲಾಯಿಸಿ, ಬೇರೆ ಕಡೆ ಕಳುಹಿಸಿ. ಅವರಿದ್ದರೆ, ಹು-ಧಾ ಅವಳಿ ನಗರ ಸುಧಾರಿಸುವುದಿಲ್ಲ. ಕಸ ಸಂಗ್ರಹಕ್ಕೆ ಟಿಪ್ಪರ್ ಕೊಡಿ ಎಂದು ಹೇಳಿದರೆ ಟ್ರ್ಯಾಕ್ಟರ್ ಕೊಟ್ಟಿದ್ದಾರೆ ಎಂದರು.

ಕಾಂಗ್ರೆಸ್ಸಿನ ಕವಿತಾ ಕಬ್ಬೇರ ಮಾತನಾಡಿ, ನಾನು ಕಳೆದ ಒಂದು ವರ್ಷ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯೆಯಾಗಿದೆ. 1 ವರ್ಷದ ಅವಧಿಯಲ್ಲಿ ಸ್ಥಾಯಿ ಸಮಿತಿಯ ಯಾವ ಸಭೆಗೂ ಇಇ ಸಂತೋಷ ಯರಂಗಳಿ ಹಾಜರಾಗಿಲ್ಲ. ನನ್ನ ವಾರ್ಡ್​ನಲ್ಲಿ 23 ಪೌರ ಕಾರ್ವಿುಕರು ಕೆಲಸ ನಿರ್ವಹಿಸಬೇಕು. ಆದರೆ, 15 ಜನ ಮಾತ್ರ ಹಾಜರಿರುತ್ತಾರೆ. ಫೋನ್ ಕರೆ ಮಾಡಿದರೂ ಸರಿಯಾಗಿ ಸ್ಪಂದಿಸುವುದಿಲ್ಲ. ಪಾಲಿಕೆ ಸದಸ್ಯರಿಗೂ ಕಿಮ್ಮತ್ತು ನೀಡುವುದಿಲ್ಲ ಎಂದು ದೂರಿದರು.

ವಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲಾ ಮಂಡಿಸಿದ ಗಮನ ಸೆಳೆಯುವ ಸೂಚನೆ ಮೇರೆಗೆ ಈ ವಿಷಯ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಉತ್ತರಿಸಿ, ಮನೆ ಮನೆಯಿಂದ ನಿತ್ಯವೂ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಬಿಗುಗೊಳಿಸುವುತ್ತೇವೆ. ಕಾಂಪ್ಯಾಕ್ಟರ್ ಸ್ಟೇಷನ್​ನಲ್ಲಿಯ ಯಂತ್ರಗಳ ದುರಸ್ತಿಗೆ ಬೇರೆ ರಾಜ್ಯದಿಂದ ಪರಿಣಿತರನ್ನು ಕರೆಯಿಸಬೇಕಾಗಿ ಬಂದಿದೆ. ಹಾಗಾಗಿ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು.