ಲಕ್ಷ್ಮೇಶ್ವರ: ಪಟ್ಟಣದ ಜನತೆಗೆ 15 ದಿನಗಳಾದರೂ ಕುಡಿಯುವ ನೀರು ಸರಬರಾಜು ಮಾಡದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪುರಸಭೆ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಪುರಸಭೆಯ ನಿರ್ಲಕ್ಷ್ಯದಿಂದ ನೀರು ಪೂರೈಕೆಯಲ್ಲಿ ಅಸ್ತವ್ಯಸ್ತವಾಗುತ್ತಿದೆ. ಈ ಬಗ್ಗೆ ವಿಚಾರಿಸಿದರೆ ಇಲ್ಲಸಲ್ಲದ ಕಾರಣ ಹೇಳುತ್ತಿದ್ದಾರೆ. ಮಳೆಗಾಲದಲ್ಲೇ ಹೀಗಾದರೆ ಮುಂದೆ ಹೇಗೆ ಎಂದು ಪ್ರಶ್ನಿಸಿದರು.
ಪುರಸಭೆಯ ಮುಕ್ತಿವಾಹಿನಿ ವಾಹನ ಸಂಪೂರ್ಣ ಹಾಳಾಗಿದೆ. ಚರಂಡಿ ಸ್ವಚ್ಛತೆ, ರಸ್ತೆ ಕಾಮಗಾರಿ ಅವ್ಯವಸ್ಥೆ ಸೇರಿ ಅನೇಕ ತೊಂದರೆಗಳು ಪಟ್ಟಣದಲ್ಲಿವೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಪ್ರತಿಕ್ರಿಯಿಸಿ, ತುಂಗಭದ್ರಾ ನದಿಯಿಂದ ಪಟ್ಟಣಕ್ಕೆ ನೀರು ಪೂರೈಕೆಯಾಗುವ ಪೈಪ್‌ಲೈನ್ 20 ವರ್ಷಗಳಷ್ಟು ಹಳೆಯದಾಗಿದ್ದು ನಿತ್ಯ ಒಂದಿಲ್ಲೊಂದು ಕಡೆ ಒಡೆಯುತ್ತಿದೆ. ಸೋರಿಕೆಯಿಂದ ಸಾಕಷ್ಟು ನೀರು ಪೋಲಾಗುತ್ತಿದೆ. ಆದಾಗ್ಯೂ ನೀರಿನ ಸಮಸ್ಯೆ ತಲೆದೋರದಂತೆ ನಿರ್ವಹಿಸಲಾಗುತ್ತಿದೆ. ಹೊಸ ಪೈಪ್‌ಲೈನ್ ಅಳವಡಿಕೆಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಕೆಯುಡಬ್ಲುೃಎಸ್‌ಗೆ ಕಳುಹಿಸಲಾಗಿದೆ ಎಂದರು.
ಕರವೇ ಸಂಘಟನಾ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ, ತಾಲೂಕು ಅಧ್ಯಕ್ಷ ಲೋಕೇಶ ಸುತಾರ, ಪ್ರಕಾಶ ಕೊಂಚಿಗೇರಿಮಠ, ಪ್ರವೀಣ್ ಗಾಣಿಗೇರ, ಆಸ್ಪಕ್ ಬಾಗೋಡಿ, ಪ್ರವೀಣ ಗೌರಿ, ಬಸವರಾಜ ಮಡಿವಾಳ, ಶಂಕರಗೌಡ ಪಾಟೀಲ, ಹನುಮಂತಪ್ಪ ದತ್ತರಗಿ, ವಾಸು ಗೋಸಾವಿ, ಮೈನು ಮನಿಯಾರ್, ದಾವೂದ್ ಕಾರಡಗಿ, ಬಸವರಾಜ ಮಲ್ಲೂರು, ಪ್ರಶಾಂತ ಹಂಜಗಿ, ಪುರಸಭೆ ಸದಸ್ಯ ಬಸವರಾಜ ಓದುನವರ ಇದ್ದರು.